ಕರ್ನಾಟಕ

karnataka

ETV Bharat / health

ಕಡಬದಲ್ಲಿ ಹೆಚ್​1 ಎನ್​1 ಸೋಂಕು ಪತ್ತೆ: ಆತಂಕದ ಅಗತ್ಯವಿಲ್ಲ, ಎಚ್ಚರಿಕೆ ವಹಿಸುವಂತೆ ವೈದ್ಯಾಧಿಕಾರಿ ಸೂಚನೆ - H1N1 infection Detected - H1N1 INFECTION DETECTED

ಕಡಬದ ವ್ಯಕ್ತಿಯೋರ್ವರಿಗೆ ಜ್ವರದ ಪರೀಕ್ಷೆ ನಡೆಸುವಾಗ ಹೆಚ್​1 ಎನ್​1 ಸೋಂಕು ಪತ್ತೆಯಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಕಡಬದಲ್ಲಿ ಹೆಚ್​1 ಎನ್​1 ಸೋಂಕು ಪತ್ತೆ
ಕಡಬದಲ್ಲಿ ಹೆಚ್​1 ಎನ್​1 ಸೋಂಕು ಪತ್ತೆ (ETV Bharat)

By ETV Bharat Karnataka Team

Published : Aug 7, 2024, 8:04 AM IST

ಕಡಬ(ದಕ್ಷಿಣ ಕನ್ನಡ):ಮಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಕಡಬ ತಾಲೂಕಿನ ಪೇರಡ್ಕ ನಿವಾಸಿಯೊಬ್ಬರಿಗೆ ಹೆಚ್​1 ಎನ್​1 ಧೃಡಪಟ್ಟಿದೆ. ಆರೋಗ್ಯ ಇಲಾಖೆ ಹೆಚ್​1 ಎನ್​1 ತಡೆಯುವ ಸಲುವಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರೂ, ಇದರ ಬಗ್ಗೆ ಎಚ್ಚರ ವಹಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ರೋಗಿಗಳಲ್ಲಿ ಅಧಿಕ ಜ್ವರ, ಗಂಟಲು ನೋವು, ಉಸಿರಾಟ ಸಮಸ್ಯೆ ಕಾಣಿಸಿಕೊಂಡರೆ ಸರಕಾರಿ ಆಸ್ಪತ್ರೆಗಳ ವೈದ್ಯರು ಕೂಡಲೇ ಗಂಟಲು ದ್ರಾವಣ ಮಾದರಿ ಪರೀಕ್ಷೆಗೆ ಒಳಪಡಿಸುತ್ತಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಹೆಚ್​1 ಎನ್​1 ಚಿಕಿತ್ಸೆ ಹಾಗೂ ಎಲ್ಲ ರೀತಿಯ ಔಷಧೋಪಚಾರಗಳು ಉಚಿತವಾಗಿದ್ದು, ಸೋಂಕು ಕಂಡುಬಂದ ರೋಗಿಗಳನ್ನು ಎ, ಬಿ, ಸಿ ಎಂದು ಮೂರು ರೀತಿ ವಿಭಾಗಿಸಲಾಗುತ್ತದೆ. ಜಿಲ್ಲಾ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಆಯಾ ಭಾಗಗಳಲ್ಲಿನ ತಾಲೂಕು ಮತ್ತು ಸ್ಥಳೀಯ ವೈದ್ಯಕೀಯ ತಜ್ಞರು ಸೋಂಕಿನ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆದು, ಶಂಕಿತರಿಗೆ ನೇರವಾಗಿ ಟ್ಯಾಮಿ ಫ್ಲೂ ಮಾತ್ರೆ ಆರಂಭಿಸಲು, ಜತೆಗೆ ರೋಗಿಗಳಿಗೆ ಅಗತ್ಯ ಸೌಲಭ್ಯ ನೀಡಲು ಸೂಚಿಸಿದ್ದಾರೆ.

ಹೆಚ್​1 ಎನ್​1ಗೆ ಕಾರಣ?:ಹೆಚ್​1 ಎನ್​1 ಅಥವಾ ಹಂದಿಜ್ವರ ಸೊಳ್ಳೆಗಳಿಂದ ಬರುವುದಿಲ್ಲ ಇದು ಒಂದು ವೈರಾಣುವಿನಿಂದ ಬರುತ್ತದೆ. ಈ ಹೆಚ್​1 ಎನ್​1 ವೈರಾಸ್ ಮೊದಲು ಹಂದಿಗಳ ಶ್ವಾಸಕೋಶಕ್ಕೆ ತಗಲಿ ನಂತರ ಮನುಷ್ಯರಿಗೆ ಹರಡಿದೆ ಎಂದು ಶಂಕಿಸಿ ಈ ರೋಗಕ್ಕೆ ‘ಹಂದಿ ಜ್ವರ’ ಎಂದು ಕರೆಯಲಾಗುತ್ತಿದೆ.

2009ರ ಫೆಬ್ರವರಿ ಮತ್ತು ಮಾರ್ಚ್​ನಲ್ಲಿ ಅಮೆರಿಕ ಗಡಿಯಲ್ಲಿರುವ ಮೆಕ್ಸಿಕೋ ದೇಶದ ರಾಜಧಾನಿ ಮೆಕ್ಸಿಕೋ ನಗರದಲ್ಲಿ ಹಂದಿ ಜ್ವರ ಮೊದಲು ಕಾಣಿಸಿಕೊಂಡಿತು. ಬಳಿಕ ಅಮೆರಿಕದ ಕ್ಯಾಲಿಫೋರ್ನಿಯಾ ಮತ್ತು ಟೆಕ್ಸಾಸ್‍ನಲ್ಲಿ ಇದು ಪತ್ತೆಯಾಯಿತು. ಹಂದಿಯಿಂದ ನೇರವಾಗಿ ಮಾನವನಿಗೆ ಈ ಜ್ವರ ಹರಡುವುದಿಲ್ಲ. ಆದರೆ, ಸೋಂಕು ತಗಲುತ್ತದೆ. ಈ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಅತೀ ವೇಗವಾಗಿ ಇದು ಹರಡುತ್ತದೆ ಎನ್ನಲಾಗಿದೆ.

ಮೆಕ್ಸಿಕೋ ನಗರದಲ್ಲಿ ಹಂದಿ ಸಾಕಾಣೆ ಮಾಡುವ ಮಂದಿಗೆ ಮೊದಲು ಸೋಂಕು ತಗಲಿ ನಂತರ ಈ ಸೋಂಕು ಇಡೀ ವಿಶ್ವಕ್ಕೆ ಪಸರಿಸಿತು ಎಂದು ಹೇಳಲಾಗುತ್ತದೆ. ಈ ವೈರಸ್ ಮೊದಲು ಮೂಗು ಅಥವಾ ಬಾಯಿಯ ಮೂಲಕ ನಮ್ಮ ದೇಹಕ್ಕೆ ಲಗ್ಗೆ ಇಡುತ್ತದೆ. ಹೀಗೆ ಒಳ ಹೋದ ವೈರಸ್​​ ರಕ್ತದಲ್ಲಿ ಸಂತಾನೋತ್ಪತಿ ಮಾಡುತ್ತದೆ. ಇದಾದ ಬಳಿಕ ಮೊದಲು ಶ್ವಾಸಕೋಶದ ಮೇಲೆ ದಾಳಿ ಮಾಡುತ್ತದೆ.

ವೈರಾಣು ದಾಳಿ ಜಾಸ್ತಿ ಆದಂತೆ ಉಸಿರಾಟದ ತೊಂದರೆ, ಸಣ್ಣ ಜ್ವರ ಸುಸ್ತು ಕಾಣಿಸುತ್ತದೆ. ಸಾಧಾರಣವಾಗಿ ಜ್ವರ ಬಂದರೆ ಒಂದೆರಡು ದಿನದಲ್ಲಿ ಕಡಿಮೆ ಆಗುತ್ತದೆ. ಆದರೆ ಈ ಜ್ವರದಲ್ಲಿ ಮೊದಲು ಚಳಿ, ಗಂಟಲು ಉರಿ, ಕೆಮ್ಮು, ತಲೆನೋವು, ಸಿಕ್ಕಾಪಟ್ಟೆ ಮೈಕೈನೋವು, ನಿಶ್ಶಕ್ತಿ, ಇವೆಲ್ಲ ಕಾಣಿಸಿಕೊಳ್ಳುತ್ತವೆ. ಕೆಲವು ರೋಗಿಗಳಿಗೆ ವಾಂತಿ ಆಗುವ ಸಾಧ್ಯತೆಗಳು ಇರುತ್ತದೆ. ಇಲ್ಲಿಯವರೆಗೆ ಆರೋಗ್ಯವಾಗಿದ್ದ ವ್ಯಕ್ತಿಯ ದೇಹದಲ್ಲಿ ದಿಢೀರ್ ಆಗಿ ಈ ರೀತಿಯ ಬದಲಾವಣೆ ಕಂಡು ಬಂದರೆ ಕೂಡಲೇ ಸಮೀಪದ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಹೋಗುವುದು ಉತ್ತಮ.

ಸೋಂಕು ಪೀಡಿತ ಶಂಕೆ ಹೊಂದಿರುವ ವ್ಯಕ್ತಿಗಳ ಮೂಗಿನ ಸ್ರಾವ ಅಥವಾ ಉಗುಳಿನ ಮಾದರಿಯನ್ನು ವೈದ್ಯರು ಪರೀಕ್ಷೆ ಮಾಡುತ್ತಾರೆ. ಈ ಪರೀಕ್ಷೆಯಲ್ಲಿ ಹಂದಿಜ್ವರ ಬಂದಿದೆಯೋ ಅಥವಾ ಬಂದಿಲ್ಲವೋ ಎನ್ನುವುದನ್ನು ತಿಳಿಸುತ್ತಾರೆ. ಹಂದಿ ಜ್ವರ ಬಂದವರು ಮೊದಲು ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸುವುದರಿಂದ ವೈರಾಣು ಇತರರಿಗೆ ಹರಡುವುದನ್ನು ತಡೆಯಬಹುದು. ಇದರ ಜೊತೆ ರೋಗಿಯ ಹತ್ತಿರವೇ ಓಡಾಟ ನಡೆಸುವ ವ್ಯಕ್ತಿಗಳೂ ಮಾಸ್ಕ್ ಹಾಕಿಕೊಳ್ಳಬೇಕಾಗುತ್ತದೆ. ರೋಗಿಗಳು ಹೆಚ್ಚು ಹೆಚ್ಚು ಬಿಸಿ ನೀರನ್ನು ಸೇವಿಸಬೇಕಾಗುತ್ತದೆ.

ಮಕ್ಕಳು, ಹಿರಿಯ ವ್ಯಕ್ತಿಗಳು, ಗರ್ಭಿಣಿಯರಲ್ಲಿ ರೋಗ ನೀರೋಧಕ ಶಕ್ತಿ ಕಡಿಮೆ ಇರುವ ಕಾರಣ ಇವರು ರೋಗಿಗಳು ಇರುವ ಕೊಠಡಿಯನ್ನು ಪ್ರವೇಶಿಸದೇ ಇರುವುದೇ ಉತ್ತಮ. ಈ ಜ್ವರ ಪೀಡಿತರಿಗೆ ವೈದ್ಯರು ಟ್ಯಾಮಿಫ್ಲೂ ಮಾತ್ರೆಯನ್ನು ನೀಡುತ್ತಾರೆ. ವೈದ್ಯರು ಸೂಚಿಸಿದ ಬಳಿಕವಷ್ಟೇ ಈ ಮಾತ್ರೆಯನ್ನು ರೋಗಿ ಸೇವಿಸಬೇಕಾಗುತ್ತದೆ. ಒಂದರಿಂದ ಮೂರು ದಿನಗಳ ಕಾಲ ಈ ವೈರಾಣು ಸಿಕ್ಕಾಪಟ್ಟೆ ಕ್ರಿಯಾಶೀಲವಾಗಿರುತ್ತದೆ, ನಂತರ ವೈರಾಣು ಸತ್ತುಹೋಗಿ ಒಂದು ವಾರದಲ್ಲಿ ಮನುಷ್ಯ ಮೊದಲಿನಂತೆ ಆರೋಗ್ಯವಾಗಿರುತ್ತಾನೆ. ಆದರೆ ಚಿಕಿತ್ಸೆ ಪಡೆಯದಿದ್ದರೆ ಮಾತ್ರ ರೋಗಿ ಸಾವನ್ನಪ್ಪುವ ಸಾಧ್ಯತೆಗಳೂ ಹೆಚ್ಚಿರುತ್ತದೆ.

ರೋಗ ಬಾರದಂತೆ ತಡೆಯಲು ಏನು ಮಾಡಬಹುದು?:ಹೊರಗೆ ಸಿಕ್ಕಿದಲ್ಲೆಲ್ಲ ಉಗುಳುವ ಅಭ್ಯಾಸವನ್ನು ಬಿಡಬೇಕು. ಸೀನುವಾಗ, ಕೆಮ್ಮುವಾಗ ಕರವಸ್ತ್ರವನ್ನು ಅಥವಾ ಯಾವುದಾದರೂ ಬಟ್ಟೆಯನ್ನು ಬಾಯಿ ಹಾಗೂ ಮೂಗಿಗೆ ಅಡ್ಡ ಹಿಡಿಯಬೇಕು. ಧರಿಸಿರುವ ಮಾಸ್ಕನ್ನು ಪ್ರತಿದಿನ ಬದಲಿಸಬೇಕು. ಜಾಸ್ತಿ ಜನಸಂದಣಿ ಇರುವ ಪ್ರದೇಶಗಳಿಗೆ ಹೋಗದೇ ಇರುವುದು ಉತ್ತಮ. ಹೋದರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ವಚ್ಛವಾಗಿರುವ ನೀರಿನಿಂದ ಸೋಪು, ಹ್ಯಾಂಡ್‌ವಾಶ್‌ ಬಳಸಿ ಕೈಯನ್ನು ತೊಳೆಯುತ್ತಿರಬೇಕು. ದೂರದ ಪ್ರಯಾಣವನ್ನು ಆದಷ್ಟೂ ಕಡಿಮೆ ಮಾಡಿ ಮನೆಯಲ್ಲೇ ವಿಶ್ರಾಂತಿಯನ್ನು ಪಡೆಯಬೇಕು.

ಈ ಬಗ್ಗೆ ಈಟಿವಿ ಭಾರತ್​ ಜೊತೆಗೆ ಮಾತನಾಡಿದ ಪುತ್ತೂರು ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್, "ಜ್ವರದಿಂದ ಆಸ್ಪತ್ರೆಗೆ ದಾಖಲಾದ ಕಡಬ ಪೇರಡ್ಕ ನಿವಾಸಿಯೋರ್ವರಿಗೆ ಹೆಚ್​1ಎನ್​1 ಸೋಂಕು ಧೃಡಪಟ್ಟಿದೆ. ಆದರೆ, ಪ್ರಸ್ತುತ ಅವರು ಆರೋಗ್ಯವಾಗಿದ್ದಾರೆ. ಇವರಿಗೆ ಹೇಗೆ ಇದು ಬಂದಿದೆ ಎನ್ನುವ ಬಗ್ಗೆ ನಮ್ಮ ಇಲಾಖಾಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ. ಇವರು ಅವರ ಅಣ್ಣನ ಮನೆಗೆ ಹೋಗಿದ್ದಾರೆ ಎನ್ನುತ್ತಿದ್ದಾರೆ. ಸದ್ಯ ಅವರಿಗೂ ಜ್ವರ ಕಾಣಿಸಿದೆ ಎಂದು ತಿಳಿದು ಬಂದಿದೆ. ಅವರ ಮೇಲೂ ನಿಗಾ ಇಡಲಾಗಿದೆ".

"ನಮ್ಮಲ್ಲಿ ಪ್ರಸ್ತುತ ಬೇಕಾದಷ್ಟು ಟ್ಯಾಮೀಪ್ಲೂ ಮಾತ್ರೆಗಳು ಲಭ್ಯವಿದೆ. ಇದು ಗುಣವಾಗುವ ಕಾಯಿಲೆಯಾಗಿರುವುದರಿಂದ ಜನರು ಭಯಪಡುವ ಅಗತ್ಯವಿಲ್ಲ ಆದರೆ ಎಚ್ಚರಿಕೆ ಅಗತ್ಯ. ಕಡಬ ತಾಲೂಕಿನಲ್ಲಿ ಈ ಒಂದು ತಿಂಗಳ ಹಿಂದೆ ನೆಲ್ಯಾಡಿ ಪರಿಸರದಲ್ಲಿ ಒಬ್ಬರಿಗೆ ಈ ರೋಗ ಕಾಣಿಸಿಕೊಂಡಿತ್ತು. ಅವರು ಈಗ ಸಂಪೂರ್ಣ ಆರೋಗ್ಯವಾಗಿದ್ದಾರೆ. ಕಡಬ, ಉಪ್ಪಿನಂಗಡಿ ಪರಿಸರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜ್ವರ ಇದೆ. ಆದರೆ ಅದೆಲ್ಲವೂ ಹೆಚ್​1 ಎನ್​1 ಜ್ವರವಲ್ಲ".

"ಕಡಬದ ಕೋಡಿಂಬಾಳ ಎಂಬಲ್ಲಿ ನಿನ್ನೆ ಮಹಿಳೆಯೊಬ್ಬರು ಮೃತಪಟ್ಟಿದ್ದು, ಇವರು ಜ್ವರದಿಂದಲೇ ಮೃತರಾಗಿದ್ದಾರೆ ಎನ್ನುವುದು ಇನ್ನೂ ಧೃಡಪಟ್ಟಿಲ್ಲ. ಈಗಾಗಲೇ ಅವರ ಮೃತದೇಹದ ಮಹಜರು ನಡೆಸಲಾಗಿದೆ. ವರದಿ ಬಂದ ಬಳಿಕವಷ್ಟೇ ಯಾವ ಕಾರಣದಿಂದಾಗಿ ಅವರು ಮೃತಪಟ್ಚಿದ್ದಾರೆ ಎನ್ನುವುದು ತಿಳಿದು ಬರಲಿದೆ" ಎಂದು ತಾಲೂಕು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಪಶು ಆರೈಕೆಗೆ ವಿಶೇಷ ಆಂಬ್ಯುಲೆನ್ಸ್ ಸೇವೆ '1962': ಸರ್ಕಾರದ ಯೋಜನೆಗೆ ಬೇಕಿದೆ ಪ್ರಚಾರ - Animal Care Ambulance

ABOUT THE AUTHOR

...view details