ಹೈದರಾಬಾದ್: ಬಡತನ ಮಾನಸಿಕ ಕಾಯಿಲೆಗಳಿಗೆ ಕಾರಣವಾಗಬಹುದು. ಇವು ಪರಸ್ಪರ ಒಂದಕ್ಕೊಂದು ಸಂಬಂಧ ಹೊಂದಿವೆ ಎಂದು ಹೊಸ ಅಧ್ಯಯನ ತಿಳಿಸಿದೆ.
ಈ ಹಿಂದಿನ ಅಧ್ಯಯನಗಳು ಕೂಡಾ ಬಡತನ ಮತ್ತು ಮಾನಸಿಕ ಅಸ್ವಸ್ಥತೆಯ ನಡುವೆ ಬಲವಾದ ಸಂಬಂಧವನ್ನು ತೋರಿಸಿವೆ. ಆದರೆ, ಸಂಶೋಧಕರಿಗೆ ಇವೆರಡರ ನಡುವಿನ ಕಾರಣ ಮತ್ತು ಪರಿಣಾಮಗಳ ಸಂಬಂಧವನ್ನು ಗ್ರಹಿಸಲು ಸಾಧ್ಯವಾಗಿಲ್ಲ.
ಕೆಲವು ಮಾನಸಿಕ ಪರಿಸ್ಥಿತಿಗಳು ಹಣಕಾಸಿನ ಸ್ಥಿರತೆಯ ಮೇಲೂ ಪರಿಣಾಮ ಬೀರುತ್ತವೆ. ಬಡತನ ತೀವ್ರ ಮಾನಸಿಕ ಸಮಸ್ಯೆಗಳಿಗೂ ಕಾರಣವಾಗಬಹುದು ಎಂದು ಅಧ್ಯಯನದ ಲೇಖಕರು ಕಂಡುಕೊಂಡಿದ್ದಾರೆ. ಈ ಕುರಿತು ಯುಕೆ ಬಯೋಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಸೈಕಿಯಾಟ್ರಿಕ್ ಜಿನೋಮಿಕ್ ಕನ್ಸೋರ್ಟಿಯಂನಿಂದ ಪಡೆದ ದತ್ತಾಂಶವನ್ನು ವಿಶ್ಲೇಷಿಸಿದ್ದಾರೆ.
ಮಕ್ಕಳಲ್ಲಿ ಉಂಟಾಗುವ ಗಮನದ ಕೊರತೆಯ ಸಮಸ್ಯೆಗಳಾದ ಹೈಪರ್ ಆ್ಯಕ್ಟಿವಿಟಿ ಡಿಸಾರ್ಡರ್ (ಎಡಿಎಚ್ಡಿ) ಮತ್ತು ಸ್ಕಿಜೋಫ್ರೇನಿಯಾಕ್ಕೆ ಬಡತನ ಕಾರಣ ಎಂದು ಕಂಡುಬಂದಿದೆ. ಅದರಲ್ಲೂ ಮುಖ್ಯವಾಗಿ, ಬಡತನ ಮಾನಸಿಕ ಖಿನ್ನತೆ ಮತ್ತು ಸ್ಕಿಜೋಫ್ರೇನಿಯಾಗೆ ಕೊಡುಗೆ ನೀಡುತ್ತದೆ ಎಂದು ನೆದರ್ಲ್ಯಾಂಡ್ನ ಆಮ್‌ಸ್ಟರ್‌ಡ್ಯಾಮ್ ವಿಶ್ವವಿದ್ಯಾಲಯದ ಮನೋವೈದ್ಯ ಮಾರ್ಕೊ ಬೋಕ್ಸ್ ಹೇಳಿದ್ದಾರೆ.