ನಾವು ಇಷ್ಟಪಡುವ ಬಟ್ಟೆಗಳ ಮೇಲೆ ಸ್ವಲ್ಪ ಕಲೆಯಾದರೂ ಸಾಕು, ಅದು ನಮ್ಮ ದಿನದ ಮೂಡನ್ನೇ ಹಾಳು ಮಾಡಿಬಿಡುತ್ತದೆ. ಬಿಳಿ, ತಿಳಿ ಗುಲಾಬಿ ಬಣ್ಣಗಳ ಪ್ಲೈನ್ ಬಟ್ಟೆಗಳ ಮೇಲಂತೂ ಸಣ್ಣ ಕಲೆಯಾದರೂ ಅದು ಬಟ್ಟೆಯ ಅಂದ ಕೆಡಿಸಿಬಿಡುತ್ತದೆ. ನಾವು ಅಂತಹ ಕಲೆಗಳನ್ನು ತೆಗೆಯಲು ಹರಸಾಹಸಪಟ್ಟು, ಕೊನೆಗೆ ಹೋಗದೇ ಬಟ್ಟೆಯನ್ನೇ ಬಿಸಾಕುವಂಥ ಸಂದರ್ಭವನ್ನೂ ಎದುರಿಸಿರುತ್ತೇವೆ. ಕೆಲವು ವಸ್ತುಗಳು ಬಟ್ಟೆ ಮೇಲೆ ಬಿದ್ದರೆ ಅವುಗಳನ್ನು ತೆಗೆಯುವುದು ಬಲು ಕಷ್ಟ. ಆದರೆ ಇಲ್ಲಿರುವ ಉಪಾಯಗಳನ್ನು ನೀವು ಪಾಲಿಸಿದರೆ ಎಂತಹ ಕಲೆಗಳನ್ನಾದರೂ ಸುಲಭವಾಗಿ ತೆಗೆದುಹಾಕಬಹುದು.
ವಿನೆಗರ್: ಬಟ್ಟೆಗಳ ಮೇಲೆ ಸಾಮಾನ್ಯವಾದ ಕಲೆಗಳಿದ್ದಲ್ಲಿ, ಅವುಗಳನ್ನು ಹೋಗಲಾಡಿಸಲು ಮನೆಯಲ್ಲಿಯೇ ಇರುವ ವಿನೆಗರ್ ಸಾಕು. ಎರಡು ಕಪ್ ನೀರಿಗೆ ಒಂದು ಚಮಚ ವಿನೆಗರ್ ಹಾಕಿ ಮಿಶ್ರಣ ಮಾಡಿ. ಆ ನೀರನ್ನು ಕಲೆ ಇರುವ ಜಾಗಕ್ಕೆ ಸಿಂಪಡಿಸಿ. ನಿಧಾನವಾಗಿ ಉಜ್ಜಿ. ಕಲೆ ಕ್ರಮೇಣ ಮಾಯ.
ಬಟ್ಟೆಗಳ ಮೇಲೆ ಎಣ್ಣೆಯ ಕಲೆಗಳಾದರೂ ಅವುಗಳನ್ನು ಹೋಗಲಾಡಿಸುವುದು ತುಂಬಾ ಕಷ್ಟ. ಮೊದಲು ಬಟ್ಟೆಯನ್ನು ನೀರಿನಲ್ಲಿ ನೆನೆಸಿಡಿ. ನಂತರ ಕಲೆಯಾಗಿರುವ ಜಾಗಕ್ಕೆ ಡಿಶ್ವಾಶಿಂಗ್ ಲಿಕ್ವಿಡ್ ಹಾಕಿ. ಕಲೆ ಮಾಯವಾಗುವವರೆಗೆ ಚೆನ್ನಾಗಿ ಸ್ಕ್ರಬ್ ಮಾಡಿ. ಆಗಲೂ ಹೋಗದಿದ್ದರೆ, ಅಡುಗೆ ಸೋಡಾವನ್ನು ಕಲೆಯ ಮೇಲೆ ಹಾಕಿ ಸ್ವಲ್ಪ ಸಮಯ ಬಿಡಿ. ನಂತರ ಕಲೆ ಇರುವ ಜಾಗದಲ್ಲಿ ಉಜ್ಜಿ. ಅಂತಿಮವಾಗಿ, ಎರಡು ಕಪ್ ವಿನೆಗರ್ ಮಿಶ್ರಿತ ನೀರನ್ನು ಕಲೆ ಇರುವ ಜಾಗಕ್ಕೆ ಸಿಂಪಡಿಸಿ, ಉಜ್ಜಿ.
ಕಳಪೆ ಗುಣಮಟ್ಟದ ಬಟ್ಟೆಗಳು ಮೊದಲ ಬಾರಿಗೆ ತೊಳೆಯುವಾಗಲೇ ಬಣ್ಣ ಮಸುಕಾಗುತ್ತದೆ. ನೀರಲ್ಲಿ ಹಾಕಿಟ್ಟಾಗ ಆ ಬಟ್ಟೆಯ ಬಣ್ಣ ಬೇರೆ ಬಟ್ಟೆಗಳಿಗೆ ಅಂಟಿಕೊಳ್ಳುತ್ತವೆ. ಬಣ್ಣ ಇತರ ಬಟ್ಟೆಗಳನ್ನೂ ಹಾಳು ಮಾಡುತ್ತವೆ. ಅಂತಹ ಕಲೆಗಳನ್ನು ತೆಗೆದುಹಾಕಲು ಸಣ್ಣ ಬಿಳಿ ಬಟ್ಟೆಯನ್ನು ತೆಗೆದುಕೊಳ್ಳಿ. ಹೇರ್ ಸ್ಪ್ರೇ ಅಥವಾ ಶೇ 80 ಆಲ್ಕೋಹಾಲ್ ಹೊಂದಿರುವಂತಹ ಯಾವುದೇ ದ್ರಾವಣವನ್ನು ಸ್ಪ್ರೇ ಮಾಡಿ. ಬಟ್ಟೆಯಿಂದ ಕಲೆಯಾಗಿರುವ ಜಾಗವನ್ನು ಉಜ್ಜಿರಿ.