ಅತಿಯಾದ ಸಕ್ಕರೆ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ಹೀಗಿದ್ದರೂ ಕೆಲವು ಸಿಹಿಪ್ರಿಯರಿಗೆ ಸಕ್ಕರೆ ಬಿಟ್ಟು ಬದುಕಲಾರದಷ್ಟು ನಂಟು. ಆದರೆ, ವಿಪರೀತ ಸಕ್ಕರೆ ಸೇವಿಸುವುದರಿಂದ ಮೆದುಳಿನ ಕಾರ್ಯಗಳ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂಬುದು ಗಮನಾರ್ಹ.
ಹಾರ್ಮೋನ್‌ಗಳಲ್ಲಿ ಅಸಮತೋಲನ: ನಾವು ಸಿಹಿ ಪದಾರ್ಥಗಳನ್ನು ಸೇವಿಸಿದಾಗ ಅವು ನಮ್ಮ ಮೆದುಳಿನಲ್ಲಿ ರಾಸಾಯನಿಕ ಕ್ರಿಯೆಯನ್ನು ಪ್ರಚೋದಿಸುತ್ತದೆ. ಇದರಿಂದ ಮೆದುಳಿನ ಪ್ರತಿಫಲ ವ್ಯವಸ್ಥೆಯಲ್ಲಿ ಡೋಪಮೈನ್ ಮತ್ತು ಸಿರೊಟೋನಿನ್‌ನಂತಹ ಹಾರ್ಮೋನ್‌ಗಳು ಬಿಡುಗಡೆಯಾಗುತ್ತವೆ. ಇವೆರಡೂ ನಮಗೆ ಸಂತೋಷ ಮತ್ತು ನಿರಾಳವಾಗಿರಲು ಸಹಾಯ ಮಾಡುತ್ತವೆ. ಆದರೆ ನೆನಪಿಡಿ, ಸಕ್ಕರೆಯನ್ನು ಹಿತಮಿತವಾಗಿ ಬಳಸುತ್ತಿದ್ದರೆ ಮಾತ್ರ ಇದು ಸಾಧ್ಯ. ಮಿತಿ ಮೀರಿ ಸೇವಿಸಿದಾಗ ಹಾರ್ಮೋನ್‌ಗಳಲ್ಲಿ ಅಸಮತೋಲನ ಉಂಟಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.
ನಿದ್ರಾಹೀನತೆ, ಮಾನಸಿಕ ಖಿನ್ನತೆ: ಹೆಚ್ಚಿನ ಸಕ್ಕರೆ ಸೇವನೆ ನಿದ್ರಾಹೀನತೆಗೆ ಕಾರಣವಾಗುತ್ತದೆ. ದೇಹವು ಸಕ್ಕರೆಯನ್ನು ಜೀರ್ಣಿಸಿದಾಗ ಕಾರ್ಟಿಸೋಲ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ ನಿದ್ರಾಹೀನತೆಗೆ ಕಾರಣವಾಗುತ್ತದೆ.
ಅಷ್ಟೇ ಅಲ್ಲದೇ, ಮಾನಸಿಕ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಸಿಹಿ ಆಹಾರಗಳು ಖಿನ್ನತೆಗೂ ಕಾರಣ ಎಂದು ಅನೇಕ ಅಧ್ಯಯನಗಳು ತೋರಿಸಿವೆ. ಅಂತಾರಾಷ್ಟ್ರೀಯ ಜರ್ನಲ್‌ವೊಂದರಲ್ಲಿ ಪ್ರಕಟವಾದ 2017ರ ಅಧ್ಯಯನ ವರದಿ, ಹೆಚ್ಚು ಸಕ್ಕರೆ ಪಾನೀಯಗಳನ್ನು ಸೇವಿಸುವ ಜನರಲ್ಲಿ ಖಿನ್ನತೆಯ ಮಟ್ಟ ಶೇ.23ರಷ್ಟು ಹೆಚ್ಚಿದೆ ಎಂದು ಕಂಡುಹಿಡಿದಿದೆ.