Rapidly spreading HMPV virus In China:ಕೋವಿಡ್ ವೈರಸ್ ಜಗತ್ತನ್ನು ಕಾಡಿದ ಐದು ವರ್ಷಗಳ ಬಳಿಕ ಇದೀಗ ಚೀನಾದಲ್ಲಿ ಮತ್ತೊಂದು ವೈರಸ್ ವೇಗವಾಗಿ ಹರಡುತ್ತಿರುವ ಕುರಿತು ವರದಿಯಾಗಿದೆ. ಅದುವೇ, 'ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್' (human metapneumo virus or HMPV) ಈ ವರ್ಷ ಆರಂಭದಲ್ಲಿ ಚೀನಾದಲ್ಲಿ ಕಾಣಿಸಿಕೊಂಡಿರುವ ಹೊಸ ವೈರಸ್ ಇದು. ನೆರೆಯ ರಾಷ್ಟ್ರಗಳು ಈ ವೈರಸ್ ಪತ್ತೆ ಮಾಡುವ ನಿಟ್ಟಿನಲ್ಲಿ ಸ್ಕ್ರೀನಿಂಗ್ ಹಾಗೂ ಪ್ರತ್ಯೇಕತೆಯ ಪ್ರೋಟೋಕಾಲ್‌ಗಳನ್ನು ಘೋಷಿಸಲು ಮುಂದಾಗಿವೆ.
ಜೊತೆಗೆ ಚೀನಾದ ಉತ್ತರ ಪ್ರಾಂತ್ಯಗಳಲ್ಲಿ 14 ವರ್ಷದೊಳಗಿನ ಮಕ್ಕಳು ಹೆಚ್ಚಿನ ಸಂಖ್ಯೆ ಈ ವೈರಸ್‌ನ ಸೋಂಕಿಗೆ ಒಳಗಾಗಿದ್ದಾರೆ. ಇದರ ಬೆನ್ನಲ್ಲೆ ಹೆಚ್ಚುತ್ತಿರುವ ಪ್ರಕರಣಗಳನ್ನು ತಡೆಗಟ್ಟಲು ಮತ್ತು ಪತ್ತೆ ಮಾಡಲು ಚೀನಾ ಸರ್ಕಾರವು ಸ್ಕ್ರೀನಿಂಗ್ ಹಾಗೂ ಪ್ರತ್ಯೇಕ ಪ್ರೋಟೋಕಾಲ್‌ಗಳು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಆರೋಗ್ಯ ಅಧಿಕಾರಿಗಳು ಈ ವೈರಸ್ ಹರಡುವಿಕೆ ನಿಯಂತ್ರಿಸಲು ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಜನರು ಕಿಕ್ಕಿರಿದು ಸೇರಿದ್ದಾರೆ. ಈ ಕುರಿತ ವಿಡಿಯೋಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಹರಿದಾಡುತ್ತಿವೆ.
ಏನಿದು HMPV ವೈರಸ್ ಮತ್ತು ಹೇಗೆ ಹರಡುತ್ತೆ?: ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (HMPV) ಎಂಬುದು ಉಸಿರಾಟಕ್ಕೆ ಸಂಬಂಧಿಸಿದ ವೈರಸ್ ಆಗಿದ್ದು, ಹೆಚ್ಚಿನ ವ್ಯಕ್ತಿಗಳಲ್ಲಿ ಕಡಿಮೆ ತೀವ್ರತೆಯ (ಶೀತ ತರಹದ ಲಕ್ಷಣ) ರೋಗಲಕ್ಷಣಗಳನ್ನು ಕಂಡುಬರುತ್ತದೆ. ಆದರೆ, ಮಕ್ಕಳು, ವೃದ್ಧರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಬ್ರಾಂಕೈಟಿಸ್ ಮತ್ತು ನ್ಯುಮೋನಿಯಾದಂತಹ ತೀವ್ರ ಲಕ್ಷಣಗಳು ಕಾಣಿಸುತ್ತವೆ.
ರಾಯಿಟರ್ಸ್ ವರದಿ ಪ್ರಕಾರ, ಚೀನಾದಲ್ಲಿ HMPV ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿವೆ. ಚೀನಾ ದೇಶವು ಇನ್ಫ್ಲುಯೆನ್ಸ A, ಮೈಕೋಪ್ಲಾಸ್ಮಾ ನ್ಯುಮೋನಿಯಾ, ರೈನೋವೈರಸ್ ಮತ್ತು COVID-19 ರೀತಿಯ ದೀರ್ಘಕಾಲದ ಪ್ರಕರಣಗಳಂತಹ ಇತರ ಸೋಂಕುಗಳ ಒಂದೇ ಸಮಯದಲ್ಲಿ ಏಕಾಏಕಿ ಹರಡಿವೆ. ಈ ಸೋಂಕುಗಳಂತೆಯೇ HMPV ವೈರಸ್ ವೇಗವಾಗಿ ಹಬ್ಬುತ್ತಿದೆ. ಇದರಿಂದ ಉತ್ತರ ಚೀನಾದಲ್ಲಿ ಆರೋಗ್ಯ ಸಂಪನ್ಮೂಲಗಳ ಕೊರತೆ ಉಂಟಾಗಿದೆ ಎಂದು ವರದಿ ತಿಳಿಸಿದೆ.
ಈ ವೈರಸ್‌ನ ಲಕ್ಷಣಗಳೇನು?:
- ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ತಿಳಿಸುವ ಪ್ರಕಾರ, HMPV ವೈರಸ್ ರೋಗಲಕ್ಷಣಗಳು ಚಳಿಗಾಲದಲ್ಲಿ ಸಾಮಾನ್ಯವಾದ ಇತರ ವೈರಲ್ ಸೋಂಕುಗಳಂತೆಯೇ ಇರುತ್ತವೆ.
- ಜ್ವರ, ಕೆಮ್ಮು, ಮೂಗು ಕಟ್ಟುವಿಕೆ, ಉಸಿರಾಟದ ಸಮಸ್ಯೆಯಾಗುತ್ತದೆ.
- ಸೋಂಕಿನ ಕ್ಲಿನಿಕಲ್ ರೋಗಲಕ್ಷಣಗಳು ಹೆಚ್ಚಾಗುತ್ತವೆ, ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ವೈರಸ್ ಉಸಿರಾಟದ ಸೋಂಕುಗಳಿಗೂ ಕಾರಣವಾಗುವಂತಹ ಇತರ ವೈರಸ್‌ಗಳಂತೆ ಇದೆ.
- ಸೋಂಕಿನ ತೀವ್ರತೆಯು 2 ರಿಂದ 6 ದಿನಗಳವರೆಗೆ ಇರುತ್ತದೆ. ಸೋಂಕಿಗೆ ಒಳಗಾದವರಲ್ಲಿ ಮೂರರಿಂದ ಆರು ದಿನಗಳ ಬಳಿಕ ಈ ವೈರಸ್‌ನ ರೋಗಲಕ್ಷಣಗಳನ್ನು ಕಂಡು ಬರುತ್ತವೆ.
- ಅನಾರೋಗ್ಯದ ಸಮಯದಲ್ಲಿ ವೈರಸ್‌ನ ಅದರ ತೀವ್ರತೆ ಅವಲಂಬಿಸಿ ಬದಲಾಗುವ ಸಾಧ್ಯತೆಯು ಇದೆ.
HMPV ವೈರಸ್ ತಡೆಯುವುದು ಹೇಗೆ?:
- ಹೊರಗಡೆ ಹೋಗಿ ಮನೆಗೆ ವಾಪಸ್ ಬಂದಾಗ ಸೋಪು ಅಥವಾ ಸಾಬೂನಿನಿಂದ ಕೈ ತೊಳೆಯಿರಿ.
- ನಿಮ್ಮ ಕೈಗಳಿಂದ ಆಗಾಗ ಕಣ್ಣು, ಮೂಗು, ಬಾಯಿಯನ್ನು ಮುಟ್ಟುವುದನ್ನು ತಪ್ಪಿಸಬೇಕು.
- ಸೋಂಕಿಗೆ ಒಳಗಾದವರೊಂದಿಗೆ ಅಂತರ ಕಾಯ್ದುಕೊಳ್ಳುವುದು ಉತ್ತಮ. ನೀವು ವೈರಸ್‌ನ ಲಕ್ಷಣಗಳನ್ನು ಹೊಂದಿದ್ದರೆ, ಜನರ ಗುಂಪಿನಲ್ಲಿ ಬೆರೆಯಬೇಡಿ.
- ಕೆಮ್ಮುವಾಗ ಹಾಗೂ ಸೀನುವಾಗ ಕೈ, ಬಾಯಿಯನ್ನು ಮುಚ್ಚಿಕೊಳ್ಳಿ.
- ಈ ಸೋಂಕಿತರ ಬಳಸಿದ ಕಪ್, ತಟ್ಟೆ ಹಾಗೂ ಪಾತ್ರೆಗಳ ಉಪಯೋಗಿಸಬೇಡಿ.
- ಸೋಂಕಿತರು ಅನಾರೋಗ್ಯದ ವೇಳೆಯಲ್ಲಿ ಮನೆಯಲ್ಲೇ ಇರುವುದು ಒಳ್ಳೆಯದು.
ಚೀನಾ ಸರ್ಕಾರ & WHO ಪ್ರತಿಕ್ರಿಯೆ:ಐದು ವರ್ಷಗಳ ಹಿಂದೆ ಕೋವಿಡ್-19 ಏಕಾಏಕಿ ಹರಡಿದ್ದ ವೇಳೆಯಲ್ಲಿ ಉಂಟಾದ ಪರಿಸ್ಥಿತಿ ಪುನರಾವರ್ತನೆಯಾಗದಂತೆ ತಡೆಯುವ ಪ್ರಯತ್ನದಲ್ಲಿ, ಚೀನಾ ಸರ್ಕಾರವು ಈ ವೈರಸ್‌ನ ಮೇಲ್ವಿಚಾರಣಾ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ನಡೆಸುತ್ತಿದೆ. ಈ ವ್ಯವಸ್ಥೆ ಹೊಸ ಸಾಂಕ್ರಾಮಿಕ ಬೆದರಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಪತ್ತೆಹಚ್ಚಲು ಮತ್ತು ಪ್ರತಿಕ್ರಿಯಿಸುವ ಗುರಿ ಹೊಂದಿದೆ.
ಚೀನಾದ ಆರೋಗ್ಯ ಅಧಿಕಾರಿಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಎರಡೂ ಹೊಸ ಸಾಂಕ್ರಾಮಿಕ ರೋಗಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಸ್ಪಷ್ಟಪಡಿಸಿವೆ. WHO ಜಾಗತಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸಿಲ್ಲ, ಜೊತೆಗೆ HMPV ಕುರಿತು ನಿರ್ದಿಷ್ಟ ಎಚ್ಚರಿಕೆಗಳನ್ನು ನೀಡಿಲ್ಲ.
ಇದನ್ನೂ ಓದಿ:ವೇಗವಾಗಿ ಹಬ್ಬುತ್ತಿರುವ 'ಸ್ಕ್ರಬ್ ಟೈಫಸ್'; ಈ ಸೋಂಕು ಹೇಗೆ ಹರಡುತ್ತೆ? ತಡೆಗಟ್ಟಲು ಏನು ಮಾಡಬೇಕು ಗೊತ್ತಾ?: ತಜ್ಞರ ಸಲಹೆ ಹೀಗಿದೆ