ನವದೆಹಲಿ: ಒತ್ತಡ ಎಂಬುದು ಕೇವಲ ಮಾನಸಿಕ ಆರೋಗ್ಯವನ್ನು ಮಾತ್ರವಲ್ಲ, ದೈಹಿಕ ಆರೋಗ್ಯದ ಮೇಲೆ ಕೂಡ ಗಂಭೀರ ಪರಿಣಾಮ ಬೀರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಏಪ್ರಿಲ್ ತಿಂಗಳು ಒತ್ತಡ ಅರಿವಿನ ಮಾಸವಾಗಿದ್ದು, ಈ ನಿಟ್ಟಿನಲ್ಲಿ ಒತ್ತಡದ ಸಮಸ್ಯೆ ಹಾಗೂ ಅದರ ಪರಿಣಾಮಗಳ ಕುರಿತು ಅರಿವು ಮೂಡಿಸುವ ಯತ್ನ, ತಿಂಗಳು ಪೂರ್ತಿ ಸಾಗಲಿದೆ.
ಇಂದಿನ ಓಡುತ್ತಿರುವ ಜಗತ್ತಿನಲ್ಲಿ ಜನರು ಅನಿರೀಕ್ಷಿತ ಮಟ್ಟದ ಒತ್ತಡಗಳನ್ನು ಎದುರಿಸುತ್ತಿದ್ದಾರೆ. ಇದು ಮಾನಸಿಕ ಮತ್ತು ದೈಹಿಕ ಆರೋಗ್ಯದ ಸವಾಲುಗಳ ಏರಿಕೆಗೆ ಕಾರಣವಾಗುತ್ತಿದೆ. ಒತ್ತಡವು ಮಾನಸಿಕ ಯೋಗಕ್ಷೆಮದ ಮೇಲೆ ಪರಿಣಾಮ ಬೀರುವ ಜೊತೆಗೆ ದೇಹದ ಮೇಲೆ ಕೂಡ ಆಳವಾದ ಪರಿಣಾಮ ಬೀರಿ, ವಿವಿಧ ಆರೋಗ್ಯ ಪರಿಸ್ಥಿತಿಗಳಿಗೆ ಕಾರಣವಾಗುತ್ತದೆ ಎಂದು ಗುರುಗ್ರಾಮದ ಆರ್ಟಿಮಿಸ್ ಆಸ್ಪತ್ರೆಯ ನ್ಯೂರೋ ಇಂಟರ್ವೆನ್ಷನ್ ನಿರ್ದೇಶಕ ವಿಪುಲ್ ಗುಪ್ತಾ ತಿಳಿಸಿದ್ದಾರೆ.
ಒತ್ತಡವು ನಿದ್ರೆಗೆ ಅಡ್ಡಿಪಡಿಸುವುದರಿಂದ, ನಿದ್ರಿಸಲು ತೊಂದರೆ ಉಂಟಾಗುತ್ತದೆ. ಇದರಿಂದ ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಪಾರ್ಶ್ವ ವಾಯುಗಳಂತಹ ಹೃದಯ ರಕ್ತನಾಳದ ಕಾಯಿಲೆಗಳು ಹೆಚ್ಚಾಗುವಂತೆ ಮಾಡುತ್ತದೆ. ದೀರ್ಘಕಾಲದ ಒತ್ತಡವು ದೈಹಿಕ ಪ್ರತಿಕ್ರಿಯೆಗಳ ಕ್ಯಾಸ್ಕೇಡ್ ಅನ್ನು ಪ್ರಚೋದಿಸುತ್ತದೆ. ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್ನಂತಹ ಒತ್ತಡದ ಹಾರ್ಮೋನುಗಳ ಹೆಚ್ಚಾದಾಗ ಇದು ಸಾಮಾನ್ಯ ದೈಹಿಕ ಕಾರ್ಯಗಳನ್ನು ಅಡ್ಡಿಪಡಿಸಬಹುದು.
ಅಷ್ಟೇ ಅಲ್ಲದೇ ಇರಿಟೇಬಲ್ ಬೊವೆಲ್ ಸಿಂಡ್ರೋಮ್ (ಐಬಿಎಸ್)ನಂತಹ ಜೀರ್ಣಕಾರಿ ಸಮಸ್ಯೆಗೆ ಕಾರಣವಾಗಬಹುದು. ಇದು ಕರುಳಿನ ಚಲನೆಯನ್ನು ಅಡ್ಡಿಪಡಿಸಿ, ಉರಿಯೂತವನ್ನು ಉಲ್ಬಣಗೊಳಿಸುತ್ತದೆ. ದೀರ್ಘಕಾಲದ ಒತ್ತಡವು ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗಬಹುದು, ಇದು ಪುರುಷರು ಮತ್ತು ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದಿದ್ದಾರೆ.