ಕರ್ನಾಟಕ

karnataka

ETV Bharat / health

ಕ್ಯಾನ್ಸರ್‌ ಲಕ್ಷಣಗಳು ಕಂಡು ಬಂದ ಕೂಡಲೇ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ: ದಿನೇಶ್‌ ಗುಂಡೂರಾವ್‌ - cancer

ಕ್ಯಾನ್ಸರ್‌ ಬಗ್ಗೆ ಹೆಚ್ಚು ಜಾಗೃತಿ ವಹಿಸಿ, ನಮ್ಮ ಜೀವನ ಶೈಲಿಯನ್ನು ಉತ್ತಮಗೊಳಿಸಿಕೊಳ್ಳುವುದು ಒಳ್ಳೆಯದು ಎಂದು ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

health-minister-dinesh-gundurao-reaction-on-cancer
ಪ್ರಾರಂಭದಲ್ಲೇ ಕ್ಯಾನ್ಸರ್‌ ಪತ್ತೆ ಅನಿವಾರ್ಯ: ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌...

By ETV Bharat Karnataka Team

Published : Jan 29, 2024, 10:59 PM IST

ಬೆಂಗಳೂರು: ಬದಲಾದ ಜೀವನ ಶೈಲಿ ಹಾಗೂ ಪಾಶ್ಚಾತ್ಯ ಆಹಾರ ಪದ್ಧತಿ ಅಳವಡಿಕೆಯಿಂದಾಗಿ ವಿವಿಧ ರೀತಿಯ ಕ್ಯಾನ್ಸರ್‌ ಕಾಯಿಲೆಗೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಆರಂಭದಲ್ಲಿಯೇ ಕ್ಯಾನ್ಸರ್‌ ಅನ್ನು ಪತ್ತೆ ಹಚ್ಚುವ ಕೆಲಸ ಹೆಚ್ಚಾಗಬೇಕು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು. ಫೋರ್ಟಿಸ್‌ ಆಸ್ಪತ್ರೆ ನಗರದಲ್ಲಿ ಆಯೋಜಿಸಿದ್ದ ಫೊರ್ಟಿಸ್‌ ಕ್ಯಾನ್ಸರ್‌ ಸಮ್ಮಿಟ್‌ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‌ ಮಾರಕವಾಗಿ ಎಲ್ಲರಲ್ಲೂ ಹರಡುತ್ತಿದೆ. ಹಿಂದೆಲ್ಲ ಈ ಕಾಯಿಲೆ ವಯಸ್ಸಾದ ಬಳಿಕ ಅಥವಾ ಕೆಲವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿತ್ತು, ಆದ್ದರಿಂದ ಸಾಕಷ್ಟು ಜನರು ಕ್ಯಾನ್ಸರ್‌ಗೆ ತುತ್ತಾಗುತ್ತಿರುವುದು ಆತಂಕ ಸೃಷ್ಟಿಸುತ್ತಿದೆ. ಹೀಗಾಗಿ ಕ್ಯಾನ್ಸರ್‌ನ ಬಗ್ಗೆ ಮೊದಲು ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.

ಕ್ಯಾನ್ಸರ್‌ಗೆ ಔಷಧ ಕಂಡು ಹಿಡಿಯುವ ಕೆಲಸ ನಿರಂತರವಾಗಿ ಸಾಗುತ್ತಿರುವುದು ಎಲ್ಲರಿಗೂ ತಿಳಿದಿದೆ. ಆದಾಗ್ಯೂ ಈ ಕಾಯಿಲೆ ಬಗ್ಗೆ ಹೆಚ್ಚು ಜಾಗೃತಿ ವಹಿಸಿ, ನಮ್ಮ ಜೀವನ ಶೈಲಿಯನ್ನು ಉತ್ತಮಗೊಳಿಸಿಕೊಳ್ಳುವುದು ಒಳ್ಳೆಯದು. ಕ್ಯಾನ್ಸರ್‌ ಪತ್ತೆ ಹಚ್ಚುವ ಕೆಲಸ ಪ್ರಾರಂಭದಲ್ಲಿಯೇ ಆಗುವುದರಿಂದ ಅದರ ಚಿಕಿತ್ಸೆ ಕೂಡ ಸುಲಭ. ಈಗಂತೂ ಕೃತಕ ಬುದ್ದಿಮತ್ತೆಯಂತಹ ತಂತ್ರಜ್ಞಾನಗಳಿಂದ ನಿಖರವಾಗಿ ಚಿಕಿತ್ಸೆ ನೀಡಲು ಸಹಕಾರಿಯಾಗಿವೆ. ಹೀಗಾಗಿ ಪ್ರತಿಯೊಬ್ಬರು ತಮ್ಮ ಜೀವನ ಶೈಲಿ ಸುಧಾರಿಸಿಕೊಳ್ಳುವ ಜೊತೆಗೆ, ಕ್ಯಾನ್ಸರ್‌ನಂತಹ ಲಕ್ಷಣಗಳು ಕಂಡು ಬಂದ ಕೂಡಲೇ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.

ಕ್ಯಾನ್ಸರ್‌ ತಜ್ಞ ಡಾ. ನಿತಿ ರೈಝಾದಾ ಮಾತನಾಡಿ, ಕ್ಯಾನ್ಸರ್‌ ಎಲ್ಲಾ ವಯೋಮಾನದವರಲ್ಲೂ ಕಾಣಿಸಿಕೊಳ್ಳುತ್ತದೆ. ಪುರುಷರಲ್ಲಿ ಹೆಚ್ಚಾಗಿ ಪ್ರಾಸ್ಟೇಟ್‌, ಬಾಯಿ, ಜಠರ ಮತ್ತು ಅನ್ನನಾಳದ ಕ್ಯಾನ್ಸರ್‌ ಕಾಣಿಸುತ್ತಿದ್ದರೆ, ಮಹಿಳೆಯರಲ್ಲಿ ಗರ್ಭಕಂಠ, ಸ್ತನ ಕ್ಯಾನ್ಸರ್‌ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಗರ್ಭಕಂಠದ ಕ್ಯಾನ್ಸರ್‌ಗೆ ಹೆಚ್ಚಾಗಿ ಗ್ರಾಮೀಣ ಭಾಗದ ಮಹಿಳೆಯರೇ ತುತ್ತಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಫೋರ್ಟಿಸ್‌ ಹೆಲ್ತ್‌ಕೇರ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಅಶುತೋಷ್‌ ರಘುವಂಶಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಭಾರತದಲ್ಲಿ ಮೊದಲ ಬಾರಿಗೆ ಪ್ರಯೋಗಾಲಯದಲ್ಲಿ ಮೀನು ಬೆಳೆಯಲು ಮುಂದಾದ ಸಿಎಂಎಫ್​ಆರ್​ಐ

ರಾಜ್ಯ ಸರ್ಕಾರದಿಂದ ಬೃಹತ್ ಆರೋಗ್ಯ ಮೇಳ(ಚಾಮರಾಜನಗರ):ರಾಜ್ಯ ಸರ್ಕಾರದಿಂದಲೇ ಇದೇ ಮೊದಲ ಬಾರಿಗೆ ಬೃಹತ್ ಆರೋಗ್ಯ ಶಿಬಿರವನ್ನು ಕೊಳ್ಳೇಗಾಲದ ಎಂಜಿಎಸ್​ವಿ ಕಾಲೇಜು ಮೈದಾನದಲ್ಲಿ ನಡೆಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆದ ಬೃಹತ್ ಆರೋಗ್ಯ ಮೇಳದಲ್ಲಿ 7 ಸಾವಿರಕ್ಕೂ ಅಧಿಕ ರೋಗಿಗಳನ್ನು ತಪಾಸಣೆ ಮಾಡಲಾಯಿತು. ಈ ಬೃಹತ್ ಆರೋಗ್ಯ ಶಿಬಿರದಲ್ಲಿ ವೈದ್ಯಕೀಯ ವಿಭಾಗ, ಶಸ್ತ್ರಚಿಕಿತ್ಸೆ, ಮಕ್ಕಳ ವಿಭಾಗ, ಎಲುಬು ಮತ್ತು ಕೀಲು, ಮಾನಸಿಕ ರೋಗ, ಮೂತ್ರಪಿಂಡ, ಕಿವಿ, ಮೂಗು, ಗಂಟಲು, ಕಣ್ಣಿನ ವಿಭಾಗ, ಚರ್ಮರೋಗ, ದಂತ ವಿಭಾಗ, ಶ್ವಾಸಕೋಶ ವಿಭಾಗ, ಕ್ಯಾನ್ಸರ್, ಹೃದಯ, ಸ್ಕ್ಯಾನಿಂಗ್, ಸ್ತ್ರೀ ರೋಗ, ಎಂಡೋಕ್ರೊನೊಲಜಿ ಮತ್ತು ಆಯುರ್ವೇದ ವಿಭಾಗಗಳಲ್ಲಿ ಜನರು ತಪಾಸಣೆಗೆ ಒಳಗಾದರು.

ABOUT THE AUTHOR

...view details