ಮಾರ್ಚ್ 20. ಈ ದಿನದ ವಿಶೇಷತೆ ಗೊತ್ತೇ?. ಹೌದು. ಪ್ರತಿಯೊಬ್ಬ ವ್ಯಕ್ತಿಗೂ ಆತನ ಮೊಗದ ನಗು ಬಹಳ ಮುಖ್ಯ. ಆದರೆ ನಮ್ಮ ಬಾಯಿ, ಹಲ್ಲುಗಳು ಆರೋಗ್ಯವಾಗಿದ್ದರೆ ಮಾತ್ರ ಸುಂದರವಾದ ನಗು ಹೊರಹೊಮ್ಮಲು ಸಾಧ್ಯ. ಎಷ್ಟೋ ಜನರಿಗೆ ತಮ್ಮ ಬಾಯಿ, ಹಲ್ಲಿನ ಸಮಸ್ಯೆಗಳು ಉಲ್ಭಣಗೊಳ್ಳುವವರೆಗೂ ಅದರ ಕಾಳಜಿ ಎಷ್ಟು ಮುಖ್ಯ ಎಂಬುದರ ಬಗ್ಗೆ ಅರಿವೇ ಇರದು. ಹೀಗಾಗಿ ಬಾಯಿಯ ಆರೋಗ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮಾರ್ಚ್ 20ರ ದಿನವನ್ನು ಇಡೀ ಪ್ರಪಂಚವೇ'ವಿಶ್ವ ಬಾಯಿ ಆರೋಗ್ಯ ದಿನ'ವನ್ನಾಗಿ ಆಚರಿಸುತ್ತದೆ.
ವಿಶ್ವ ಬಾಯಿಯ ಆರೋಗ್ಯ ದಿನ- ಒಂದಿಷ್ಟು ಇತಿಹಾಸ:ಈ ದಿನವನ್ನು ಮೊದಲ ಬಾರಿಗೆ 2007 ಸೆಪ್ಟೆಂಬರ್ 12ರಂದು ವರ್ಲ್ಡ್ ಡೆಂಟಲ್ ಫೆಡರೇಶನ್ (FDI) ಸಂಸ್ಥಾಪಕ ಡಾ.ಚಾರ್ಲ್ಸ್ ಗೊಡಾನ್ ಅವರ ಜನ್ಮದಿನದಂದು ಆಚರಿಸಲಾಯಿತು. ಅಧಿಕೃತವಾಗಿ 2013ರಲ್ಲಿ ಮಾರ್ಚ್ 20 ಅನ್ನು ಬಾಯಿಯ ಆರೋಗ್ಯ ಮತ್ತು ನೈರ್ಮಲ್ಯದ ಪ್ರಾಮುಖ್ಯತೆಯ ಕುರಿತು ಜಾಗತಿಕವಾಗಿ ಜಾಗೃತಿ ಮೂಡಿಸಲು ವಿಶ್ವ ಬಾಯಿಯ ಆರೋಗ್ಯ ದಿನವೆಂದು ಘೋಷಣೆ ಮಾಡಲಾಯಿತು.
"A Happy Mouth is a Happy Body": 'ಹ್ಯಾಪಿ ಮೌತ್ ಈಸ್ ಹ್ಯಾಪಿ ಬಾಡಿ" ಎಂಬ ಥೀಮ್ ಅನ್ನು 2024 ಮತ್ತು 2026ರವರೆಗೆ ನೀಡಲಾಗಿದೆ. ಹಲ್ಲುಗಳು ಆರೋಗ್ಯವಾಗಿದ್ದರೆ ದೇಹವೂ ಆರೋಗ್ಯವಾಗಿರುತ್ತದೆ ಎಂಬುದು ಇದರರ್ಥ.
ಹಲ್ಲಿನ ಬಾಧೆಗಳನ್ನು ತಡೆಗಟ್ಟುವುದು ಹೇಗೆ?: ನಿಯಮಿತವಾಗಿ ದಿನಕ್ಕೆ 2 ಬಾರಿ ಹಲ್ಲುಜ್ಜುವುದು, ಆಹಾರ ಸೇವನೆಯ ಬಳಿಕ ಹಲ್ಲುಗಳ ಸಂಧಿ ಸಂಧಿಯನ್ನು ಸ್ವಚ್ಛಗೊಳಿಸುವಂಥ ಅಭ್ಯಾಸಗಳನ್ನು ಬೆಳೆಸಿಕೊಂಡಿದ್ದರೆ ಹಲ್ಲು ಕುಳಿಗಳು, ಒಸಡು ಕಾಯಿಲೆ ಮತ್ತು ಕೆಟ್ಟ ವಾಸನೆಯಂತಹ ಸಾಮಾನ್ಯ ಬಾಯಿಯ ಒಳ ಸಮಸ್ಯೆಗಳನ್ನು ತಡೆಯಬಹುದು. ಮೊದಲೇ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ನೀವು ಭವಿಷ್ಯದಲ್ಲಿ ಇವುಗಳಿಗಾಗಿ ಮಾಡುವ ದುಬಾರಿ ವೆಚ್ಚ ತಪ್ಪಿಸಬಹುದು.