ನವದೆಹಲಿ:ದೀರ್ಘಕಾಲದಿಂದ ಇಯರ್ಬಡ್ಸ್ ಅಥವಾ ಇಯರ್ಫೋನ್ಸ್ ಬಳಕೆಯು ಕಿವಿಯ ಆರೋಗ್ಯದ ಮೇಲೆ ಗಣನೀಯ ಪ್ರಮಾಣದಲ್ಲಿ ಹಾನಿ ಉಂಟು ಮಾಡುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಇಯರ್ ಫೋನ್ಗಳ ಮೂಲಕ ಅಧಿಕ ಶಬ್ಧಕ್ಕೆ ಒಡ್ಡಿಕೊಳ್ಳುವುದರಿಂದ ಶಾಶ್ವತ ಕಿವುಡುತನಕ್ಕೆ ಕಾರಣವಾಗಬಹುದು. ಪ್ರತಿನಿತ್ಯ ಅಧಿಕ ಮಟ್ಟದ ಶಬ್ಧದೊಂದಿಗೆ ಕೇಳುವಿಕೆಯ ಅಭ್ಯಾಸವು ಕಿವಿಯ ಸೂಕ್ಷ್ಮ ವಿನ್ಯಾಸದ ಮೇಲೆ ಹಾನಿ ಮಾಡುತ್ತದೆ. ಇದು ಶಾಶ್ವತ ಕಿವುಡುತನಕ್ಕೆ ಕಾರಣವಾಗುತ್ತದೆ. ಇದೇ ಕಾರಣಕ್ಕೆ ಶಬ್ಧದ ಮಟ್ಟವನ್ನು ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದ್ದು, ಕಿವಿಯ ಆರೋಗ್ಯದ ಬಗ್ಗೆ ರಕ್ಷಣಾ ಕ್ರಮ ಅಗತ್ಯ ಎಂದಿದ್ದಾರೆ.
ನಿಯಮಿತ ಬಳಕೆದಾರರಲ್ಲಿ ತಪಾಸಣೆ ಅವಶ್ಯ: ಈ ಅಪಾಯವು ಯುವಜನತೆಯಲ್ಲಿ ಹೆಚ್ಚಿದೆ. ಕಾರಣ ಇವರು ಪದೇ ಪದೇ ಹೆಚ್ಚು ಅವಧಿಯವರಗೆ ಇಂತಹ ಸಾಧನಗಳನ್ನು ಬಳಸುತ್ತಾರೆ. ಜೊತೆಗೆ ಶಬ್ಧ ರದ್ದು (ನಾಯ್ಸ್ ಕ್ಯಾನ್ಸಲಿಂಗ್) ನಂತಹ ಹೆಡ್ಫೋನ್ಗಳನ್ನು ಸುಧಾರಿತ ಶಬ್ಧಗಳಲ್ಲಿ ಬಳಸುವುದರಿಂದ ಧ್ವನಿಯನ್ನು ಹೆಚ್ಚಿಸುವ ಅಗತ್ಯ ಕಡಿಮೆ ಮಾಡಿ, ಕಿವಿಯ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಇದು ಕಿವಿ ಆರೋಗ್ಯವನ್ನು ಮತ್ತಷ್ಟು ರಕ್ಷಿಸುತ್ತದೆ. ಅಧಿಕ ಮಟ್ಟದಲ್ಲಿ ಈ ಸಾಧನ ಬಳಕೆ ಮಾಡುವವರು ನಿಯಮಿತ ಶ್ರವಣ ತಪಾಸಣೆಗೆ ಒಳಗಾಗುವುದು ಸೂಕ್ತ ಎಂದು ಶಿಫಾರಸು ಮಾಡಲಾಗಿದೆ.
ಅಧಿಕ ಶಬ್ಧ ಮಟ್ಟ (130 ಡೆಸಿಬಲ್ಗಿಂತ ಹೆಚ್ಚಿನ ಶಬ್ಧವು ಕಿವಿ ನೋವಿಗೆ ಕಾರಣವಾಗಿ ಹಾನಿ ಉಂಟುಮಾಡುತ್ತದೆ) ಕಿವಿಯ ಒಳಾಂಗಣದಲ್ಲಿರುವ ಸಣ್ಣ ಕೂದಲು ಜೀವಕೋಶ ಹಾನಿ ಮಾಡುತ್ತದೆ. ಜೀವಕೋಶಗಳು ಪುನರುತ್ಪಾದಿಸಲು ಸಾಧ್ಯವಾಗುವುದಿಲ್ಲ. ಸುರಕ್ಷಿತ ಕೇಳುವಿಕೆ ಅಭ್ಯಾಸ ನಡೆಸದೇ ಹೋದಲ್ಲಿ ಇದು ಭಾಗಶಃ ಹಾನಿ ಅಥವಾ ಸಂಪೂರ್ಣ ಕಿವುಡತನಕ್ಕೆ ಕಾರಣವಾಗುತ್ತದೆ.