ಹೈದರಾಬಾದ್:ಮಾರಕ ರೋಗ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಮತ್ತು ಅವರಿಗೆ ಬೆಂಬಲವಾಗಿ ನಿಂತವರನ್ನು ನೆನೆಯುವ ದಿನವೇ 'ವಿಶ್ವ ರೋಸ್ ಡೇ'. 1996 ರಲ್ಲಿ ನಿಧನರಾದ 12 ವರ್ಷದ ಕೆನಡಾದ ಕ್ಯಾನ್ಸರ್ ರೋಗಿ 'ಮೆಲಿಂಡಾ ರೋಸ್' ಅವರ ಸ್ಮರಣಾರ್ಥವಾಗಿ ಪ್ರತಿವರ್ಷ ಸೆಪ್ಟೆಂಬರ್ 22 ರಂದು ಈ ದಿನವನ್ನು ಆಚರಿಸುತ್ತೇವೆ.
ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವವರಿಗೆ ಮತ್ತು ಅವರ ಪ್ರೀತಿಪಾತ್ರರಿಗೆ ಸಹಾಯ ಮಾಡಲು ಮತ್ತು ಅವರಿಗೆ ಬೆಂಬಲವಾಗಿ ನಿಲ್ಲಲು ಈ ದಿನವನ್ನು ಸ್ಮರಿಸಲಾಗುತ್ತದೆ. ಇಂದು, ಪ್ರತಿಯೊಬ್ಬರೂ ತಮಗೆ ತಿಳಿದಿರುವ ಕ್ಯಾನ್ಸರ್ ರೋಗಿಗೆ ಗುಲಾಬಿಯನ್ನು ನೀಡಬೇಕು. ಕಾರಣ, ಗುಲಾಬಿಯು ಪ್ರೀತಿ, ಕಾಳಜಿ ಮತ್ತು ಸಹಾನುಭೂತಿಯ ಸಂಕೇತವಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯು (WHO) ಕ್ಯಾನ್ಸರ್ ಅನ್ನು ಮಾರಕ ಕಾಯಿಲೆ ಎಂದು ಗುರುತಿಸಿದೆ. ದೇಹದ ಯಾವುದೇ ಅಂಗದಲ್ಲಿನ ಜೀವಕೋಶಗಳ ಮೇಲೆ ದಾಳಿ ಮಾಡಿ ವೇಗವಾಗಿ ಮತ್ತು ಅನಿಯಂತ್ರಿತವಾಗಿ ಹರಡುತ್ತದೆ. ನಂತರದ ಹಂತವನ್ನು 'ಮೆಟಾಸ್ಟಾಸಿಸ್' ಎಂದು ಕರೆಯಲಾಗುತ್ತದೆ. ಇದು ಕ್ಯಾನ್ಸರ್ ಸಂಬಂಧಿತ ಸಾವುಗಳಿಗೆ ಕಾರಣವಾಗುತ್ತದೆ. 2022 ರಲ್ಲಿ ಜಾಗತಿಕವಾಗಿ ಅಂದಾಜು 20 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣಗಳು ಮತ್ತು 9.7 ಮಿಲಿಯನ್ ಕ್ಯಾನ್ಸರ್-ಸಂಬಂಧಿತ ಸಾವುಗಳು ದಾಖಲಾಗಿವೆ.
ರೋಸ್ ಡೇ ಇತಿಹಾಸ:12 ನೇ ವಯಸ್ಸಿನಲ್ಲಿ ಅಪರೂಪದ ಕ್ಯಾನ್ಸರ್ನೊಂದಿಗೆ ಹೋರಾಡುತ್ತಿದ್ದ ಮೆಲಿಂಡಾ ರೋಸ್ ಎಂಬ ಯುವತಿಯನ್ನು ಗೌರವಿಸಲು ಈ ದಿನವನ್ನು ಮೀಸಲಿಡಲಾಗಿದೆ. ಮೆಲಿಂಡಾ 1994 ರಲ್ಲಿ ಆಸ್ಕಿನ್ಸ್ ಟ್ಯೂಮರ್ ಎಂದು ಕರೆಯಲ್ಪಡುವ ಒಂದು ರೀತಿಯ ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಎರಡು ವಾರಗಳು ಮಾತ್ರ ಈಕೆ ಬದುಕುಳಿಯಲ್ಲಳು ಎಂದು ತಿಳಿಸಿದ್ದರು.
ಆಶ್ಚರ್ಯಕರವಾಗಿ, ಮೆಲಿಂಡಾ ಎಲ್ಲ ಸವಾಲುಗಳನ್ನು ಮೀರಿ 6 ತಿಂಗಳು ಬದುಕಿದ್ದರು. ಈ ಸಮಯದಲ್ಲಿ ಆಕೆ ಆಸ್ಪತ್ರೆಯಲ್ಲಿ ಸಂತೋಷ ಮತ್ತು ಸಕಾರಾತ್ಮಕ ಭಾವದಿಂದ ಜೀವಿಸಿದ್ದಳು. ಆಕೆ ತನ್ನ ಜೊತೆಗಿನ ಕ್ಯಾನ್ಸರ್ ರೋಗಿಗಳಿಗೆ ಕವನಗಳು ಮತ್ತು ಪತ್ರಗಳನ್ನು ಬರೆಯುವ ಮೂಲಕ ಸಂತೋಷ ಹರಡುತ್ತಿದ್ದಳು. ಮೆಲಿಂಡಾ ಅವರ ಉದಾರತೆ ಮತ್ತು ಪಾಸಿಟಿವ್ ದೃಷ್ಟಿಕೋನವು ಕಷ್ಟದ ಸಮಯದಲ್ಲಿ ಭರವಸೆ ಅತ್ಯಗತ್ಯ ಎಂಬುದನ್ನು ತೋರಿಸುತ್ತದೆ.