ಹೈದರಾಬಾದ್: ಜುಲೈ 22 ಅನ್ನು 'ರಾಷ್ಟ್ರೀಯ ಮಾವು ದಿನ'ವೆಂದು ಆಚರಿಸಲಾಗುತ್ತದೆ. ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ಭಾಗವಾಗಿರುವ ಮಾವು, ಜನರಿಗೆ ಅತ್ಯಂತ ಪ್ರಿಯವಾದ ಹಣ್ಣುಗಳಲ್ಲಿ ಒಂದು. ಹಾಗಾಗಿ, ಇದನ್ನು 'ಹಣ್ಣುಗಳ ರಾಜ' ಎಂದು ಕರೆಯುವರು.
ಮಾವು ಉತ್ಸವ:ಅಂತಾರಾಷ್ಟ್ರೀಯ ಮಾವು ಉತ್ಸವ ಎನ್ನುವುದು ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ ಕಲ್ಪನೆ. 1987ರಿಂದ ಇದು ವಾರ್ಷಿಕ ಸಂಪ್ರದಾಯವಾಗಿದೆ. ದೇಶಾದ್ಯಂತ ಮಾವುಪ್ರಿಯರು ಈ ದಿನಕ್ಕಾಗಿ ಕುತೂಹಲದಿಂದ ಕಾಯುತ್ತಿರುತ್ತಾರೆ.
ಮಾವಿನ ಮಾರುಕಟ್ಟೆಗಳಲ್ಲಿ ಬಗೆಬಗೆ ಮಾವಿನ ಪ್ರದರ್ಶನಗಳು ನಡೆಯುತ್ತವೆ. ಅನೇಕ ದೇಶಗಳಲ್ಲೂ ಮಾವು ಸಂಸ್ಕೃತಿ ಮತ್ತು ಇತಿಹಾಸದ ಭಾಗವಾಗಿದೆ. 5,000 ವರ್ಷಗಳ ಹಿಂದೆ ಭಾರತದಲ್ಲಿ ಮಾವಿನ ಹಣ್ಣುಗಳನ್ನು ಮೊದಲು ಬೆಳೆಸಲಾಯಿತಂತೆ.
ಮಾವು ಗೋಡಂಬಿ ಕುಟುಂಬಕ್ಕೆ ಸೇರಿದ ಹಣ್ಣಾಗಿದ್ದು, ಮ್ಯಾಂಗಿಫೆರಾ ಇಂಡಿಕಾ (ಅನಾಕಾರ್ಡಿಯೇಸಿ) ಎಂಬ ವೈಜ್ಞಾನಿಕ ಹೆಸರು ಹೊಂದಿದೆ. ಮಾವಿನ ಹಣ್ಣು ಡ್ರೂಪ್ ಕುಟುಂಬದ ಭಾಗವಾಗಿರುವ ಹಣ್ಣು ಕೂಡಾ ಹೌದು. ಮಾವಿನಹಣ್ಣುಗಳು ತೆಳು, ಮೇಣದಂತಹ ಕೆಂಪು ಮತ್ತು ಹಸಿರು ಸಿಪ್ಪೆ ಹೊಂದಿದ್ದು ಹೊರಭಾಗವನ್ನು ಆವರಿಸುತ್ತದೆ. ಹಣ್ಣಿನೊಳಗೆ ಆಕರ್ಷಕ ಕಿತ್ತಳೆ ಬಣ್ಣದ ತಿರುಳು ಇರುತ್ತದೆ. ಮಾವಿನಹಣ್ಣುಗಳು ಸಿಹಿಯಾಗಿಯೂ ಸುಮಧುರ ಪರಿಮಳ ಹೊಂದಿರುತ್ತವೆ.
ಮಾವಿನ ಕೃಷಿ ಆಗ್ನೇಯ ಏಷ್ಯಾದಲ್ಲಿ ಹುಟ್ಟಿಕೊಂಡಿತು ಎಂದು ಹೇಳಲಾಗುತ್ತದೆ. ದಕ್ಷಿಣ ಏಷ್ಯಾದಲ್ಲಿ ಸುಮಾರು ಆರು ಸಾವಿರ ವರ್ಷಗಳಿಂದಲೂ ಮಾವು ಬೆಳೆಯಲಾಗುತ್ತಿದೆ. ಪ್ರಪಂಚದ ಒಟ್ಟು ಮಾವು ಉತ್ಪಾದನೆಯ ಪೈಕಿ ಸುಮಾರು ಶೇ 50ರಷ್ಟನ್ನು ಭಾರತ ಉತ್ಪಾದಿಸುತ್ತಿದ್ದು, ಅಗ್ರಸ್ಥಾನದಲ್ಲಿದೆ.
'ಮಾವು' ಎಂಬ ಹೆಸರು ಮಲಯಾಳಂ ಪದ 'ಮನ್ನಾ'ದಿಂದ ಹುಟ್ಟಿಕೊಂಡಿದೆ ಎನ್ನಲಾಗುತ್ತದೆ. ಈ ಹೆಸರನ್ನು ಪೋರ್ಚುಗೀಸರು 1498ರಲ್ಲಿ ಮಸಾಲೆಗಳ ವ್ಯಾಪಾರಕ್ಕಾಗಿ ಕೇರಳಕ್ಕೆ ಆಗಮಿಸಿದ್ದಾಗ ಅಳವಡಿಸಿಕೊಂಡರು ಎನ್ನುವುದು ಇತಿಹಾಸ. ಮಾವಿನ ಬೀಜಗಳನ್ನು ಸಾಗಿಸಲು ಅಡಚಣೆಯಿದ್ದ ಕಾರಣ 1700ರವರೆಗೂ ಪಶ್ಚಿಮ ಗೋಳಾರ್ಧದಲ್ಲಿ ಮಾವಿನ ಗಿಡಗಳನ್ನು ಪರಿಚಯಿಸಿಲ್ಲ. ಬ್ರೆಜಿಲ್‌ನಲ್ಲಿ ನೆಟ್ಟ ನಂತರ, ಸರಿಸುಮಾರು 1740ರಲ್ಲಿ ವೆಸ್ಟ್ ಇಂಡೀಸ್ ತಲುಪಿತು ಎಂದು ಹೇಳಲಾಗುತ್ತದೆ.
ಭಾರತದಲ್ಲಿ ಮಾವು ಉತ್ಪಾದನೆ: ಮಾವು ಭಾರತದಲ್ಲಿ ಸುದೀರ್ಘ ಮತ್ತು ಪುರಾತನ ಇತಿಹಾಸ ಹೊಂದಿದೆ. ವೇದಗಳು ಮತ್ತು ಪುರಾಣಗಳು ಸೇರಿದಂತೆ ಪ್ರಾಚೀನ ಭಾರತೀಯ ಗ್ರಂಥಗಳಲ್ಲಿ ಮಾವಿನ ಹಣ್ಣನ್ನು ಪ್ರೀತಿ, ಫಲವತ್ತತೆ ಮತ್ತು ಸಮೃದ್ಧಿಯ ಸಂಕೇತವೆಂದು ಉಲ್ಲೇಖಿಸಲಾಗಿದೆ. ಪ್ರಾಚೀನ ಕಾಲದಲ್ಲಿ 'ರಸಾಲ' ಅಥವಾ 'ಸಹಕಾರ' ಎಂದು ಕೂಡಾ ಕರೆಯಲಾಗುತ್ತಿತ್ತು. ಭಾರತ ಒಟ್ಟು 25 ಮಿಲಿಯನ್ ಮೆಟ್ರಿಕ್ ಟನ್ ಮಾವು ಉತ್ಪಾದಿಸುತ್ತಿದ್ದು, ವಿಶ್ವದ ಅತಿದೊಡ್ಡ ಮಾವು ಉತ್ಪಾದಕ ಎಂಬ ಪ್ರಸಿದ್ಧಿ ಹೊಂದಿದೆ. ನಂತರದ ಸ್ಥಾನದಲ್ಲಿ ಚೀನಾ, ಇಂಡೋನೇಷ್ಯಾ, ಪಾಕಿಸ್ತಾನ ಮತ್ತು ಮೆಕ್ಸಿಕೊ ದೇಶಗಳಿವೆ. ಭಾರತ ಅಲ್ಫೊನ್ಸೊ ಮತ್ತು ಕೇಸರ್‌ನಂತಹ ಪ್ರಮುಖ ಮಾವು ಪ್ರಭೇದಗಳಿಗೆ ಹೆಸರುವಾಸಿಯಾಗಿದೆ.
ಭಾರತದಲ್ಲಿ ಸಾವಿರಕ್ಕೂ ಹೆಚ್ಚು ಮಾವಿನ ತಳಿಗಳು!:ಭಾರತದಲ್ಲಿ 1,000ಕ್ಕೂ ಹೆಚ್ಚು ವಾಣಿಜ್ಯ ಪ್ರಭೇದಗಳು ಸೇರಿದಂತೆ ಸುಮಾರು 1,500 ವಿಧದ ಮಾವು ಬೆಳೆಯಲಾಗುತ್ತದೆ. ಪ್ರತಿ ಮುಖ್ಯ ತಳಿಯೂ ವಿಶಿಷ್ಟ ರುಚಿ ಮತ್ತು ಸುವಾಸನೆ ಹೊಂದಿದೆ. ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯ ಮಾವಿನಹಣ್ಣುಗಳನ್ನು ಬೆಳೆಯಲಾಗುತ್ತಿದೆ.
- ಅಲ್ಫೋನ್ಸೋ ಮಾವು - ರತ್ನಗಿರಿ, ಮಹಾರಾಷ್ಟ್ರ
- ಕೇಸರ್ ಮಾವು - ಜುನಾಗಢ್, ಗುಜರಾತ್
- ದಶೇರಿ ಮಾವು - ಲಕ್ನೋ ಮತ್ತು ಮಲಿಹಾಬಾದ್, ಉತ್ತರ ಪ್ರದೇಶ
- ಹಿಮ್ಸಾಗರ್ ಮತ್ತು ಕಿಶನ್ ಭೋಗ್ ಮಾವು- ಮುರ್ಷಿದಾಬಾದ್, ಪಶ್ಚಿಮ ಬಂಗಾಳ
- ಚೌಸಾ ಮಾವು - ಹಾರ್ದೋಯಿ, ಉತ್ತರ ಪ್ರದೇಶ
- ಬಾದಾಮಿ ಮಾವು -ಉತ್ತರ ಕರ್ನಾಟಕ
- ಸಫೇದಾ ಮಾವು - ಆಂಧ್ರ ಪ್ರದೇಶ
- ಬಾಂಬೆ ಗ್ರೀನ್ ಮಾಂಗೋಸ್ - ಪಂಜಾಬ್
- ಲಾಂಗ್ರಾ ಮಾವು - ವಾರಣಾಸಿ, ಉತ್ತರ ಪ್ರದೇಶ
- ತೋತಾಪುರಿ ಮಾವು - ಬೆಂಗಳೂರು, ಕರ್ನಾಟಕ
- ನೀಲಂ ಮಾವು - ಆಂಧ್ರ ಪ್ರದೇಶ
- ರಾಸ್ಪ್ಬೆರಿ ಮಾವು - ಕರ್ನಾಟಕ
- ಮಾಲ್ಗೋವಾ/ಮುಲ್ಗೋಬ ಮಾವು - ಸೇಲಂ, ತಮಿಳುನಾಡು
- ಲಕ್ಷ್ಮಣಭೋಗ್ ಮಾವು - ಮಾಲ್ಡಾ, ಪಶ್ಚಿಮ ಬಂಗಾಳ
- ಅಮ್ರಪಾಲಿ ಮಾವು - ಭಾರತದಾದ್ಯಂತ
- ಇಮಾಮ್ ಪಸಂದ್ ಮಾವು- ಆಂಧ್ರ ಪ್ರದೇಶ/ತೆಲಂಗಾಣ/ತಮಿಳುನಾಡು
- ಫಜ್ಲಿ ಮಾವು - ಬಿಹಾರ/ಪಶ್ಚಿಮ ಬಂಗಾಳ
- ಮಂಕುರಾದ್ ಮಾವು - ಗೋವಾ
- ಪಹೇರಿ/ಪೈರಿ ಮಾವು - ಗುಜರಾತ್
- ಮಲ್ಲಿಕಾ ಮಾವು- ಭಾರತದಾದ್ಯಂತ
- ಗುಲಾಬ್ ಖಾಸ್ ಮಾವು - ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ
- ವನರಾಜ್ ಮಾವು - ಗುಜರಾತ್
- ಕಿಲಿಚುಂಡನ್ ಮಾವು - ಕೇರಳ
- ರೊಮೇನಿಯನ್ ಮಾವು - ಚೆನ್ನೈ
ಮಾವಿನ ಆರೋಗ್ಯ ಪ್ರಯೋಜನಗಳು:
ಜೀವಸತ್ವಗಳು, ಖನಿಜಗಳು ಸಮೃದ್ಧ: ಮಾವಿನ ಹಣ್ಣಿನಲ್ಲಿ ಪೊಟ್ಯಾಸಿಯಂ ಮತ್ತು ಮೆಗ್ನೀಸಿಯಂ ಜೊತೆಗೆ ಎ, ಸಿ, ಇ ವಿಟಮಿನ್‌ಗಳು ಅಧಿಕವಾಗಿವೆ. ಇದು ಪ್ರತಿರಕ್ಷಣಾ ವ್ಯವಸ್ಥೆ, ಚರ್ಮದ ಆರೋಗ್ಯ ಮತ್ತು ದೇಹದ ದ್ರವಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.