ಕರ್ನಾಟಕ

karnataka

ETV Bharat / health

ಮೆಕ್ಸಿಕೋದಲ್ಲಿ ಹಕ್ಕಿಜ್ವರ ಪೀಡಿತ ವ್ಯಕ್ತಿ ಸಾವು: ವಿಶ್ವದಲ್ಲೇ ಮೊದಲ ಪ್ರಕರಣ - ಏನಿದರ ಲಕ್ಷಣಗಳು, ಯಾವೆಲ್ಲ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು? - Bird Flu Human Death - BIRD FLU HUMAN DEATH

ಮೆಕ್ಸಿಕೋದಲ್ಲಿ ಹಕ್ಕಿಜ್ವರ ಪೀಡಿತ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಇದು ವಿಶ್ವದಲ್ಲೇ ಮೊದಲ ಪ್ರಕರಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಇದನ್ನು ದೃಢಪಡಿಸಿದೆ.

ಮೆಕ್ಸಿಕೋದಲ್ಲಿ ಹಕ್ಕಿಜ್ವರ ಪೀಡಿತ ವ್ಯಕ್ತಿ ಸಾವು
ಮೆಕ್ಸಿಕೋದಲ್ಲಿ ಹಕ್ಕಿಜ್ವರ ಪೀಡಿತ ವ್ಯಕ್ತಿ ಸಾವು (ETV Bharat)

By ETV Bharat Karnataka Team

Published : Jun 6, 2024, 1:59 PM IST

ವಾಷಿಂಗ್ಟನ್:ವಿಶ್ವವನ್ನೇ ಕಾಡಿದ್ದ ಕೊರೊನಾದಿಂದ ಚೇತರಿಸಿಕೊಂಡ ವಿಶ್ವಕ್ಕೆ ಹಕ್ಕಿಜ್ವರ ಬೆದರಿಕೆ ಉಂಟು ಮಾಡಿದೆ. ಆತಂಕದ ವಿಚಾರವೆಂದರೆ, ಮಾನವರಲ್ಲಿ ಹಿಂದೆಂದೂ ಕಂಡು ಬಂದಿರದ H5N2 ಎಂಬ ಹಕ್ಕಿ ಜ್ವರದಿಂದ ಮೆಕ್ಸಿಕೋದಲ್ಲಿ ವ್ಯಕ್ತಿಯೊಬ್ಬರ ಸಾವು ಸಂಭವಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ತಿಳಿಸಿದೆ. ಕೋಳಿಗಳಲ್ಲಿ H5N2 ಪತ್ತೆಯಾಗಿದ್ದರೂ, ಮನುಷ್ಯ ಹೇಗೆ ಸೋಂಕಿಗೆ ಒಳಗಾದನು ಎಂಬುದು ಸ್ಪಷ್ಟವಾಗಿಲ್ಲ ಎಂದು ಡಬ್ಲ್ಯೂಎಚ್​ಒ ಹೇಳಿದೆ.

ಹಕ್ಕಿಜ್ವರದ ವಿಧಗಳಲ್ಲಿ ಒಂದಾದ H5N2ಗೆ ವ್ಯಕ್ತಿಯೊಬ್ಬ ಸೋಂಕಿತನಾಗಿದ್ದು ಮೇ 23 ರಂದು ಪತ್ತೆಯಾಗಿತ್ತು. ಮೆಕ್ಸಿಕೋ ಇಂಟರ್ನ್ಯಾಷನಲ್ ಹೆಲ್ತ್ ರೆಗ್ಯುಲೇಷನ್ಸ್ (ಐಎಚ್​ಆರ್​), ನ್ಯಾಷನಲ್ ಫೋಕಲ್ ಪಾಯಿಂಟ್ (ಎನ್​ಎಫ್​ಪಿ) ಮೆಕ್ಸಿಕೋ ರಾಜ್ಯದಲ್ಲಿನ ವ್ಯಕ್ತಿಯೊಬ್ಬರಲ್ಲಿ ಇದನ್ನು ಗುರುತಿಸಿದ್ದರು. ಇದು ದೇಶದಲ್ಲಿ ಈ ಪ್ರಕಾರದ ವೈರಸ್ ಸೋಂಕಿನ ಮೊದಲ ದೃಢೀಕೃತ ಮಾನವ ಪ್ರಕರಣವಾಗಿದೆ.

ಕೋಳಿಗಳಲ್ಲಿ ಕಂಡುಬಂದಿದ್ದ ಸೋಂಕು ಮಾನವನಿಗೆ ತಾಕಿದ್ದು ಹೇಗೆ ಎಂಬುದು ಇನ್ನೂ ಪತ್ತೆಯಾಗಿಲ್ಲ. ಆದಾಗ್ಯೂ ಈ ವೈರಸ್​ನಿಂದ ಉಂಟಾಗುವ ಮಾನವ ಹಾನಿ ಕಡಿಮೆ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಅಭಿಪ್ರಾಯ.

ಹಕ್ಕಿಜ್ವರ ಸೋಂಕಿತ ವ್ಯಕ್ತಿ ಕೋಳಿ ಮತ್ತು ಇತರ ಪ್ರಾಣಿಗಳ ಜೊತೆಗೆ ಸಂಪರ್ಕ ಹೊಂದಿದ ಇತಿಹಾಸವಿಲ್ಲ. ಆದಾಗ್ಯೂ ಆತ ಮೂರು ವಾರಗಳ ಕಾಲ ಮೆಕ್ಸಿಕೋ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದ. ಏಪ್ರಿಲ್ 17 ರಂದು ಆತನಲ್ಲಿ ಜ್ವರ, ಉಸಿರಾಟದ ತೊಂದರೆ, ಅತಿಸಾರ, ವಾಕರಿಕೆ ಉಂಟಾಗಿದೆ. ಏಪ್ರಿಲ್ 24 ರಂದು ಆತನನ್ನು ಆಸ್ಪತ್ರೆಗೆ ದಾಕಲು ಮಾಡಲಾಗಿದೆ. ಅದೇ ದಿನ ಅವರು ತೀವ್ರ ಅಸ್ವಸ್ಥತೆಯಿಂದ ಸಾವಿಗೀಡಾಗಿದ್ದಾರೆ.

ಏಪ್ರಿಲ್ 24 ರಂದು ಸಂಗ್ರಹಿಸಿದ ಮಾದರಿಗಳಲ್ಲಿ ಆರ್​ಟಿಪಿಸಿಆರ್​ ವರದಿಯಲ್ಲಿ ಹಕ್ಕಿಜ್ವರ ಇರುವುದು ದೃಢಪಟ್ಟಿದೆ. ಮೇ 8 ರಂದು ಮಾದರಿಯನ್ನು ಐಎನ್‌ಇಆರ್‌ನ ಸಾಂಕ್ರಾಮಿಕ ರೋಗಗಳ ಸಂಶೋಧನಾ ಕೇಂದ್ರದ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿದೆ. ಇದು ಹಕ್ಕಿಜ್ವರದ ಇನ್​ಫ್ಲುಯೆನ್ಸ್​ ಎ (H5N2) ಎಂದು ಕರೆಯಲಾಗುವ ವೈರಸ್​ ಆಗಿದೆ ಎಂದು ಗೊತ್ತಾಗಿದೆ.

ಸಾವನ್ನಪ್ಪಿದವರ ಸಂಪರ್ಕಕ್ಕೆ ಬಂದ 17 ಜನರನ್ನು ಗುರುತಿಸಿ ಅವರನ್ನು ಪ್ರತ್ಯೇಕಿಸಲಾಗಿದೆ. ಅವರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಾಥಮಿಕ ವರದಿಯಲ್ಲಿ ನಕಾರಾತ್ಮಕವಾಗಿದ್ದರೂ, ಅಂತಿಮ ವರದಿಗಾಗಿ ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಣಿ ವೈರಸ್​ ಮಾನವನಿಗೆ ಮಾರಕವೇ?:ಹಕ್ಕಿಜ್ವರದಂತಹ ಪ್ರಾಣಿ ವೈರಸ್​​ಗಳು ಮಾನವನಿಗೆ ತಗುಲುವ ಸಾಧ್ಯತೆಗಳು ಹೆಚ್ಚಿರುತ್ತವೆ. ಮಾನವನಿಂದ ಮಾನವನಿಗೆ ಹಬ್ಬುವ ಬಗ್ಗೆ ದೃಢಪಟ್ಟಿಲ್ಲ. ಪ್ರಾಣಿ, ಪಕ್ಷಿಗಳೊಂದಿಗೆ ನೇರ ಸಂಪರ್ಕ ಹೊಂದಿದಾಗ ಮನುಷ್ಯರಿಗೆ ಸೋಂಕು ಹರಡುತ್ತದೆ.

ರೋಗದ ಲಕ್ಷಣಗಳೇನು?:ಕೆಮ್ಮು, ಉಸಿರಾಟದಲ್ಲಿ ತೊಂದರೆ, ತೀವ್ರ ಜ್ವರ, ಸ್ನಾಯುಗಳಲ್ಲಿ ನೋವು, ಮೂಗು ಸೋರುವಿಕೆ, ಗಂಟಲಿನ ಊತ, ಮೂಗು ಮತ್ತು ಒಸಡಿನಲ್ಲಿ ರಕ್ತ ಸೋರುವಿಕೆ, ಕೆಲವರಲ್ಲಿ ವಾಕರಿಕೆ, ವಾಂತಿ ಮತ್ತು ಬೇಧಿ ಉಂಟಾಗುತ್ತದೆ. ಇನ್ನು ಕೆಲವರಲ್ಲಿ ಕಣ್ಣು ಕೆಂಪಾಗುತ್ತದೆ. 48 ಗಂಟೆಗಳಲ್ಲಿ ಚಿಕಿತ್ಸೆ ಪಡೆದುಕೊಂಡರೆ ಉತ್ತಮ.

ಸೋಂಕು ತಡೆಯುವ ವಿಧಾನ

  • ಮಾನವ- ಪ್ರಾಣಿ ಸಂಪರ್ಕದ ಬಗ್ಗೆ ಎಚ್ಚರ ವಹಿಸಿ
  • ಸೋಂಕಿನ ಬಗ್ಗೆ ತೀವ್ರ ಎಚ್ಚರಿಕೆ ವಹಿಸಬೇಕು. ಆರಂಭಿಕ ಹಂತದಲ್ಲೇ ಗುರುತಿಸಿ ಚಿಕಿತ್ಸೆಗೆ ಒಳಗಾಗಬೇಕು
  • ತೆರೆದ ಮಾರುಕಟ್ಟೆ ಅಥವಾ ಹಕ್ಕಿಗಳೂ ಹೆಚ್ಚಿರುವಂತಹ ಮಾರುಕಟ್ಟೆಯಿಂದ ದೂರವಿರಿ
  • ಸರಿಯಾಗಿ ಬೇಯಿಸದೇ ಇರುವ ಕೋಳಿ ಅಥವಾ ಬಾತುಕೋಳಿ ತಿನ್ನಬೇಡಿ
  • ಹಸಿ ಮೊಟ್ಟೆ ಸೇವಿಸಬೇಡಿ
  • ಪಕ್ಷಿ ಜ್ವರ ಹರಡುವಿಕೆಯ ಲಕ್ಷಣಗಳು ಮತ್ತು ರೋಗಲಕ್ಷಣಗಳನ್ನು ಸರ್ಕಾರವು ಗಮನಿಸಿದ ಕೂಡಲೇ, ಅವರು ಆ ಪ್ರದೇಶವನ್ನು ಪ್ರತ್ಯೇಕಿಸಬೇಕು.
  • ಸೋಂಕಿತ ಪಕ್ಷಿಗಳನ್ನು ಹರಣ ಮಾಡಿ, ಇತರ ಆರೋಗ್ಯವಂತ ಪಕ್ಷಿಗಳನ್ನು ಪ್ರತ್ಯೇಕಿಸಬೇಕು
  • ಹಕ್ಕಿಗಳ ಸಂಪರ್ಕಿತ ವ್ಯಕ್ತಿ ಜ್ವರದ ರೋಗ ಲಕ್ಷಣ ಹೊಂದಿದ್ದರೆ ಆತನನ್ನು ಕ್ವಾರಂಟೈನ್ ಮಾಡುವುದು
  • ಪಕ್ಷಿಗಳಿಗೆ ಕಾಲ ಕಾಲಕ್ಕೆ ಲಸಿಕೆ ಲಭ್ಯವಿದೆ. ಅದನ್ನು ನಿಯಮಿತವಾಗಿ ಹಾಕಿಸಬೇಕು.
  • ಹಕ್ಕಿಜ್ವರ ಚಿಕಿತ್ಸೆಗಾಗಿ ಪ್ರಸ್ತುತ ನಾಲ್ಕು ಔಷಧಿಗಳು ಲಭ್ಯವಿದೆ. ಅವುಗಳಲ್ಲಿ ಒಸೆಲ್ಟಾಮಿವಿರ್, ಜನಾಮಿವಿರ್, ಪೆರಾಮಿವಿರ್, ಬಲೋಕ್ಸಾವಿರ್ ಮಾರ್ಬಾಕ್ಸಿಲ್ ಅನ್ನು ಪಡೆದುಕೊಳ್ಳಬೇಕು.

ನೀವು ಮೇಲೆ ತಿಳಿಸಿದ ರೋಗಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ನೀವಾಗಿಯೇ ಮನೆ ಔಷಧಿ ಸೇವಿಸಬೇಡಿ. ಈ ಔಧಿಗಳನ್ನು ಹಂದಿ ಜ್ವರ ಚಿಕಿತ್ಸೆಗಾಗಿ ಸಹ ಬಳಸಬಹುದು.

ಇದನ್ನೂ ಓದಿ:ಕೇರಳದಲ್ಲಿ ಮತ್ತೆ ಹಕ್ಕಿಜ್ವರ ಪತ್ತೆ: ಬಾತುಕೋಳಿಗಳಲ್ಲಿ H5N1 ವೈರಸ್​ ದೃಢ - Bird Flu

ABOUT THE AUTHOR

...view details