ವಾಕಿಂಗ್ ಅಥವಾ ಯಾವುದೇ ದೈಹಿಕ ವ್ಯಾಯಾಮ ನಮ್ಮ ಒಟ್ಟಾರೆ ಆರೋಗ್ಯಕ್ಕೆ ವರದಾನವಾಗಿದೆ. ಪ್ರತಿನಿತ್ಯ ವಾಕಿಂಗ್ ಮಾಡುವುದರಿಂದ ನಮ್ಮ ದೇಹಕ್ಕೆ ಬಹಳಷ್ಟು ಪ್ರಯೋಜನಗಳು ದೊರೆಯುತ್ತವೆ. ನಿಯಮಿತವಾಗಿ ವಾಕಿಂಗ್ ಮಾಡುವುದರಿಂದ ಬಹಳ ಮುಖ್ಯವಾಗಿ ಐದು ಪ್ರಮುಖ ಪ್ರಯೋಜನಗಳಿವೆ.
ತೂಕ ಉತ್ತೇಜಿಸುವ ಜೀನ್‌ಗಳ ಪರಿಣಾಮ ತಡೆಯುತ್ತೆ: ಹಾರ್ವರ್ಡ್ ಸಂಶೋಧಕರು, 12,000ಕ್ಕಿಂತ ಹೆಚ್ಚು ಜನರಲ್ಲಿ 32 ಪ್ರಕಾರದ ಬೊಜ್ಜು ಉತ್ತೇಜಿಸುವ ಜೀನ್‌ಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಈ ಜೀನ್‌ಗಳು ದೇಹದ ತೂಕ ಹೆಚ್ಚಾಗಲು ಎಷ್ಟು ಕೊಡುಗೆ ನೀಡುತ್ತವೆ ಎಂಬುದರ ಬಗ್ಗೆ ಸಂಶೋಧನೆ ನಡೆಸಲಾಗಿದೆ. ಜೊತೆಗೆ, ದಿನಕ್ಕೆ ಸುಮಾರು ಒಂದು ಗಂಟೆ ಚುರುಕಾಗಿ ವಾಕಿಂಗ್ ಮಾಡುವವರ ಕುರಿತೂ ಅಧ್ಯಯನ ನಡೆದಿದೆ. ಚುರುಕಾಗಿ ವಾಕಿಂಗ್ ಮಾಡುವವರಲ್ಲಿ ಜೀನ್‌ಗಳ ಪರಿಣಾಮಗಳು ಅರ್ಧದಷ್ಟು ಕಡಿಮೆ ಎಂಬುದು ಇದರಲ್ಲಿ ಕಂಡು ಬಂದ ಅಂಶ.
ಸಿಹಿ ತಿಂಡಿಗಳನ್ನು ಸೇವಿಸುವ ಬಯಕೆ ನಿಯಂತ್ರಣ: ಎಕ್ಸೆಟರ್ ವಿಶ್ವವಿದ್ಯಾನಿಲಯದ ಎರಡು ಅಧ್ಯಯನಗಳು ತಿಳಿಸುವಂತೆ, ಪ್ರತಿನಿತ್ಯ 15 ನಿಮಿಷಗಳ ವಾಕಿಂಗ್‌ನಿಂದ ಮಾಡುವುದರಿಂದ ಚಾಕೊಲೇಟ್ ಸೇರಿದಂತೆ ಸಿಹಿ ತಿನಿಸುಗಳನ್ನು ಸೇವಿಸುವ ಬಯಕೆಗಳು ಕಡಿಮೆ ಆಗುತ್ತವೆ. ಒತ್ತಡದ ಸಂದರ್ಭಗಳಲ್ಲಿ ನೀವು ತಿನ್ನುವ ಚಾಕೊಲೇಟ್ ಪ್ರಮಾಣವನ್ನು ಇದು ತಗ್ಗಿಸುತ್ತದೆ. ನಿಯಮಿತವಾಗಿ ವಾಕಿಂಗ್‌ನಿಂದ ವಿವಿಧ ರೀತಿಯ ಸಿಹಿ ತಿಂಡಿಗಳ ಸೇವಿಸುವ ಬಯಕೆಯನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ ಎಂದು ಸಂಶೋಧನೆ ದೃಢಪಡಿಸುತ್ತದೆ.
ಸ್ತನ ಕ್ಯಾನ್ಸರ್ ಅಪಾಯ ಕಡಿಮೆ: ವಾಕಿಂಗ್‌ನಿಂದ ಸ್ತನ ಕ್ಯಾನ್ಸರ್ ಬೆಳವಣಿಗೆಯ ಅಪಾಯ ಕಡಿಮೆ ಮಾಡುತ್ತದೆ. ಯಾವುದೇ ರೀತಿಯ ದೈಹಿಕ ಚಟುವಟಿಕೆಯು ಸ್ತನ ಕ್ಯಾನ್ಸರ್ ಅಪಾಯವನ್ನು ದೂರ ಮಾಡುತ್ತದೆ ಎಂದು ಸಂಶೋಧಕರು ಈಗಾಗಲೇ ಅಧ್ಯಯನದ ಮೂಲಕ ತಿಳಿಸಿದ್ದಾರೆ. ಸ್ತನ ಕ್ಯಾನ್ಸರ್ ಅಪಾಯಕಾರಿ ಅಂಶಗಳಿರುವ ಮಹಿಳೆಯರಿಗೆ ವಾಕಿಂಗ್ ರಕ್ಷಣೆ ನೀಡುತ್ತದೆ. ಪ್ರಮುಖವಾಗಿ ಅಧಿಕ ತೂಕ ನಿಯಂತ್ರಣಕ್ಕೂ ಪೂರಕ.