ಹೈದರಾಬಾದ್: ಹದಿಹರೆಯದವರು ಎದುರಿಸುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತು ಜಾಗೃತಿ ಮತ್ತು ನಿವಾರಣೆ ಪ್ರಯತ್ನ ನಡೆಸುವ ಉದ್ದೇಶದಿಂದ ಜಾಗತಿಕವಾಗಿ ಮಾರ್ಚ್ 2 ಅನ್ನು ವಿಶ್ವ ಹದಿಹರೆಯದವರ ಮಾನಸಿಕ ಸ್ವಾಸ್ಥ್ಯ ದಿನವಾಗಿ ಆಚರಣೆ ಮಾಡಲಾಗುತ್ತಿದೆ.
ಈ ಕುರಿತು ಪ್ರತಿಯೊಬ್ಬರಿಗೆ ಅರಿವು ಮೂಡಿಸುವುದು. ಹದಿಹರೆಯದವರಿಗೆ ಅವರ ಮಾನಸಿಕ ಆರೋಗ್ಯಕ್ಕೆ ಅಗತ್ಯ ಬೆಂಬಲ ಮತ್ತು ಆರೈಕೆಯನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನವನ್ನು ಈ ದಿನದಂದು ನಡೆಸಲಾಗುತ್ತದೆ.
ದಿನದ ಇತಿಹಾಸ: 2020ರಲ್ಲಿ ಹೊಲಿಸ್ಟರ್ ಈ ದಿನವನ್ನು ಸ್ಥಾಪಿಸಿದರು. ಹದಿಹರೆಯದವರ ಮಾನಸಿಕ ಆರೋಗ್ಯದ ಉದ್ದೇಶದಿಂದ ಈ ದಿನಕ್ಕೆ ಬುನಾದಿ ಹಾಕಲಾಯಿತು. ಅಲ್ಲದೇ, ಮಾರ್ಚ್ 2ರಂದು ಈ ದಿನಾಚರಣೆಗಾಗಿ ನಿಗದಿ ಮಾಡಲಾಯಿತು.
ಹೊಲಿಸ್ಟಾರ್ ಕಾನ್ಫಿಡೆನ್ಸ್ ಪ್ರೊಜೆಕ್ಟ್: ಹದಿಹರೆಯದವರ ಆತ್ಮವಿಶ್ವಾಸ, ಅನುಕೂಲತೆ ಮತ್ತು ಸಾಮರ್ಥ್ಯವನ್ನು ವೃದ್ಧಿಗೊಳಿಸಿ ಇದರ ನಿರ್ಮಾಣಕ್ಕೆ ಸಹಾಯ ಮಾಡುವ ಉದ್ದೇಶದಿಂದ ವರ್ಷದ 365 ದಿನಗಳ ಹೊಲಿಸ್ಟರ್ ಕಾನ್ಫಿಡೆನ್ಸ್ ಪ್ರಾಜೆಕ್ಟ್ ಆರಂಭಿಸಲಾಯಿತು. ಹೊಲಿಸ್ಟರ್ ಕಾನ್ಫಿಡೆನ್ಸ್ ನಿಧಿಯು ಹದಿಹರೆಯದವರ ಮಾನಸಿಕ ಆರೋಗ್ಯ, ಯುವ ಕಪ್ಪು ವರ್ಣೀಯರಿಗೆ ಸಮಾನತೆ, ಸ್ಥಳೀಯ ಮತ್ತು ಬಿಐಪಿಒಸಿ ಬಣ್ಣದ ಜನರು, ಎಲ್ಜಿಬಿಟಿಕ್ಯೂ ಯುವಕರಿಗೆ ಸುರಕ್ಷತೆ ಒದಗಿಸಲು ಕೆಲಸ ಮಾಡುತ್ತಿರುವ ಲಾಭ ರಹಿತ ಸಂಸ್ಥೆಯಿಂದ ಸಹಾಯ ಮಾಡಲಾಗುತ್ತೆ.
ಮಾನಸಿಕ ಆರೋಗ್ಯ ಫೌಂಡೇಶನ್ ವರದಿಯಲ್ಲಿನ ಅಂಶಗಳು:
- ಶೇ 20ರಷ್ಟು ಹದಿಹರೆಯದವರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಅನುಭವ
- ಶೇ 50ರಷ್ಟು ಮಾನಸಿಕ ಆರೋಗ್ಯದ ಸಮಸ್ಯೆಗಳು 14ನೇ ವಯಸ್ಸಿನಲ್ಲಿ ಪ್ರಾರಂಭವಾದರೆ, ಶೇ 75ರಷ್ಟು 24ನೇ ವಯಸ್ಸಿನಲ್ಲಿ ಆರಂಭ
- 5 ರಿಂದ 16 ವರ್ಷದ ಶೇ 10ರಷ್ಟು ಮಕ್ಕಳು ಮತ್ತು ಹದಿ ಹರೆಯದವರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಯು ಕ್ಲಿನಿಕಲಿ ಪತ್ತೆಯಾಗಿದೆ. ಇನ್ನು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುವ ಶೇ 70ರಷ್ಟು ಮಕ್ಕಳು ಮತ್ತು ಹದಿಹರೆಯದವರಿಗೆ ಚಿಕ್ಕ ವಯಸ್ಸಿನಲ್ಲಿ ಸರಿಯಾದ ಮಾರ್ಗದರ್ಶನ ಸಿಕ್ಕಿಲ್ಲ
ಏನು ಮಾಡಬೇಕು: ಹದಿಹರೆಯದವರ ಮಾನಸಿಕ ಆರೋಗ್ಯ ಮೇಲೆ ಹೆಚ್ಚಿನ ಗಮನ ನೀಡಬೇಕಿದೆ. ಕಾರಣ ಈ ವಯಸ್ಸಿನಲ್ಲಿ ಮಕ್ಕಳು ಹೆಚ್ಚು ಸ್ವತಂತ್ರರು ಮತ್ತು ಸಾಮರ್ಥ್ಯ ಹೊಂದಿದವರು ಆಗಿರುತ್ತಾರೆ. ಹದಿವಯಸ್ಸಿನಲ್ಲಿ ಅವರು ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಗಳ ಅನುಭವವನ್ನು ಪಡೆಯುತ್ತಾರೆ. ಅವರಿಗೆ ಬೆಂಬಲ, ಪ್ರೋತ್ಸಾಹ ಮತ್ತು ಆರಾಮದಾಯಕತೆ, ಸುರಕ್ಷಿತ ವಾತಾವರಣದ ಮುಕ್ತ ಅನುಭವ ಆಗಬೇಕಿದೆ. ದುರದೃಷ್ಟವಶಾತ್, ಅನೇಕ ಮಕ್ಕಳು ಅಂತಹ ವಾತಾವರಣವನ್ನು ಪಡೆಯುವುದಿಲ್ಲ. ಭಾವನಾತ್ಮಕವಾಗಿ ತಮ್ಮೊಳಗೆ ತೊಳಲಾಟ ಅನುಭವಿಸುತ್ತಾರೆ. ಇದು ಅವರಲ್ಲಿ ಅನೇಕ ನಕಾರಾತ್ಮಕ ಪರಿಣಾಮ ಮೂಡಿಸುತ್ತದೆ. ವಿಶೇಷವಾಗಿ ಮಾನಸಿಕ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಈ ಸಮಸ್ಯೆಯನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡಿ ಮಾನಸಿಕ ಆರೋಗ್ಯದ ವಿಚಾರ ಕುರಿತು ಆರಂಭದ ವಯಸ್ಸಿನಲ್ಲಿ ಅರಿಯುವುದು ಬಹಳಷ್ಟು ಪ್ರಯೋಜನಕಾರಿಯಾಗಲಿದೆ.