ಕರ್ನಾಟಕ

karnataka

ಜಗತ್ತಿನಲ್ಲೇ ತಲಸ್ಸೇಮಿಯಾ ರಾಜಧಾನಿಯಾದ ಭಾರತ: ಕಾರಣ ಇದು! - Major Reasons For Thalassemia

ಆನುವಂಶಿಕ ರಕ್ತದ ಸಮಸ್ಯೆಗಳಿಂದ ತಲಸ್ಸೇಮಿಯಾ ಖಾಯಿಲೆ ಪೋಷಕರಿಂದ ಮಕ್ಕಳಿಗೆ ಬರುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.

By ETV Bharat Karnataka Team

Published : May 8, 2024, 2:08 PM IST

Published : May 8, 2024, 2:08 PM IST

major reasons why India has the highest number of thalassemia in the world
major reasons why India has the highest number of thalassemia in the world (ಫೋಟೋ ಕೃಪೆ: ಐಎಎನ್​ಎಸ್​)

ನವದೆಹಲಿ: ರಕ್ತಹೀನತೆಗೆ ಕಾರಣವಾಗುವ ತಲಸ್ಸೇಮಿಯಾ ಪ್ರಕರಣಗಳು ಜಗತ್ತಿನಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾರತದಲ್ಲಿ ಕಂಡುಬರುತ್ತಿವೆ. ಅರಿವಿನ ಕೊರತೆ, ಆನುವಂಶಿಕ ಖಾಯಿಲೆಗೆ ಸಮಾಲೋಚನೆಯ ಕೊರತೆ ಹಾಗೂ ಸಾಂಪ್ರದಾಯಿಕ ನಂಬಿಕೆ ವ್ಯವಸ್ಥೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ.

ಮೇ 8ರಂದು ವಿಶ್ವ ತಲಸ್ಸೇಮಿಯಾ ದಿನಾಚರಿಸುವ ಮೂಲಕ ಈ ಕುರಿತು ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. ಇಡೀ ವಿಶ್ವದಲ್ಲಿ ದಾಖಲಾಗುವ ತಲಸ್ಸೇಮಿಯಾ ಖಾಯಿಲೆಯ ಪೈಕಿ ಪ್ರತೀ 8ರಲ್ಲಿ ಒಂದು ಪ್ರಕರಣ ಭಾರತದಲ್ಲಿ ದಾಖಲಾಗುತ್ತಿದೆ. ವರ್ಷದಲ್ಲಿ 10ರಿಂದ 20 ಸಾವಿರ ಮಕ್ಕಳು ಭಾರತದಲ್ಲಿ ಈ ಸಮಸ್ಯೆ ಹೊಂದಿರುವುದು ಕಂಡುಬಂದಿದೆ.

ಭಾರತ ತಲಸ್ಸೇಮಿಯಾ ರಾಜಧಾನಿಯಾಗುವಲ್ಲಿ ಕೆಲವು ಆಂತರಿಕ ಸಂಕೀರ್ಣ ಅಂಶಗಳು ಪ್ರಮುಖ ಪಾತ್ರ ಹೊಂದಿವೆ. ಆನುವಂಶಿಕತೆ, ನಿಕಟ ಸಂಬಂಧಿಗಳಲ್ಲಿ ಮದುವೆ ಮತ್ತು ಈ ಸಮಸ್ಯೆ ಇರುವಿಕೆಯ ಕುರಿತು ಅರಿವಿನ ಕೊರತೆ ಇವುಗಳಲ್ಲಿ ಪ್ರಮುಖವಾಗಿವೆ. ಭಾರತದ ಜನಸಂಖ್ಯೆಯಲ್ಲಿ ಈ ಪ್ರಕರಣಗಳ ಏರಿಕೆ ಕಂಡುಬಂದರೂ ಇವುಗಳ ಪತ್ತೆ ಪರೀಕ್ಷೆ ಸೀಮಿತವಾಗಿದ್ದು, ಜಾಗೃತಿಯ ಕೊರತೆ ಇದೆ ಎಂದು ನಾರಾಯಣ ಹೆಲ್ತ್​ ನೆಟ್​​ವರ್ಕ್​ ಹಾಸ್ಪಿಟಲ್​ನ ಪಿಡಿಯಾಟ್ರಿಕ್​ ಹೆಮಟೊಲಾಜಿ ಮುಖ್ಯಸ್ಥರಾದ ಸುನೀಲ್​ ಭಟ್​ ಹೇಳುತ್ತಾರೆ.

ಹಾಗಾದರೆ, ಏನಿದು ತಲಸ್ಸೇಮಿಯಾ?: ತಲಸ್ಸೇಮಿಯಾ ಆನುವಂಶಿಕ ರಕ್ತದ ಅಸ್ವಸ್ಥತೆ. ಇದು ಸಾಮಾನ್ಯವಾಗಿ ಪೋಷಕರಿಂದ ಮಕ್ಕಳಿಗೆ ಬರುತ್ತದೆ. ಈ ರೋಗಿಗಳ ದೇಹದಲ್ಲಿ ಅಗತ್ಯ ಪ್ರಮಾಣದ ಹಿಮೋಗ್ಲೋಬಿನ್​​ ಇರುವುದಿಲ್ಲ. ಹಿಮೋಗ್ಲೋಬಿಲ್​ ಕೆಂಪು ರಕ್ತ ಕಣಗಳ ಪ್ರಮುಖ ಭಾಗವಾಗಿದ್ದು, ಈ ಖಾಯಿಲೆ ಹೊಂದಿದವರಲ್ಲಿ ಹಿಮೋಗ್ಲೋಬಿನ್​ ಉತ್ಪಾದನೆಯಾಗದ ಕಾರಣ ಪ್ರತಿ ಹದಿನೈದು ದಿನಗಳಿಗೊಮ್ಮೆ ರಕ್ತ ವರ್ಗಾವಣೆ ಮಾಡಬೇಕಾಗುತ್ತದೆ.

ತಡೆಗಟ್ಟುವಿಕೆ ಹೇಗೆ?: ನಿಕಟ ಸಂಬಂಧಿ ಅಥವಾ ಸೋದರ ಸಂಬಂಧದಲ್ಲಿ ಮದುವೆ ಹಾಗೂ ನಿರ್ದಿಷ್ಟ ಸಮುದಾಯ ಅಥವಾ ಭೌಗೋಳಿಕ ಗುಂಪಿನೊಂದಿಗೆ ಮದುವೆಯಾಗುವುದನ್ನು ತಡೆಯುವ ಮೂಲಕ ಈ ರೋಗವನ್ನು ತಡೆಗಟ್ಟಬಹುದು. ಭಾರತದಲ್ಲಿ ಕೆಲವು ನಿರ್ದಿಷ್ಟ ಸಮುದಾಯದ ಜೀನ್‌​ನಲ್ಲಿ ಈ ತಲಸ್ಸೇಮಿಯಾ ಪ್ರಕರಣಗಳು ಹೆಚ್ಚು.

ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಆನುವಂಶಿಕ ಸಮಾಲೋಚನೆ ಕೂಡ ಅಗತ್ಯ. ಮಗುವಿನ ನಿರೀಕ್ಷೆಯ ಪೋಷಕರು ಮತ್ತು ಮದುವೆಪೂರ್ವ ತಲಸ್ಸೇಮಿಯಾ ಪತ್ತೆ ಮಾಡದೇ ಇರುವುದು. ಇದರ ಜೊತೆಗೆ ನಿರ್ಲಕ್ಷ್ಯ ಮತ್ತು ವಿಜ್ಞಾನಕ್ಕಿಂತ ಹೆಚ್ಚಾಗಿ ಸಾಂಪ್ರದಾಯಿಕ ನಂಬಿಕೆಗಳು ಕೂಡ ತಲಸ್ಸೇಮಿಯಾ ಪ್ರಕರಣಗಳ ಏರಿಕೆಗೆ ಕಾರಣವಾಗಿದೆ ಎಂದು ಪುಣೆಯ ರುಬಿ ಹಾಲ್​ ಕ್ಲಿನಿಕ್​ನ ಸೀನಿಯರ್​ ಕನ್ಸಲ್ಟಂಟ್​ ವಿಜಯ್​ ರಮಣನ್​ ತಿಳಿಸಿದ್ದಾರೆ.

ವೈದ್ಯಕೀಯ ಸೇವೆ ಅಲಭ್ಯತೆ: ಈ ಸಮಸ್ಯೆಗೆ ವೈದ್ಯಕೀಯ ಸೇವೆ ಅಲಭ್ಯತೆ ಕೂಡ ಕಾರಣವಾಗುತ್ತದೆ. ಅನೇಕ ಬಾರಿ ರಕ್ತ ವರ್ಗಾವಣೆ, ಚೆಲೇಷನ್​ ಥೆರಪಿಯೂ ಈ ಸಮಸ್ಯೆಗೆ ಕಾರಣವಾಗಬಹುದು.

ಭಾರತದಲ್ಲಿ ಅಂದಾಜು 4 ರಿಂದ 6 ಲಕ್ಷ ಮಕ್ಕಳು ಈ ಸಮಸ್ಯೆ ಹೊಂದಿದ್ದಾರೆ. ಇದರ ತಡೆಗೆ ಜನರಲ್ಲಿ ಆನುವಂಶಿಕತೆಯ ಅಪಾಯದ ಕುರಿತು ಶಿಕ್ಷಣ, ವಿವಾಹಪೂರ್ವ ಸಮಾಲೋಚನೆ, ಭಾರತದಲ್ಲಿ ವಿಶಾಲ ವ್ಯಾಪ್ತಿಯ ಪರೀಕ್ಷೆ ಅಗತ್ಯವಿದೆ. ಹಾಗೆಯೇ ಸರ್ಕಾರದಿಂದ ಸ್ವಯಂಪ್ರೇರಿತ ಆನುವಂಶಿಕ ಪರೀಕ್ಷೆಯ ರಾಷ್ಟ್ರೀಯ ನೀತಿಯ ಉತ್ತೇಜನ ಹಾಗೂ ವೈದ್ಯರು ಮತ್ತು ಸಮುದಾಯದ ಸಹಭಾಗಿತ್ವದಿಂದ ಸಮಸ್ಯೆ ತಡೆಗಟ್ಟುವ ಪ್ರಯತ್ನ ನಡೆಸಬಹುದು. ಸಮಯೋಚಿತ ನಿರ್ವಹಣೆಯಂತಹ ಪೂರ್ವಭಾವಿ ಕ್ರಮಗಳು ಭಾರತದಲ್ಲಿ ತಲಸ್ಸೆಮಿಯಾ ಪ್ರಭಾವವನ್ನು ನಿವಾರಿಸುವಲ್ಲಿ ಪ್ರಮುಖ ಹೆಜ್ಜೆಯಾಗಬಹುದು ಎನ್ನುತ್ತಾರೆ ತಜ್ಞರು. (ಐಎಎನ್‌ಎಸ್​)

ಇದನ್ನೂ ಓದಿ: ಸಂಬಂಧಗಳಲ್ಲೇ ಮದುವೆ ಆಗೋದರಿಂದ ಹುಟ್ಟುವ ಮಕ್ಕಳಲ್ಲೂ ಕಣ್ಣಿನ ಸಮಸ್ಯೆ: ಅಧ್ಯಯನದಲ್ಲಿ ಬಹಿರಂಗ

ABOUT THE AUTHOR

...view details