ಕೋಯಿಕ್ಕೊಡ್, ಕೇರಳ: ಕಣ್ಣೂರಿನ ಥಲಿಪರಂಬದ ಮೂರುವರೆ ವರ್ಷದ ಪುಟ್ಟ ಕಂದ ಅಮೀಬಿಕ್ ಎನ್ಸೆಫಾಲಿಟಿಸ್ ಎಂಬ ಮಿದುಳು ತಿನ್ನುವ ಸೋಂಕಿನಿಂದ ಬಳಲುತ್ತಿರುವುದು ಪಿಸಿಆರ್ ಪರೀಕ್ಷೆಯಿಂದ ದೃಢಪಟ್ಟಿದೆ. ಸದ್ಯ ಬಾಲಕನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಮೀಬಿಕ್ ಎನ್ಸೆಫಾಲಿಟಿಸ್ಗೆ ಬಾಲಕ ತುತ್ತಾದ ಎಂಬ ಕುರಿತು ಪರಿಯರಾಮ್ ಮೆಡಿಕಲ್ ಕಾಲೇಜ್ ಪ್ರಾಥಮಿಕ ಪರೀಕ್ಷೆ ನಡೆಸಿದ್ದು, ವರದಿಯಲ್ಲಿ ಸೋಂಕು ಕಂಡು ಬಂದಿತು. ಬಳಿಕ ಸೋಂಕಿನ ಸ್ಯಾಂಪಲ್ ಪರೀಕ್ಷೆಗಳನ್ನು ಪುದುಚೇರಿಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅಲ್ಲಿ ಕೂಡ ಪರೀಕ್ಷೆಯಲ್ಲಿ ಬಾಲಕ ಮಿದುಳು ತಿನ್ನುವ ಅಮೀಬಾ ಸೋಂಕಿಗೆ ತುತ್ತಾಗಿರುವುದು ದೃಢಪಟ್ಟಿದೆ. ಸದ್ಯ ಬಾಲಕ ವೈದ್ಯಕೀಯ ಪರೀಕ್ಷೆಗೆ ಪ್ರತಿಕ್ರಿಯಿಸುತ್ತಿದ್ದು, ಆತನಿಗೆ ವೆಂಟಿಲೇಟರ್ ಚಿಕಿತ್ಸೆಗೆ ಒಳಗಾಗಿಸಲಾಗಿದೆ.
ಇನ್ನು ಕೋಯಿಕ್ಕೋಡ್ನಲ್ಲಿ ಈ ಸೋಂಕಿಗೆ ಒಳಗಾಗಿದ್ದ ನಾಲ್ಕೂವರೆ ವರ್ಷದ ಬಾಲಕ ಸ್ಥಿತಿ ಸುಧಾರಣೆ ಕಂಡಿದ್ದು, ಬಾಲಕನನ್ನು ತುರ್ತು ನಿಗಾ ಘಟಕದಿಂದ ಸಾಮಾನ್ಯ ರೂಮ್ಗೆ ವರ್ಗಾಯಿಸಲಾಗಿದೆ. ಇದೇ ಸಮಸ್ಯೆಯಿಂದ ಬಳಲುತ್ತಿದ್ದ 14 ವರ್ಷದ ಬಾಲಕ 22 ದಿನಗಳ ಚಿಕಿತ್ಸೆ ಬಳಿಕ ಚೇತರಿಕೆ ಕಂಡಿದ್ದು, ಪೋಷಕರಲ್ಲಿ ನಿಟ್ಟುಸಿರುವ ಬಿಡುವಂತೆ ಆಗಿದ್ದು, ಉಳಿದ ರೋಗಿಗಳ ಚೇತರಿಗೆ ಬಗ್ಗೆ ಆಶಾಭಾವನೆ ಹೊಂದುವಂತೆ ಆಗಿದೆ.
ಈಜುತಾಣಗಳ ಬಗ್ಗೆ ಇರಲಿ ಎಚ್ಚರ: ಈಜು, ಕೆರೆಕಟ್ಟೆ ಸ್ನಾನದ ಸಂದರ್ಭದಲ್ಲಿ ಮೂಗಿನ ಮೂಲಕ ಈ ಮಿದುಳು ತಿನ್ನುವ ಅಮೀಬಾ ದೇಹ ಸೇರುತ್ತದೆ. ಈ ಅಮೀಬಾವು ತಾಜಾ ಮತ್ತು ಬೆಚ್ಚಗಿನ ನೀರು ಮತ್ತು ಮಣ್ಣಿನಲ್ಲಿ ಅಡಗಿರುತ್ತದೆ. ಇದು ಮುಕ್ತ ಜೀವಂತ ಅಮೀಬಾ ಆಗಿದೆ. ಇದು ಮಿದುಳಿನ ನರ ಮಂಡಲದ ಮೇಲೆ ಗಂಭೀರ ಹಾನಿಯನ್ನು ಉಂಟು ಮಾಡುತ್ತದೆ. ಈ ಸೋಂಕಿನ ಸಾವಿನ ದರ ಅತ್ಯಂತ ಹೆಚ್ಚಿದೆ. ಹೀಗಾಗಿ ಭಾರಿ ಎಚ್ಚರಿಕೆಯಿಂದ ಇರುವುದು ಉತ್ತಮ ಅನ್ನುವುದು ತಜ್ಞರ ಸಲಹೆ ಆಗಿದೆ. ಏಕೆಂದರೆ ಈ ರೋಗಕಾರಕ ದೇಹ ಹೊಕ್ಕು ವಾರವಾದರೂ ಯಾವುದೇ ಲಕ್ಷಣವನ್ನು ತೋರುವುದಿಲ್ಲ ಇದರಿಂದ ರೋಗಿಯ ಉಳಿಯುವಿಕೆ ಮೇಲೆ ಸವಾಲಾಗುತ್ತದೆ. ವಾರದ ಬಳಿಕ ತಲೆನೋವು, ಜ್ವರ ಮತ್ತು ವಾಂತಿ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಈ ರೋಗಗಳು ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ ಎನ್ನುತ್ತಾರೆ ತಜ್ಞರು. ಇದು ಸಮಾಧಾನದ ವಿಷಯವಾದರೂ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.
ಈ ಏಕಕೋಶ ಜೀವದಿಂದ ಆರೋಗ್ಯ ಕಾಪಾಡಿಕೊಳ್ಳಲು ಯಾವ ಮುನ್ನೆಚ್ಚರಿಕೆ ಪಾಲಿಸಬೇಕು?:
- ಶುಚಿಯಿಲ್ಲದ ಈಜುಕೊಳ, ಕೆರೆ ಕಟ್ಟೆಗಳಲ್ಲಿ ಸ್ನಾನ ಮಾಡುವುದು ತಪ್ಪಿಸಬೇಕು.
- ನಿಯಮಿತವಾಗಿ ಈಜುಕೊಳ ಮತ್ತು ಬಾವಿ, ಕೊಳಗಳನ್ನು ಕ್ಲೊರಿನೇಟ್ ಮಾಡಬೇಕು.
- ನೀರಿಗೆ ಇಳಿದಾಗ ಆ ನೀರು ಮೂಗಿಗೆ ತಲುಪದಂತೆ ನೋಡಿಕೊಳ್ಳಿ.
- ಒಂದು ವೇಳೆ ಈಜು ಅನಿವಾರ್ಯವಾದರೆ, ಮೂಗಿಗೆ ಕ್ಲಿಪ್ನಂತಹ ಸುರಕ್ಷತಾ ಕ್ರಮ ತೆಗೆದುಕೊಳ್ಳುವುದು ಅವಶ್ಯವಾಗಿದೆ
ಇದನ್ನೂ ಓದಿ: ಕರಾವಳಿ ಪ್ರದೇಶದ ಜನರೇ ಎಚ್ಚರ: ಮಳೆಗಾಲದಲ್ಲಿ ಮಿದುಳು ಸೋಂಕಿನ ಅಪಾಯ ಹೆಚ್ಚು