ಪಿತ್ತಜನಕಾಂಗದ ಕಸಿ ಮಾಡಿ ಇಬ್ಬರಿಗೆ ಹೊಸ ಜೀವ ನೀಡಿದ ವೈದ್ಯರು: ಈ ಬಗ್ಗೆ ಡಾಕ್ಟರ್ಸ್ ಹೇಳಿದ್ದಿಷ್ಟು! - liver transplant successful
ಬೆಂಗಳೂರಿನ ವೈದ್ಯರು ಪಿತ್ತಜನಕಾಂಗವನ್ನು ಯಶ್ವಸಿಯಾಗಿ ಕಸಿ ಮಾಡುವ ಮೂಲಕ ಇಬ್ಬರಿಗೆ ಹೊಸ ಜೀವ ನೀಡಿದ್ದಾರೆ. ದಾನಿಯ ಪಿತ್ತಜನಕಾಂಗವನ್ನು ವಿಭಜಿಸಿ ಇಬ್ಬರು ವಯಸ್ಕರಿಗೆ ಯಶಸ್ವಿಯಾಗಿ ಕಸಿ ಮಾಡುವುದು ಬಹಳ ಅಪರೂಪದ ಸಾಧನೆಯಾಗಿದೆ ಎಂದು ವೈದ್ಯರು ಹೇಳುತ್ತಾರೆ.
ಪಿತ್ತಜನಕಾಂಗದ ಕಸಿ ಮಾಡಿ ಇಬ್ಬರಿಗೆ ಹೊಸ ಜೀವ ನೀಡಿದ ವೈದ್ಯರು (ETV Bharat)
ಬೆಂಗಳೂರು:ಬೆಂಗಳೂರಿನ ವೈದ್ಯರು ಪಿತ್ತಜನಕಾಂಗವನ್ನು ಯಶ್ವಸಿಯಾಗಿ ಕಸಿ ಮಾಡುವ ಮೂಲಕ ಇಬ್ಬರು ರೋಗಿಗಳಿಗೆ ಹೊಸ ಜೀವ ನೀಡಿದ್ದಾರೆ. ಹೌದು, ಯಶವಂತಪುರದ ಸ್ಪರ್ಶ್ ಆಸ್ಪತ್ರೆಯ ತಜ್ಞ ವೈದ್ಯರು ಪಿತ್ತಜನಕಾಂಗದ ಕಸಿಯನ್ನು ಯಶಸ್ವಿಯಾಗಿ ನಡೆಸಿ ಅನನ್ಯ ಸಾಧನೆ ಮಾಡಿದ್ದಾರೆ.
ಮಿದುಳು ನಿಷ್ಕ್ರಿಯಗೊಂಡ ದಾನಿಯ ಯಕೃತ್ತನ್ನು ಎರಡು ಭಾಗಗಳನ್ನಾಗಿಸಿದ ಇಲ್ಲಿನ ತಜ್ಞರು ಅವುಗಳನ್ನು ಇಬ್ಬರಿಗೆ ಯಶಸ್ವಿಯಾಗಿ ಜೋಡಿಸಿದ್ದಾರೆ. ಇದರಿಂದ ಇಬ್ಬರಿಗೆ ಹೊಸ ಜೀವ ನೀಡಿದ ಸಾಧನೆಯನ್ನು ಮಾಡಿದ್ದಾರೆ. ಈ ಕುರಿತು ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಯಶವಂತಪುರದ ಸ್ಪರ್ಶ್ ಆಸ್ಪತ್ರೆಯ ಪಿತ್ತಜನಕಾಂಗ ಕಸಿ ಮತ್ತು ಶಸ್ತ್ರಚಿಕಿತ್ಸೆಯ ಪ್ರಮುಖ ಸಲಹೆಗಾರ ಡಾ. ಗೌತಮ್ ಕುಮಾರ್ ಮಾತನಾಡಿದರು.
''ತಲೆಗೆ ತೀವ್ರ ಪೆಟ್ಟಾಗಿದ್ದ ಯುವಕ ಚಿಕಿತ್ಸೆಗಾಗಿ ಯಶವಂತಪುರದ ಸ್ಪರ್ಶ್ ಆಸ್ಪತ್ರೆಗೆ ದಾಖಲಾಗಿದ್ದರು. ಮಿದುಳನ್ನು ಕಾರ್ಯಶೀಲಗೊಳಿಸಲು ಭಾರಿ ಸಾಹಸ ಮಾಡಿದರೂ ಸರಿಯಾಗಲಿಲ್ಲ. ಅವರ ಮಿದುಳು ಸಂಪೂರ್ಣವಾಗಿ ನಿಷ್ಕ್ರಿಯ ಗೊಂಡಿತ್ತು. ಇಂತಹ ಸನ್ನಿವೇಶದಲ್ಲಿ ಯುವಕನ ಸಹೃದಯಿ ಕುಟುಂಬ ಎಲ್ಲ ಅಂಗಗಳನ್ನು ದಾನ ಮಾಡುವ ಮಹತ್ವದ ಕಾರ್ಯಕ್ಕೆ ಒಪ್ಪಿಗೆ ನೀಡಿತು. ಸ್ಪರ್ಶ್ ಆಸ್ಪತ್ರೆ ತಕ್ಷಣ ಜೀವ ಉಳಿಸುವ ಸಂಕೀರ್ಣ ಶಸ್ತ್ರಚಿಕಿತ್ಸೆಗೆ ಮುಂದಾಯಿತು. ಪಿತ್ತಜನಕಾಂಗವನ್ನು ಎರಡು ಭಾಗಗಳಾಗಿ ವಿಭಜಿಸಲಾಯಿತು. ಒಂದು ಭಾಗವನ್ನು 53 ವರ್ಷದ ಪುರುಷ ಹಾಗೂ ಮತ್ತೊಂದನ್ನು 59 ವರ್ಷದ ಮಹಿಳೆಯೊಬ್ಬರಿಗೆ ಕಸಿ ಮಾಡಲಾಯಿತು'' ಎಂದು ಡಾ.ಗೌತಮ್ ಕುಮಾರ್ ವಿವರಿಸಿದರು.
ಲಿವರ್ ವಿಭಜಿಸಿ ನಂತರ ಕಸಿ ಮಾಡಲಾಗಿದೆ: ''ಭಾರತವು ಅಂಗಾಂಗಗಳ ತೀವ್ರವಾದ ಕೊರತೆಯನ್ನು ಎದುರಿಸುತ್ತಿದೆ. ಅಂಗಾಂಗ ಕಸಿಗಾಗಿ ಕಾಯುತ್ತಿರುವವರ ಸಾಲು ದೊಡ್ಡದಿದೆ. ಆದರೆ, ದಾನಿಗಳ ಸಂಖ್ಯೆ ತುಂಬ ಸೀಮಿತವಾಗಿದೆ. ಇಂತಹ ಸವಾಲನ್ನು ಎದುರಿಸಲು, ದಾನಿಗಳ ಅಂಗಾಂಶಗಳನ್ನು ಒಟ್ಟುಗೂಡಿಸಿ ಅದನ್ನು ಹಂಚುವ ಕಾರ್ಯತಂತ್ರವನ್ನು ಅನುಸರಿಸಲಾಗುತ್ತಿದೆ. ಇದರಲ್ಲಿ ಲಿವರ್ ಅನ್ನು ವಿಭಜಿಸಿ ಕಸಿ ಮಾಡುವ ತಂತ್ರ ಕೂಡ ಪ್ರಚಲಿತದಲ್ಲಿದೆ. ಹೀಗೆ ಲಿವರ್ ಅನ್ನು ವಿಭಜಿಸಿದಾಗ ಬಲಭಾಗವನ್ನು ವಯಸ್ಕರಿಗೆ ಎಡಭಾಗವನ್ನು ಮಕ್ಕಳಿಗೆ ಕಸಿ ಮಾಡಲಾಗುತ್ತದೆ'' ಎಂದು ಪ್ರಕ್ರಿಯೆಯ ಹಂತಗಳನ್ನು ತಿಳಿಸಿದರು.
ಅಪರೂಪದ ಸಾಧನೆ:ಶಸ್ತ್ರಚಿಕಿತ್ಸೆಯ ಬಗ್ಗೆ ಮಾತನಾಡಿದ ಯಶವಂತಪುರದ ಸ್ಮರ್ಶ್ ಆಸ್ಪತ್ರೆಯ ಸಿಒಒ ಕರ್ನಲ್ ರಾಹುಲ್ ತಿವಾರಿ ಅವರು, ''ದಾನಿಯ ಪಿತ್ತಜನಕಾಂಗವನ್ನು ವಿಭಜಿಸಿ ಇಬ್ಬರು ವಯಸ್ಕರಿಗೆ ಯಶಸ್ವಿಯಾಗಿ ಕಸಿ ಮಾಡುವುದು ಬಹಳ ಅಪರೂಪದ ಸಾಧನೆಯಾಗಿದೆ. ಇವುಗಳನ್ನು ಪಡೆಯುವ ಅರ್ಹ ರೋಗಿಗಳನ್ನು ಗುರುತಿಸುವುದು ಸಹ ತುಂಬ ನಿರ್ಣಾಯಕವಾಗಿರುತ್ತದೆ. ಪಿತ್ತಜನಕಾಂಗವನ್ನು ಹೊರತೆಗೆದು ಅದನ್ನು ಇನ್ನೊಬ್ಬರಿಗೆ ಕಸಿ ಮಾಡದೇ ತುಂಬ ದೀರ್ಘಕಾಲ ಹೊರಗೆ ಇಡದಂತೆ ನೋಡಿಕೊಳ್ಳಬೇಕಾಗುತ್ತದೆ. ಇಲ್ಲಿ ಸಮಯಾವಕಾಶ ಕಡಿಮೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳು ಮತ್ತು ತಜ್ಞರ ಅಗತ್ಯತೆ ತುಂಬಾ ಇರುತ್ತದೆ. ಸ್ಪರ್ಶ್ ಆಸ್ಪತ್ರೆಯಲ್ಲಿ ಇದಕ್ಕೆ, ಬೇಕಾದ ಪೂರಕ ಸೌಲಭ್ಯಗಳಿದ್ದು, ಹೀಗಾಗಿ ಮೊದಲ ಬಾರಿಗೆ ಪಿತ್ತಜನಕಾಂಗದ ಕಸಿಯನ್ನು ನೆರವೇರಿಸಲಾಗಿದೆ'' ಎಂದು ಹೇಳಿದರು.
ಸ್ಪರ್ಶ್ ಆಸ್ಪತ್ರೆಯ ಗ್ರೂಪ್ ಸಿಒಒ ಆದ ಜೋಸೆಫ್ ಪಸಂಗ ಮಾತನಾಡಿ, ''ಮಿದುಳು ನಿಷ್ಕ್ರಿಯಗೊಂಡ ಯುವಕನ ಬಲ ಕಿಡ್ನಿಯನ್ನು ಮತ್ತು ಹೃದಯವನ್ನು ನಗರದ ಇತರ ಆರೋಗ್ಯ ಸಂಸ್ಥೆಗಳಿಗೆ ಕಳುಹಿಸಲಾಗಿದೆ. ಅಂಗಾಂಗ ದಾನಕ್ಕೆ ಕುಟುಂಬದ ಸದಸ್ಯರಿಂದ ಅನುಮತಿ ಸಿಕ್ಕ ಕೂಡಲೇ ಸ್ಪರ್ಶ್ ಆಸ್ಪತ್ರೆಯ ತಜ್ಞರ ತಂಡ ಮಿಂಚಿನ ವೇಗದಲ್ಲಿ ಕಾರ್ಯಶೀಲವಾಗಿದ್ದು ಈ ಯಶಸ್ಸಿಗೆ ಕಾರಣವಾಗಿದೆ. ಇಬ್ಬರ ಜೀವವನ್ನು ಉಳಿಸಿದೆ. ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ರಾಜ್ಯ ಅಂಗಾಂಗ ಕಸಿ ಸಂಘಟನೆ, ಆರೋಗ್ಯ ಇಲಾಖೆ ನೀಡಿದ ಸಹಕಾರ ಕೂಡ ತುಂಬ ಮುಖ್ಯವಾಗಿದೆ. ಕಸಿ ಮಾಡುವ ಶಸ್ತ್ರಚಿಕಿತ್ಸೆಯಲ್ಲಿ ಸ್ಮರ್ಶ್ ತಂಡದ ಕಾರ್ಯತತ್ಪರತೆ, ಬದ್ಧತೆ, ಶ್ರದ್ಧತೆಯನ್ನು ಮಾತುಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದೆನ್ನಿಸುತ್ತಿದೆ. ವೈದ್ಯಕೀಯ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಸ್ಪರ್ಶ್ ಆಸ್ಪತ್ರೆಯು ಮುಂಚೂಣಿಯಲ್ಲಿದೆ'' ಎಂದರು.