ಅಬುಬಾ(ನೈಜೀರಿಯಾ): ಆಫ್ರಿಕಾದ ಎರಡನೇ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನೈಜೀರಿಯಾದಲ್ಲಿ ಮಾರಾಣಾಂತಿಕ ಲಸ್ಸಾ ಜ್ವರ ಉಲ್ಬಣಗೊಂಡಿದ್ದು, ಇದರಿಂದ 72 ಸಾವುಗಳು ಸಂಭವಿಸಿವೆ ಎಂದು ವರದಿ ತಿಳಿಸಿದೆ. ಈ ವರ್ಷ ಆರಂಭವಾದಾಗಿನಿಂದ 441 ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ 72 ಸಾವು ಸಂಭವಿಸಿವೆ ಎಂದು ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಲಸ್ಸಾ ಜ್ವರ?:ಆಫ್ರಿಕಾದಲ್ಲಿ ಕಂಡು ಬಂದಿರುವ ಮಾರಾಣಾಂತಿಕ ಲಸ್ಸಾವು ವೈರಸ್ನಿಂದ ಹರಡುವ ಜ್ವರವಾಗಿದೆ. ಇದು ವೈರಲ್ ಹೆಮಾರೊಜಿಕ್ ಜ್ವರ ಆಗಿದ್ದು, ಲಸ್ಸಾ ಜ್ವರವೂ ಮೂತ್ರ ಅಥವಾ ಮಲದಿಂದ ಕಲುಷಿತಗೊಂಡ ಆಹಾರ ಅಥವಾ ಮನೆಯ ವಸ್ತುಗಳ ಮೂಲಕ ವ್ಯಕ್ತಿಗಳಿಗೆ ಅಂಟಿಕೊಳ್ಳಲಿದೆ. ಅಲ್ಲದೇ ಇಲಿಗಳ ಲಾಲಾರಸ, ಮೂತ್ರ ಮತ್ತು ಮಲದ ಸಂಪರ್ಕಕ್ಕೆ ಮನುಷ್ಯ ಬಂದಾಗ ಕೂಡ ಈ ಜ್ವರ ಹರಡಲಿದೆ ಎಂದು ವರದಿ ತಿಳಿಸಿದೆ.
ಜನವರಿಯಿಂದ 21 ರಾಜ್ಯಗಳಲ್ಲಿ ಈ ಜ್ವರ ಉಲ್ಬಣಗೊಂಡಿದೆ ಎಂದು ನೈಜೀರಿಯಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ತಿಳಿಸಿದೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಒಂಡೊ, ಇಡೊ ಮತ್ತು ಬಚ್ಚಿಯ ಮೂರು ರಾಜ್ಯದಲ್ಲಿ ಒಟ್ಟಾರೆಯಾಗಿ ಶೇ 65ರಷ್ಟು ಪ್ರಕರಣಗಳು ದೃಢಪಟ್ಟಿವೆ. ಇನ್ನುಳಿದ ಶೇ 35ರಷ್ಟು ಪ್ರಕರಣಗಳು ಉಳಿದ 18 ಇತರ ರಾಜ್ಯಗಳಿಂದ ವರದಿಯಾಗಿದೆ ಎಂದು ಎನ್ಸಿಡಿಸಿ ತಿಳಿಸಿದೆ.