Tips for Maintaining Brain Health:ಮೆದುಳು ಮಾನವ ದೇಹದಲ್ಲಿನ ಬಹುಮುಖ್ಯ ಅಂಗವಾಗಿದೆ. ನಮ್ಮ ಮೆದುಳು ಕ್ರಿಯಾಶೀಲ ಹಾಗೂ ಆರೋಗ್ಯಕರವಾಗಿದ್ದರೆ ಮಾತ್ರ, ನಮ್ಮ ದೇಹವು ಸರಾಗವಾಗಿ ಕಾರ್ಯನಿರ್ವಹಿಸಲು ಸಾಧ್ಯವಿದೆ. ಅನಾರೋಗ್ಯಕರ ಜೀವನಶೈಲಿ, ಅನಿಯಮಿತ ಆಹಾರ ಪದ್ಧತಿ, ನಿರಂತರ ಒತ್ತಡ, ನಿದ್ರೆಯ ಕೊರತೆ, ಧೂಮಪಾನ ಹಾಗೂ ಮದ್ಯಪಾನದಂತಹ ಕೆಟ್ಟಚಟಗಳು ನಮ್ಮ ಮೆದುಳಿನ ಚಟುವಟಿಕೆಗಳನ್ನು ಮಂದಗೊಳಿಸುತ್ತವೆ. ಈ ಹಿನ್ನೆಲೆಯಲ್ಲಿ ನರರೋಗ ತಜ್ಞೆ ಡಾ. ಇವಾಂಜೆಲಿನ್ ಬ್ಲೆಸಿ ಹೇಳುವಂತೆ ಮೆದುಳನ್ನು ಆರೋಗ್ಯವಾಗಿಡುವ ಈ ಐದು ಸೂತ್ರಗಳನ್ನು ತಿಳಿದುಕೊಳ್ಳೋಣ..
- 7ರಿಂದ 8 ಗಂಟೆಗಳ ವಿಶ್ರಾಂತಿ ಕಡ್ಡಾಯ:ಖ್ಯಾತ ನರರೋಗ ತಜ್ಞ ಡಾ. ಇವಾಂಜೆಲಿನ್ ಬ್ಲೆಸಿ ಪ್ರತಿಕ್ರಿಯಿಸಿ, ನಿದ್ರೆಗೂ ಮೆದುಳಿಗೆ ನಿಕಟ ಸಂಬಂಧವಿದೆ. ನಿದ್ರೆಯ ಸಮಯದಲ್ಲಿ ಮೆದುಳು ವಿಶ್ರಾಂತಿ ಪಡೆಯುತ್ತದೆ. ನೀವು ಕನಿಷ್ಠ 7 ಗಂಟೆಗಳ ಕಾಲ ನಿದ್ರೆ ಮಾಡದಿದ್ದರೆ, ಮೆಮೊರಿ ಮೇಲೆ ಪರಿಣಾಮ ಬೀರುತ್ತದೆ. ಯಾವುದನ್ನೂ ಸರಿಯಾಗಿ ನೆನಪಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳುತ್ತಾರೆ. ಇದರಿಂದಾಗಿ, ಅವರು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗೋದಿಲ್ಲ ಹಾಗೂ ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಯಸ್ಕರು ದಿನಕ್ಕೆ ಕನಿಷ್ಠ 7ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಬೇಕಾಗುತ್ತದೆ. ಕನಿಷ್ಠ 7 ಗಂಟೆಗಳ ಕಾಲ ಅಡೆತಡೆಗಳಿಲ್ಲದೆ ನಿದ್ದೆ ಮಾಡಿದರೆ ಮೆದುಳು ಮಾತ್ರವಲ್ಲದೇ ದೇಹದ ಎಲ್ಲಾ ಭಾಗಗಳಿಗೂ ನವಚೈತನ್ಯ ಬರುತ್ತದೆ. ನಿದ್ರೆಯ ಕೊರತೆಯಿಂದ ಭವಿಷ್ಯದಲ್ಲಿ ಅಧಿಕ ರಕ್ತದೊತ್ತಡ, ಹೃದ್ರೋಗ ಹಾಗೂ ಮೆದುಳಿನ ಸ್ಟ್ರೋಕ್ ಅಪಾಯಗಳು ಹೆಚ್ಚುವ ಸಾಧ್ಯತೆಯು ಇದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.
- ಒತ್ತಡದಿಂದ ಮುಕ್ತರಾಗಿ:ಅನಾವಶ್ಯಕ ವಿಷಯಗಳ ಬಗ್ಗೆ ಹೆಚ್ಚು ಯೋಚಿಸುವುದರಿಂದ ಒತ್ತಡ ಉಂಟಾಗಿ ಮೆದುಳಿನ ಜೀವಕೋಶಗಳು ಸಾಯುವ ಅಪಾಯವಿದೆ. ಇದು ಜ್ಞಾಪಕ ಶಕ್ತಿ ಮತ್ತು ಆಲೋಚನಾ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಅನೇಕರು ಅನಾರೋಗ್ಯದಿಂದ ಬಳಲುತ್ತಿದ್ದರೂ ಕೆಲಸದಲ್ಲಿ ನಿರತರಾಗುತ್ತಾರೆ. ನೀವು ಈ ರೀತಿ ಅನಾರೋಗ್ಯದಿಂದ ಬಳಲುತ್ತಿರುವಾಗ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ಇಲ್ಲವಾದರೆ ಮೆದುಳು ತೀವ್ರ ಒತ್ತಡಕ್ಕೆ ಒಳಗಾಗುತ್ತದೆ. ದೀರ್ಘಾವಧಿಯ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ದೈಹಿಕ ಚಟುವಟಿಕೆಯಿಲ್ಲದೆ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಸ್ಥೂಲಕಾಯತೆ, ಹೃದಯ ಸಂಬಂಧಿ ಕಾಯಿಲೆಗಳು ಬರುವುದಲ್ಲದೆ ಮೆದುಳು ನಿಸ್ತೇಜವಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಅದಕ್ಕಾಗಿಯೇ ನಿಯಮಿತವಾಗಿ ವ್ಯಾಯಾಮ ಮಾಡಲು ಹಾಗೂ ಹಲವು ಗಂಟೆ ಕುಳಿತು ಕೆಲಸ ಮಾಡುವವರಿಗೆ ಪ್ರತಿ ಅರ್ಧಗಂಟೆಗೊಮ್ಮೆ ಎದ್ದು ಸ್ವಲ್ಪ ಕಾಲ ನಡೆಯಬೇಕು. ವಾರದಲ್ಲಿ ಕನಿಷ್ಠ 3 ದಿನ ಅರ್ಧ ಗಂಟೆ ವಾಕಿಂಗ್ ಮತ್ತು ಜಾಗಿಂಗ್ ಮಾಡುವುದರಿಂದ ಮೆದುಳು ಕ್ರಿಯಾಶೀಲವಾಗಿ ಸ್ಪಂದಿಸಲು ಸಹಕಾರಿಯಾಗುತ್ತದೆ ಎಂದು ಅವರು ಸಲಹೆ ನೀಡುತ್ತಾರೆ.
- ಸ್ಮಾರ್ಟ್ಫೋನ್ ಪರದೆಯು ಶತ್ರು: ಇಂದಿನ ತಂತ್ರಜ್ಞಾನದ ಯುಗದಲ್ಲಿ ಹೆಚ್ಚಿನ ಕೆಲಸಗಳು ಕಂಪ್ಯೂಟರ್ ಮುಂದೆ ಕುಳಿತುಕೊಂಡು ಮಾಡಬೇಕಾಗುತ್ತದೆ. ಹೆಚ್ಚಿನ ಸ್ಕ್ರೀನ್ ಟೈಮ್ ಮೆದುಳಿನ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ. ಸ್ಕ್ರೀನ್ ಅನ್ನು ದೀರ್ಘಕಾಲ ನೋಡಬೇಕಾದವರು ಸ್ಕ್ರೀನ್ನಿಂದ ತೊಂದರೆಯಾಗದಂತೆ ಕನ್ನಡಕವನ್ನು ಧರಿಸಲು ತಜ್ಞರು ಸಲಹೆ ಕೊಡುತ್ತಾರೆ. ಚಿಕ್ಕ ಮಕ್ಕಳು ಮತ್ತು ಯುವಕರು ದೀರ್ಘಕಾಲ ಫೋನ್ ಬಳಸುತ್ತಾರೆ. ಇದರಿಂದ ಕಣ್ಣಿನ ಮೇಲೆ ಬೀಳುವ ಕಿರಣಗಳಿಂದ ತಲೆನೋವಿನಿಂದ ಬಳಲುತ್ತಿದ್ದಾರೆ. ಫೋನ್ ಬಳಸುವಾಗ ನಿಮ್ಮ ತಲೆಯು 30 ಡಿಗ್ರಿಗಿಂತ ಹೆಚ್ಚು ಬಾಗಬಾರದು. ಫೋನ್ನಲ್ಲಿರುವ ‘ಡಿಜಿಟಲ್ ವೆಲ್ ಬೀಯಿಂಗ್’ ಎಂಬ ಆಯ್ಕೆಯಿಂದ ಮೊಬೈಲ್ ಸ್ಕ್ರೀನ್ ಎಷ್ಟು ಹೊತ್ತು ಆನ್ ಆಗಿದೆ ಎನ್ನುವುದನ್ನು ತಿಳಿಯಬಹುದು. ಈ ಆಯ್ಕೆಯ ಮೂಲಕ ನಾವು ಎಷ್ಟು ದಿನ ಫೋನ್ ಬಳಸುತ್ತಿದ್ದೇವೆ? ನೀವು ಯಾವ ಅಪ್ಲಿಕೇಶನ್ ಅನ್ನು ಹೆಚ್ಚು ಬಳಸುತ್ತೀರಿ? ಈ ವಿಷಯಗಳನ್ನು ತಿಳಿದುಕೊಂಡು ಜಾಗ್ರತೆ ವಹಿಸಬಹುದು ಎನ್ನುತ್ತಾರೆ ತಜ್ಞರು.
- ಹೆಡ್ ಫೋನ್ನಿಂದ ದೂರವಿರಿ:ಸುರಕ್ಷಿತ ಸ್ಥಳಗಳಲ್ಲಿ ಶಬ್ದಗಳನ್ನು ಕೇಳಲು ಸಾಧ್ಯವಾಗದ ಕಾರಣ ವಿಶ್ವದಾದ್ಯಂತ ಸುಮಾರು 100 ಮಿಲಿಯನ್ ಯುವಜನರು ಶ್ರವಣ ನಷ್ಟದ ಅಪಾಯದಲ್ಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಅಂದಾಜಿಸಿದೆ. ಒಂದು ಗಂಟೆಯ ಕಾಲ ಹೆಚ್ಚು ಸದ್ದಿನೊಂದಿಗೆ ಏರ್‌ಪಾಡ್‌ಗಳು ಮತ್ತು ಹೆಡ್‌ಫೋನ್‌ಗಳನ್ನು ಬಳಸುವುದರಿಂದ ಮೆದುಳು ತೀವ್ರ ಒತ್ತಡಕ್ಕೆ ಒಳಗಾಗುತ್ತದೆ. ಹೆಡ್‌ಫೋನ್‌ಗಳ ವಾಲ್ಯೂಮ್ ಶೇ. 60 ಕ್ಕಿಂತ ಹೆಚ್ಚಿದ್ದರೆ, ಮೆದುಳು ಸಾಮಾನ್ಯ ಸ್ಥಿತಿಯಿಂದ ದೂರ ಹೋಗುತ್ತದೆ. ಇದು ಸಹಜ ಸ್ಥಿತಿಗೆ ಮರಳಲು ತುಂಬಾ ಸಮಯ ಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಏಕಾಗ್ರತೆಯ ಕೊರತೆಯಲ್ಲದೆ, ಗಟ್ಟಿಯಾದ ಶಬ್ದಗಳನ್ನು ಕೇಳುವುದರಿಂದ ಶ್ರವಣ ದೋಷದ ಅಪಾಯವಿದೆ. ವೃದ್ಧಾಪ್ಯದಲ್ಲಿ ಶ್ರವಣ ಕ್ಷಮತೆ ಉಂಟಾದರೆ, ಮತ್ತೆ ಸಹಜ ಸ್ಥಿತಿಗೆ ಬರುವುದು ಕಷ್ಟವಾಗುತ್ತದೆ. ಜೊತೆಗೆ ಮೆದುಳಿಗೆ ನೇರವಾದ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವೈದ್ಯರು.
- ನಿಮಗೆ ಸಿಹಿ ತಿಂಡಿಗಳೇ ಶತ್ರು:ಅತಿ ಹೆಚ್ಚು ಸಿಹಿತಿಂಡಿಗಳನ್ನು ಸೇವಿಸುವುದರಿಂದ ಮೆದುಳಿನ ಕಾರ್ಯ ಚಟುವಟಿಕೆಗಳ ತೀವ್ರ ಪರಿಣಾಮ ಬೀರುತ್ತದೆ. ವಿಶೇಷವಾಗಿ ಸಂಸ್ಕರಿಸಿದ ಆಹಾರದಿಂದ ಅನಾನುಕೂಲತೆಗಳಿವೆ. ಹೆಚ್ಚಿನ ಫ್ರಕ್ಟೋಸ್ ಇರುವ ಪಾನೀಯಗಳನ್ನು ಸೇವಿಸುವುದರಿಂದ ಬೇಗನೆ ಹಸಿವಾಗುತ್ತದೆ. ಇದರಿಂದ ಬೊಜ್ಜು, ಮಧುಮೇಹ, ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳ ಮತ್ತು ದೀರ್ಘಕಾಲದ ಕಾಯಿಲೆಗಳು ಬರುವ ಅಪಾಯವೂ ಹೆಚ್ಚಿರುತ್ತದೆ. ಪಿತ್ತಜನಕಾಂಗದ ಕ್ಯಾನ್ಸರ್ಗೆ ಸಿಹಿ ಪದಾರ್ಥಗಳೂ ಕಾರಣ ಎಂದು ಹೇಳುತ್ತಾರೆ. ಇಂತಹ ಆಹಾರಗಳಿಂದ ಮೆದುಳು ತನ್ನ ಆಲೋಚನಾ ಶಕ್ತಿ ಕಳೆದುಕೊಳ್ಳುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳು ಸಕ್ಕರೆ ಪಾನೀಯಗಳನ್ನು ವಾರಕ್ಕೆ 200-355 ಮಿಲಿ ಗ್ರಾಂಗೆ ಮಿತಿಗೊಳಿಸಬೇಕು ಎಂದು ಸೂಚಿಸಲಾಗುತ್ತವೆ.