ಅಂದಾಜು 1.8 ಶತಕೋಟಿ ವಯಸ್ಕರು ದೈಹಿಕ ಚಟುವಟಿಕೆಯನ್ನು ಮಾಡದೇ ಇರುವುದರಿಂದ ಆರೋಗ್ಯ ಅಪಾಯದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ. ಹೌದು, ಗ್ಲೋಬಲ್ ಹೆಲ್ತ್ ವಾಚ್‌ಡಾಗ್‌ನ ಇತ್ತೀಚಿನ ಮಾಹಿತಿಯು ಜಗತ್ತಿನಾದ್ಯಂತ ಸುಮಾರು ಮೂರನೇ ಒಂದು ಭಾಗದಷ್ಟು ವಯಸ್ಕರು 2022ರಲ್ಲಿ ಶಿಫಾರಸು ಮಾಡಿರುವ ದೈಹಿಕ ಚಟುವಟಿಕೆಯನ್ನು ಪೂರೈಸಲಿಲ್ಲ ಎಂಬುದನ್ನು ತೋರಿಸಿದೆ. ಪರಿಣಾಮ ಹೋಲಿಸಿ ನೋಡಿದಾಗ 2010 ಮತ್ತು 2022 ರ ನಡುವೆ ಸುಮಾರು ಶೇ 5 ಪಾಯಿಂಟ್‌ಗಳಷ್ಟು ವಯಸ್ಕರಲ್ಲಿ ದೈಹಿಕ ನಿಷ್ಕ್ರಿಯತೆ ಹೆಚ್ಚು ಕಂಡು ಬಂದಿದೆ.
ಇದು ಹೀಗೆ ಮುಂದುವರಿದರೆ, ನಿಷ್ಕ್ರಿಯತೆಯ ಮಟ್ಟ 2030ರ ಸಮಯದಲ್ಲಿ ಶೇಕಡಾ 35ಕ್ಕೆ ಏರಲಿದೆ ಎಂದು ಅಂದಾಜಿಸಲಾಗಿದೆ. ದೈಹಿಕ ನಿಷ್ಕ್ರಿಯತೆಯಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು, ಟೈಪ್ 2 ಮಧುಮೇಹ, ಬುದ್ಧಿಮಾಂದ್ಯತೆ ಮತ್ತು ಸ್ತನ ಮತ್ತು ಕೊಲೊನ್, ಕ್ಯಾನ್ಸರ್‌ಗಳಂತಹ ಅಪಾಯವನ್ನು ಉಂಟು ಮಾಡುತ್ತದೆ ಎಂದು ಡಬ್ಲೂಹೆಚ್ಒ ಹೇಳಿದೆ. ಈ ಅಧ್ಯಯನವನ್ನು WHO ಸಂಶೋಧಕರು ತಮ್ಮ ಅಕಾಡೆಮಿ ಸಹೋದ್ಯೋಗಿಗಳೊಂದಿಗೆ ನಡೆಸಿ ದಿ ಲ್ಯಾನ್ಸೆಟ್ ಗ್ಲೋಬಲ್ ಹೆಲ್ತ್ ಜರ್ನಲ್‌ನಲ್ಲಿ ವರದಿ ಪ್ರಕಟಿಸಿದ್ದಾರೆ.
ಈಗ ಮಾಡಲಾಗಿರುವ ಹೊಸ ಸಂಶೋಧನೆಗಳು ಅಧಿಕ ದೈಹಿಕ ಚಟುವಟಿಕೆಗಳ ಮೂಲಕ ಅಪಾಯಕಾರಿ ಕ್ಯಾನ್ಸರ್, ಹೃದಯಪಘಾತಗಳನ್ನು ಕಡಿಮೆ ಮಾಡಲು ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಮತ್ತೊಂದು ಅವಕಾಶವನ್ನು ನೀಡುತ್ತದೆ ಎಂಬುದನ್ನು ಎತ್ತಿ ಹಿಡಿಯುತ್ತಿದೆ ಎಂದು ಡಬ್ಲೂಹೆಚ್ಒ ಮಹಾನಿರ್ದೇಶಕ ಡಾ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಅಭಿಪ್ರಾಯ ಪಟ್ಟಿದ್ದಾರೆ.
ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ (48 ಪ್ರತಿಶತ) ಮತ್ತು ದಕ್ಷಿಣ ಏಷ್ಯಾದಲ್ಲಿ (45 ಪ್ರತಿಶತ) ದೈಹಿಕ ನಿಷ್ಕ್ರಿಯತೆಯ ದರಗಳು ಹೆಚ್ಚಾಗಿರುವುದನ್ನು ಗಮನಿಸಲಾಗಿದೆ. ಇನ್ನು ಇತರ ಪ್ರದೇಶಗಳಲ್ಲಿ ನಿಷ್ಕ್ರಿಯತೆ ಮಟ್ಟವು ನೋಡುವುದಾದರೇ, ಪಾಶ್ಚಿಮಾತ್ಯ ದೇಶಗಳಲ್ಲಿ ಶೇಕಡ 28, ಓಷಿಯಾನಿಯಾದಲ್ಲಿ 14 ಶೇಕಡದವರೆಗೆ ಇರುತ್ತದೆ. ಪುರುಷರಿಗೆ ಹೋಲಿಸಿದರೆ ಜಾಗತಿಕವಾಗಿ ಮಹಿಳೆಯರಲ್ಲಿಯೇ ದೈಹಿಕ ನಿಷ್ಕ್ರಿಯತೆ ಮಟ್ಟ ಹೆಚ್ಚಿದೆ ಎಂದು WHO ಹೇಳಿದೆ.