ವಿಶ್ವಸಂಸ್ಥೆ: ಇಸ್ರೇಲ್ ಮತ್ತು ಹಮಾಸ್ ಮಧ್ಯೆ ಕದನ ವಿರಾಮ ಜಾರಿಯಾದ ನಂತರ ಈಗ ವಿಶ್ವಸಂಸ್ಥೆ ಮತ್ತು ಅದರ ಸಹವರ್ತಿ ಸಂಘಟನೆಗಳ ಕಾರ್ಯಕರ್ತರು ಗಾಜಾ ಜನರಿಗೆ ಅಗತ್ಯ ಪರಿಹಾರ ಸಾಮಗ್ರಿಗಳನ್ನು ತಲುಪಿಸಲು ಯುದ್ಧೋಪಾದಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಇದಲ್ಲದೆ ಮನೆ ಮಠ ಕಳೆದುಕೊಂಡ ನಿರಾಶ್ರಿತರಾಗಿರುವ ಗಾಜಾ ಜನತೆಗಾಗಿರುವ ಹಾನಿಯ ಬಗ್ಗೆಯೂ ಕಾರ್ಯಕರ್ತರು ಲೆಕ್ಕ ಹಾಕುತ್ತಿದ್ದಾರೆ.
ಗಾಜಾ ಪಟ್ಟಿಯಾದ್ಯಂತದ ಜನರಿಗೆ ನೀಡಲಾಗುತ್ತಿರುವ ಪರಿಹಾರ ಸಾಮಗ್ರಿಗಳ ಪ್ರಮಾಣವನ್ನು ಹೆಚ್ಚಿಸುತ್ತಿದ್ದೇವೆ. ಸರಕು ಶೇಖರಣಾ ಸಾಮರ್ಥ್ಯಗಳನ್ನು ಕೂಡ ಹೆಚ್ಚಿಸಲಾಗುತ್ತಿದ್ದು, ಅಗತ್ಯ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಆರೋಗ್ಯ ಸೇವೆಗಳನ್ನು ಸಹ ಸುಧಾರಿಸಲಾಗುತ್ತಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (ಒಸಿಎಚ್ಎ) ಬುಧವಾರ ತಿಳಿಸಿದೆ. ವಿಶ್ವಸಂಸ್ಥೆಯ ಕಾರ್ಯಕರ್ತರು ಆಹಾರದ ಪಾರ್ಸೆಲ್ಗಳು ಮತ್ತು ಹಿಟ್ಟನ್ನು ವಿತರಿಸುತ್ತಿದ್ದಾರೆ ಹಾಗೂ ಬೇಕರಿಗಳನ್ನು ಪುನಾರಂಭಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಗಾಜಾ ಜನತೆಗೆ ಸಹಾಯ ಮಾಡುವ ವಿಶ್ವಸಂಸ್ಥೆಯ ಪ್ರಯತ್ನಗಳ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ಉಪ ವಕ್ತಾರ ಫರ್ಹಾನ್ ಹಕ್ ಅವರು ದಿನನಿತ್ಯದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.
"ಯುದ್ಧ ಪೀಡಿತ ಹಾಗೂ ಯುದ್ಧ ಮುಗಿದ ಸಂದರ್ಭಗಳಲ್ಲಿ ಆ ಪ್ರದೇಶಗಳಲ್ಲಿನ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸುವುದು, ನೆಲಬಾಂಬ್ಗಳನ್ನು ತೆಗೆದು ಹಾಕುವುದು, ಇನ್ನೂ ಸ್ಫೋಟಗೊಳ್ಳದ ಶಸ್ತ್ರಾಸ್ತ್ರಗಳನ್ನು ಪತ್ತೆ ಮಾಡಿ ಅವುಗಳನ್ನು ತೆರವುಗೊಳಿಸುವುದು ಮತ್ತು ಪುನರ್ ನಿರ್ಮಾಣ ಕಾರ್ಯದಲ್ಲಿ ಸಹಕರಿಸುವುದು ವಿಶ್ವಸಂಸ್ಥೆಯು ಸಾಮಾನ್ಯವಾಗಿ ಮಾಡುವ ಕೆಲಸಗಳಾಗಿವೆ" ಎಂದು ಹಕ್ ತಿಳಿಸಿದರು.