ನವದೆಹಲಿ: ಹಾರ್ಮೋನ್ ಜನನ ನಿಯಂತ್ರಣ ಬಳಕೆಯಿಂದ ಖಿನ್ನತೆ ಮತ್ತು ಆತ್ಮಹತ್ಯೆಯಂತಹ ಅಪಾಯ ಹೆಚ್ಚು ಎಂದು ವಿಶ್ವದ ಬಿಲಿಯನೇರ್ ಎಲೋನ್ ಮಸ್ಕ್ ಕಳವಳ ವ್ಯಕ್ತಪಡಿಸಿದ್ದು, ಮಹಿಳೆಯರ ಆರೋಗ್ಯ ಕುರಿತು ಹೆಚ್ಚು ಅರಿತುಕೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ.
'ಹಾರ್ಮೋನ್ ಜನನ ನಿಯಂತ್ರಣದ ಪರಿಣಾಮಗಳ ಕುರಿತು ಮಹಿಳೆಯರು ಸಾಕಷ್ಟು ಮಾಹಿತಿ ಹೊಂದಿರಬೇಕು. ಇದು ಖಿನ್ನತೆ ಮತ್ತು ಆತ್ಮಹತ್ಯೆಗೆ ಕಾರಣವಾಗುತ್ತದೆ' ಎಂದು ಅವರು ಎಚ್ಚರಿಸಿದ್ದಾರೆ. ಈ ಸಂಬಂಧ 2017ರಲ್ಲಿ ಡೆನ್ಮಾರ್ಕ್ನಲ್ಲಿ ತಜ್ಞರು ನಡೆಸಿದ ಸಂಶೋಧನಾ ಅಧ್ಯಯನದ ಲಿಂಕ್ ಅನ್ನು ಮಸ್ಕ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ 42 ಮಿಲಿಯನ್ ವೀಕ್ಷಣೆ ಕಂಡಿದೆ. ಆದರೆ 16 ಸಾವಿರ ಮಂದಿ ಮಸ್ಕ್ ಹೇಳಿಕೆಗೆ ಸಮ್ಮತಿಸಿಲ್ಲ. ಜನನ ನಿಯಂತ್ರಣ ಕ್ಲಿಷ್ಟಕರವಾಗಿದೆ ಮತ್ತು ಸಂಶೋಧನೆಯಲ್ಲಿ ಇದರ ಅಡ್ಡ ಪರಿಣಾಮಗಳು ಸಾಬೀತಾಗಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮಸ್ಕ್, 'ಇದು ಮೌಲ್ಯಯುತ ಹೇಳಿಕೆಯಲ್ಲ. ಸಾರ್ವಜನಿಕ ಸೇವೆಯ ಪ್ರಕಟಣೆ ಅಷ್ಟೇ. ಹಾರ್ಮೋನ್ ಹೊರತಾದ ಇತರ ಜನನ ನಿಯಂತ್ರಣಗಳು ಈ ರೀತಿಯ ಪರಿಣಾಮವನ್ನು ಹೊಂದಿಲ್ಲ ಎಂದಿದ್ದಾರೆ.
ಮಸ್ಕ್ ಅವರ ಮಹಿಳಾ ಕಾಳಜಿ ಕುರಿತಾದ ಈ ಪೋಸ್ಟ್ಗೆ ಅಮೆರಿಕದ ಟೆಲಿವಿಷನ್ ಕಮೆಂಟರ್ ಮತ್ತು ಲೇಖಕಿ ಸೇಟ್ ಕ್ಲೇರ್ ಕೂಡ ಕಮೆಂಟ್ ಮಾಡಿದ್ದಾರೆ. 'ನಾನು ಜನನ ನಿಯಂತ್ರಣದ ವಿರೋಧಿಯಲ್ಲ. ಇದು ಕೆಲವರ ಜೀವನವನ್ನು ಬದಲಾಯಿಸುವ ಔಷಧಿಯಾಗಿರಬಹುದು. ಆದಾಗ್ಯೂ ಖಿನ್ನತೆ ಮತ್ತು ಆತ್ಮಹತ್ಯೆ ಅಪಾಯವನ್ನು ಹೆಚ್ಚಿಸುವ ಗಂಭೀರ ಅಡ್ಡ ಪರಿಣಾಮ ಹೊಂದಿದೆ' ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಮಹಿಳೆ ಈ ಸಮಸ್ಯೆಯ ಲಕ್ಷಣಗಳ ಕುರಿತು ವೈದ್ಯರೊಂದಿಗೆ ಮಾತನಾಡಿದಾಗ, ಅವರು ಹಾರ್ಮೋನ್ ಜನನ ನಿಯಂತ್ರಣದ ಮಾತ್ರೆಗಳಿಂದ ಹೊರಬರಲು ಸೂಚಿಸುವುದಿಲ್ಲ. ಅಥವಾ ಇದಕ್ಕೆ ಪರ್ಯಾಯ ಮಾತ್ರೆಗಳನ್ನೂ ಸೂಚಿಸುವುದಿಲ್ಲ. ಅವರು ಕೇವಲ ಮನೋವೈದ್ಯಕೀಯ ಔಷಧಗಳನ್ನು ಶಿಫಾರಸು ಮಾಡುತ್ತಾರೆ. ಮಹಿಳೆಯನ್ನು ಔಷಧಿಯ ಕಾಕ್ಟೈಲ್ ಆಗಿ ರೂಪಿಸುತ್ತಾರೆ ಎಂದು ತಿಳಿಸಿದ್ದಾರೆ.
ಹಾರ್ಮೋನ್ ಜನನ ನಿಯಂತ್ರಣ ಎಂದರೇನು?: ಹಾರ್ಮೋನ್ ಗರ್ಭನಿರೋಧಕ ವಿಧಾನಗಳು ಮುಖ್ಯವಾಗಿ, ಮೌಖಿಕ ಮಾತ್ರೆಗಳು ಅಥವಾ ಇಂಪ್ಲಾಂಟ್‌ಗಳು, ಪ್ಯಾಚ್ ಅಥವಾ ವಜಿನಲ್ ರಿಂಗ್ ಹೊಂದಿರುತ್ತದೆ. ಇದರಲ್ಲಿ ಅಂಡಾಣೋತ್ಪತ್ತಿ ತಡೆಯಲು ಒಂದು ಅಥವಾ ಹೆಚ್ಚಿನ ಹಾರ್ಮೋನುಗಳನ್ನು ದೇಹ ಸಣ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತದೆ. (ಐಎಎನ್ಎಸ್)
ಇದನ್ನೂ ಓದಿ:ಇದೇ ಕಾರಣಕ್ಕೆ ಮಹಿಳೆಯರು ನಿಯಮಿತವಾಗಿ ಥೈರಾಯ್ಡ್ ತಪಾಸಣೆಗೆ ಒಳಗಾಗಬೇಕು