Sleeping with Jeans: ಆಧುನಿಕ ಜಗತ್ತಿನಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿರುವ ಧಿರಿಸುಗಳಲ್ಲಿ ಜೀನ್ಸ್ ಕೂಡ ಒಂದು. ಇದು ಹೆಣ್ಣು, ಗಂಡು, ಹಿರಿಯರು, ಕಿರಿಯರು ಎಂಬ ಬೇಧವಿಲ್ಲದೇ ಎಲ್ಲಾ ವಯೋಮಾನದವರಿಗೆ ಹೊಂದಾಣಿಕೆ ಆಗುತ್ತದೆ. ಹಾಗಾಗಿ ಹೆಚ್ಚಿನ ಜನರು ಜೀನ್ಸ್ ಧರಿಸಲು ಇಷ್ಟಪಡುತ್ತಾರೆ. ಆದರೇ ಕೆಲವರು ರಾತ್ರಿ ಮಲುಗುವ ವೇಳೆ ಜೀನ್ಸ್ ಧರಿಸಿ ನಿದ್ರಿಸುತ್ತಾರೆ. ಹೀಗೆ ಮಾಡುವುದರಿಂದ ತುಂಬಾ ಸಮಸ್ಯೆಗಳು ಎದುರಿಸಬೇಕಾಗುತ್ತದೆ ಎನ್ನುತ್ತಾರೆ ವೈದ್ಯರು. ಒಂದು ವೇಳೆ ನೀವು ಜೀನ್ಸ್ ಧರಿಸಿ ನಿದ್ರಿಸುವ ಅಭ್ಯಾಸ ಹೊಂದಿದ್ದರೇ ಇಂದಿನಿಂದಲೇ ಬಿಟ್ಟುಬಿಡಿ. ಇಲ್ಲದಿದ್ದರೇ ಈ ಗಂಭೀರ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಹಾಗಾದರೆ ಆ ಸಮಸ್ಯೆಗಳು ಯಾವವು ಮತ್ತು ಜೀನ್ಸ್ ಧರಿಸುವುದರಿಂದ ಏನಾಗುತ್ತದೆ ಎಂಬುದನ್ನು ತಿಳಿಯೋಣ.
ಫಂಗಲ್ ಇನ್‌ಫೆಕ್ಷನ್ಸ್:ಜೀನ್ಸ್ ಎಂಬುದನ್ನು ಡೆನಿಮ್ ಫ್ಯಾಬ್ರಿಕ್ನಿಂದ ತಯಾರಿಸಲಾಗುತ್ತದೆ. ಈ ಬಟ್ಟೆ ನಮ್ಮ ದೇಹದ ಹೊರ ಬರುವ ಬೆವರನ್ನು ಹೀರಿಕೊಳ್ಳುವ ಗುಣವನ್ನು ಹೊಂದಿಲ್ಲ. ಹಾಗಾಗಿ ಜೀನ್ಸ್ ಧರಿಸಿದ ವೇಳೆ ನಮ್ಮ ಗುಪ್ತಾಂಗ, ತೊಡೆ, ಕಾಲು ಭಾಗದಲ್ಲಿ ಬೆವರು ಹಾಗೇ ಉಳಿದುಕೊಂಡಿರುತ್ತದೆ. ರಾತ್ರಿಯೂ ಇದನ್ನು ಧರಿಸಿ ಮಲಗುವುದರಿಂದ ಫಂಗಲ್ ಇನ್ಫೆಕ್ಷನ್ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಜತೆಗೆ ಇದು ಸಂತಾನೋತ್ಪತ್ತಿ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.
ಜರ್ನಲ್ ಆಫ್ ಡರ್ಮಟಾಲಜಿಯಲ್ಲಿ ಪ್ರಕಟವಾದ 2018ರ ಅಧ್ಯಯನದ ಪ್ರಕಾರ ಬಿಗಿಯಾದ ಜೀನ್ಸ್ ಧರಿಸುವುದರಿಂದ ಫಂಗಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ತಿಳಿದು ಬಂದಿದೆ. ಬ್ರೆಜಿಲ್‌ನ ಸಾವೊ ಪಾಲೊದಲ್ಲಿರುವ ಯೂನಿವರ್ಸಿಡೇಡ್ ಎಸ್ಟಾಡ್ಯುಯಲ್ ಡಿ ಕ್ಯಾಂಪನಿಯಾಸ್‌ನ ಚರ್ಮರೋಗ ತಜ್ಞ ಡಾ. ಬಿಯಾಂಕಾ ಶಾನ್ ಈ ಸಂಶೋಧನೆಯಲ್ಲಿ ಭಾಗಿಯಾಗಿದ್ದರು.
ಚರ್ಮದ ಮೇಲೆ ದದ್ದುಗಳು: ಬಿಗಿಯಾದ ಜೀನ್ಸ್ ಧರಿಸಿ ನಿದ್ರಿಸುವುದರಿಂದ ಗಾಳಿಯ ಸಂಚಾರ ಸರಿಯಾಗಿ ಆಗುವುದಿಲ್ಲ. ಇದರಿಂದ ತ್ವಚೆಯಲ್ಲಿ ತುರಿಕೆ, ದದ್ದು, ಕೆಂಪಾಗುವುದು ಮುಂತಾದ ಸಮಸ್ಯೆಗಳು ಉಂಟಾಗುತ್ತವೆ ಎನ್ನಲಾಗಿದೆ. ಹಾಗಾಗಿ ಆದಷ್ಟು ಕಡಿಮೆ ಸಮಯ ಜೀನ್ಸ್ ಧರಿಸುವುದು ಉತ್ತಮ ಎನ್ನುತ್ತಾರೆ ತಜ್ಞರು. ಅದರಲ್ಲೂ ಹೆಚ್ಚಾಗಿ ಬೆವರುವವರು ಈ ವಿಷಯದಲ್ಲಿ ಜಾಗರೂಕರಾಗಿರುವುದು ಉತ್ತಮ.
ನಿದ್ರೆಗೆ ಅಡ್ಡಿ: ದೇಹದ ಉಷ್ಣತೆಯು ಸಾಮಾನ್ಯವಾಗಿ ನಿದ್ರೆಗೆ ಜಾರಿದ ಕೆಲವೇ ಗಂಟೆಗಳಲ್ಲಿ ಕ್ರಮೇಣ ಕಡಿಮೆಯಾಗುತ್ತದೆ. ಆದಾಗ್ಯೂ, ನೀವು ಜೀನ್ಸ್ ಧರಿಸಿ ಮಲಗಿದಾಗ, ಗಾಳಿಯ ಸಂಚಾರ ಸರಿಯಾಗಿ ಆಗುವುದಿಲ್ಲ ಮತ್ತು ದೇಹದ ಉಷ್ಣತೆಯು ಮತ್ತಷ್ಟು ಹೆಚ್ಚಾಗುತ್ತದೆ, ಇದು ನಿದ್ರೆಗೆ ಅಡ್ಡಿಪಡಿಸುತ್ತದೆ ಎಂದು ಅಧ್ಯಯನ ಹೇಳುತ್ತದೆ.