ಮೈಸೂರು: ಬೇಸಿಗೆಯಲ್ಲಿ ಜನರು ಹೆಚ್ಚಾಗಿ ನೀರನ್ನು ಕುಡಿಯಬೇಕು. ಹೆಚ್ಚು ಹಣ್ಣುಗಳನ್ನು ಸೇವಿಸಬೇಕು. ಅತಿ ತಣ್ಣಗಿನ ಪದಾರ್ಥಗಳನ್ನು ಸೇವಿಸಬಾರದು. ಜೊತೆಗೆ ಬೇಸಿಗೆಗೆ ಇರುವ ಆಹಾರ ಪದ್ಧತಿಯನ್ನು ಅನುಸರಿಸಬೇಕು ಎಂದು ಶ್ವಾಸಕೋಶ ತಜ್ಞ ಡಾ. ಲಕ್ಷ್ಮಿ ನರಸಿಂಹನ್ ಈಟಿವಿ ಭಾರತ ಸಂದರ್ಶನದಲ್ಲಿ ವಿವರಿಸಿದ್ದಾರೆ. ಇದರ ಜೊತೆಗೆ ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿರುವ ಎಚ್1ಎನ್1 ಸೋಂಕು ಹಾಗೂ ಕೋವಿಡ್ ಬಂದ ನಂತರ ಮಧ್ಯ ವಯಸ್ಕರಲ್ಲಿ ಕಂಡುಬರುತ್ತಿರುವ ಹೃದಯಸಂಬಂಧಿ ಕಾಯಿಲೆಗಳಿಗೆ ಕಾರಣಗಳ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
"ಎಚ್1ಎನ್1 ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಇದು ಹಳೆಯ ವೈರಸ್. ಸುಮಾರು 100 ವರ್ಷಗಳಿಂದ ಇದೆ. 1918ರಲ್ಲಿ ಸ್ಪ್ಯಾನಿಷ್ನಲ್ಲಿ ಕಂಡುಬಂತು. ಪ್ರತಿ ವರ್ಷ ಕೆಲವೊಂದಷ್ಟು ಕೇಸ್ಗಳು ಬಂದು ಹೋಗುತ್ತಿದ್ದವು. 14-15 ವರ್ಷಗಳ ಹಿಂದೆ ಕೋವಿಡ್ಗಿಂತ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಬಂದಿತ್ತು. ಋತುಗಳು ಬದಲಾದಾಗ ಚಳಿಗಾಲ, ಮಳೆಗಾಲ ಬೇಸಿಗೆಕಾಲ ಶುರುವಾಗುವ ಸಮಯದಲ್ಲಿ ಕೆಲವೊಂದು ಎಚ್1ಎನ್1 ಪ್ರಕರಣಗಳು ಕಂಡುಬರುತ್ತವೆ" ಎಂದು ಡಾ. ನರಸಿಂಹನ್ ತಿಳಿಸಿದರು.
ಎಚ್1ಎನ್1 ಹೆಚ್ಚಾಗಿ ಯಾರಲ್ಲಿ ಕಂಡು ಬರುತ್ತದೆ?:"ಹೆಚ್ಚಾಗಿ ಇದು ಹಿರಿಯ ನಾಗರಿಕರು, ಶುಗರ್, ಬಿಪಿ, ಹೃದ್ರೋಗ ಇರುವವರಿಗೆ, ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ ಇರುವವರಿಗೆ ಅಥವಾ ತೀರ ಚಿಕ್ಕ ಮಕ್ಕಳಿಗೆ ಇದರ ಪ್ರಭಾವ ಜಾಸ್ತಿ ಇರುತ್ತದೆ. ಇದನ್ನು ತಡೆಗಟ್ಟಲು ಫ್ಲೂ ವ್ಯಾಕ್ಸಿನ್ ಎನ್ನುವ ಲಸಿಕೆ ಇದೆ. ಇದು ಗವರ್ನಮೆಂಟ್ ಮತ್ತು ಪ್ರೈವೇಟ್ ಆಸ್ಪತ್ರೆಗಳಲ್ಲಿ ಎಲ್ಲಾ ಕಡೆ ಲಭ್ಯವಿದೆ. ಈ ಲಸಿಕೆಯನ್ನು ಖಂಡಿತವಾಗಿ ಹಾಕಿಸಿಕೊಳ್ಳಬೇಕು. ಮನೆಯಲ್ಲಿ ಯಾರಾದರೂ ವಯಸ್ಸಾದವರು ಇದ್ದರೆ ಅಥವಾ ಶುಗರ್, ಬಿಪಿ ಇರುವವರು ಇದ್ದರೆ, ಅವರಿಗೂ ಲಸಿಕೆ ಹಾಕಿಸಬೇಕು" ಎಂದು ತಿಳಿಸಿದರು.