Day Time Sleep Benefits:ನಮ್ಮಲ್ಲಿರುವ ಬಹುತೇಕರು ಮಧ್ಯಾಹ್ನದ ಊಟದ ನಂತರ ನಿದ್ರೆ ಮಾಡುತ್ತಾರೆ. ಮಧ್ಯಾಹ್ನ ನಿದ್ರೆ ಕಳೆದುಕೊಂಡರೆ ಕೆಲವರಿಗೆ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ. ಮತ್ತೆ ಕೆಲವರು ಆಫೀಸ್ನಲ್ಲಿ ಇರುತ್ತಾರೆ. ಇನ್ನೂ ಕೆಲವರು ಮನೆಯಲ್ಲಿ ಬಿಡುವಿಲ್ಲದ ಕೆಲಸಗಳಿಂದ ಸ್ವಲ್ಪ ನಿದ್ದೆ ಮಾಡಲು ಕೂಡ ಅವರಲ್ಲಿ ಸಮಯ ಇರುವುದಿಲ್ಲ.
ಆದರೆ, ಕೆಲವು ಅಧ್ಯಯನಗಳು ವಯೋಮಿತಿಯನ್ನು ಲೆಕ್ಕಿಸದೆ ಎಲ್ಲರೂ ಮಧ್ಯಾಹ್ನ ಅಲ್ಪ ನಿದ್ರೆ ಮಾಡುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು ಎಂದು ತೋರಿಸಿವೆ. ಮಧ್ಯಾಹ್ನದ ನಿದ್ರೆಯಿಂದ ಹೃದಯದ ಆರೋಗ್ಯದ ಜೊತೆಗೆ ಸೋಮಾರಿತನ ಕಡಿಮೆಯಾಗುತ್ತದೆ. ಜೊತೆಗೆ ಮಾಡುವ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸಬಹುದು ಎಂದು ತಿಳಿಸುತ್ತಾರೆ ಸಂಶೋಧಕರು.
ಸಂಶೋಧನೆ ಏನು ಹೇಳುತ್ತೆ?ಜರ್ನಲ್ ಆಫ್ ದಿ ಅಮೆರಿಕನ್ ಹಾರ್ಟ್ ಅಸೋಸಿಯೇಷನ್‌ನ ಅಧ್ಯಯನದಿಂದ ಮಧ್ಯಾಹ್ನದ ಊಟದ ನಂತರ ಅಲ್ಪನಿದ್ರೆ ಮಾಡುವುದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಬಹಿರಂಗಪಡಿಸಿದೆ.
ನ್ಯಾಷನಲ್ ಹಾರ್ಟ್, ಲಂಗ್ ಮತ್ತು ಬ್ಲಡ್ ಇನ್‌ಸ್ಟಿಟ್ಯೂಟ್ ನಡೆಸಿದ ಅಧ್ಯಯನವು ಮಧ್ಯಾಹ್ನದ ಊಟದ ಬಳಿಕ ಅಲ್ಪನಿದ್ರೆ ಮಾಡುವುದು, ಈಗಾಗಲೇ ಹೃದಯ ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿರುವ ಅಧಿಕ ರಕ್ತದೊತ್ತಡ ಹೊಂದಿರುವ ಜನರಿಗೆ ಉತ್ತಮವಾಗಿದ್ದಾರೆ ಎಂದು ತಿಳಿದಿದೆ.
ದೇಹದಲ್ಲಿ ಹಾರ್ಮೋನ್ ಅಸಮತೋಲನದಿಂದ ಪಿಸಿಒಎಸ್, ಥೈರಾಯ್ಡ್, ಬೊಜ್ಜು, ಮಧುಮೇಹ ಮುಂತಾದ ದೀರ್ಘಕಾಲದ ಸಮಸ್ಯೆಗಳು ಉಂಟಾಗುತ್ತವೆ. ಆದರೆ, ಅಂತಹವರು ಮಧ್ಯಾಹ್ನದ ವೇಳೆ ನಿದ್ದೆ ಮಾಡಿದರೆ ಹಾರ್ಮೋನ್ಗಳು ಸಮತೋಲನದಲ್ಲಿರಲು ಸಾಧ್ಯವಿದೆ ಎನ್ನುತ್ತಾರೆ ಸಂಶೋಧಕರು.
ಆಹಾರ ಸರಿಯಾಗಿ ಜೀರ್ಣವಾಗದೆ ಹೊಟ್ಟೆ, ಮಲಬದ್ಧತೆ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗಳು ಸ್ವಾಭಾವಿಕವಾಗಿ ಅನೇಕರಲ್ಲಿ ಕಂಡುಬರುತ್ತವೆ. ಆದರೆ, ಮಧ್ಯಾಹ್ನ ಸ್ವಲ್ಪ ಹೊತ್ತು ನಿದ್ರೆ ಮಾಡುವುದರಿಂದ ಜೀರ್ಣಕ್ರಿಯೆ ಸುಧಾರಿಸಿ ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಅಲ್ಲದೆ, ವಿಶ್ರಾಂತಿಯಿಲ್ಲದೆ ಕೆಲಸ ಮಾಡುವುದು ಮತ್ತು ಮಧ್ಯಾಹ್ನ ನಿದ್ರೆ ಮಾಡದಿರುವುದು ಅರಿವಿಲ್ಲದೆ ಒತ್ತಡಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮ ಸೌಂದರ್ಯದ ಮೇಲೂ ಪರಿಣಾಮ ಬೀರುತ್ತದೆ. ಮೊಡವೆ ಮತ್ತು ತಲೆಹೊಟ್ಟು ಉಂಟಾಗುತ್ತದೆ. ಹಾಗಾಗಿ ಊಟದ ನಂತರ ನಿದ್ದೆ ಮಾಡುವ ಮೂಲಕ ಒತ್ತಡವಿಲ್ಲದೆ ನಿಮ್ಮ ಸೌಂದರ್ಯ ಕಾಪಾಡಿಕೊಳ್ಳಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.
ನಮ್ಮಲ್ಲಿ ಬಹುತೇಕರು ಮಧ್ಯಾಹ್ನ ಮಲಗಿದರೆ ರಾತ್ರಿ ನಿದ್ರೆ ಬರುವುದಿಲ್ಲ ಎನ್ನುತ್ತಾರೆ. ಆದರೆ, ತಜ್ಞರು ಹೇಳುವ ಪ್ರಕಾರ, ಹಗಲಿನ ನಿದ್ದೆಯು ರಾತ್ರಿಯ ನಿದ್ದೆಗೆ ಅಡ್ಡಿಯಾಗುವುದಿಲ್ಲ. ಬದಲಿಗೆ ರಾತ್ರಿಯ ನಿದ್ದೆಯನ್ನೂ ಪ್ರೇರೇಪಿಸುತ್ತದೆ. ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ, ಪದೇ ಪದೇ ಪ್ರಯಾಣ ಮಾಡಿ ಸುಸ್ತಾಗಿರುವವರಿಗೆ, ಹಬ್ಬ- ಹರಿದಿನಗಳಲ್ಲಿ ನಿರತರಾಗಿರುವವರಿಗೆ ಮಧ್ಯಾಹ್ನದ ನಿದ್ರೆ ಹೆಚ್ಚು ಹಿತಕರ. ಕೆಲವರು ವ್ಯಾಯಾಮದಿಂದ ಸುಸ್ತು ಆಗುತ್ತಾರೆ. ಇತರರು ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಂತಹವರು ದೇಹಕ್ಕೆ ಚೈತನ್ಯ ತುಂಬಲು ಮಧ್ಯಾಹ್ನ ನಿದ್ರೆ ಮಾಡುವುದರಿಂದ ತಮ್ಮ ಸಮಸ್ಯೆಗಳು ಬೇಗನೆ ಪರಿಹರಿಸಬಹುದು ಎಂದು ತಜ್ಞರು ವಿವರಿಸುತ್ತಾರೆ.
ಸ್ವಲ್ಪ ಹೊತ್ತು ಮಧ್ಯಾಹ್ನ ಅಲ್ಪ ನಿದ್ರೆ ಮಾಡುವುದರಿಂದ ಜ್ಞಾಪಕ ಶಕ್ತಿ ವೃದ್ಧಿಯಾಗುವುದಲ್ಲದೆ ಉತ್ಸಾಹ ಮತ್ತು ಕೆಲಸದ ಗುಣಮಟ್ಟವೂ ಹೆಚ್ಚುತ್ತದೆ. ಅಲ್ಲದೆ, ಹಲವಾರು ಅಧ್ಯಯನಗಳು ಊಟದ ನಂತರ ಚಿಕ್ಕನಿದ್ರೆ ತೆಗೆದುಕೊಳ್ಳುವುದು ಕೆಲಸದಲ್ಲಿ ಉತ್ಪಾದಕತೆ ಹೆಚ್ಚಿಸುತ್ತದೆ ಎಂದು ಸಂಶೋಧನೆಯಿಂದ ಕಂಡುಹಿಡಿಯಲಾಗಿದೆ.
ಯಾವಾಗ ಎಷ್ಟು ಸಮಯ ನಿದ್ರೆ ಮಾಡಬೇಕು?
- ಮಧ್ಯಾಹ್ನದ ಊಟದ ನಂತರ 1ರಿಂದ 3 ಗಂಟೆಗಳ ಒಳಗೆ ನೀವು ಯಾವಾಗ ಬೇಕಾದರೂ ಮಲಗಬಹುದು ಎಂದು ತಜ್ಞರು ಹೇಳುತ್ತಾರೆ.
- ವಯಸ್ಕರು 10ರಿಂದ 30 ನಿಮಿಷ, ಮಕ್ಕಳು, ವೃದ್ಧರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರಿಗೆ 90 ನಿಮಿಷ ನಿದ್ರೆ ಮಾಡಿದರೆ ಸಾಕು ಎನ್ನುತ್ತಾರೆ ಸಂಶೋಧಕರು.
- ಮನೆಯಲ್ಲಿದ್ದವರು ಹಾಸಿಗೆಯಲ್ಲಿ ಚಿಕ್ಕ ನಿದ್ರೆ ಮಾಡಬಹುದು. ಎಡಕ್ಕೆ ತಿರುಗಿ ಮಲಗಲು ಸೂಚಿಸಲಾಗುತ್ತದೆ. ಕಚೇರಿಯ ನಿಯಮಗಳು ಅವಕಾಶ ನೀಡಿದರೆ ಊಟದ ವಿರಾಮದ ವೇಳೆ ಎದುರಿನ ಡೆಸ್ಕ್ ಮೇಲೆ ಮಲಗಬಹುದು ಎನ್ನುತ್ತಾರೆ ತಜ್ಞರು.
- ಹಾಸಿಗೆ ಆರಾಮದಾಯಕವಾಗಿಲ್ಲದಿದ್ದರೆ, ಅವರು ಆರಾಮದಾಯಕವಾದ ಕುರ್ಚಿಯಲ್ಲಿ ಕುಳಿತು ಕೂಡ ನಿದ್ರಿಸಬಹುದು ಎಂದು ತಜ್ಞರು ಹೇಳುತ್ತಾರೆ.
ಮಧ್ಯಾಹ್ನದ ಅಲ್ಪ ನಿದ್ರೆ ವೇಳೆ ಏನು ಮಾಡಬಾರದು?
ಮಧ್ಯಾಹ್ನ ನಿದ್ದೆ ಮಾಡುವಾಗ ನೆನಪಿನಲ್ಲಿಡಬೇಕಾದ ಕೆಲವು ಮಾಡಬೇಕಾದ ಹಾಗೂ ಮಾಡಬಾರದ ಸಂಗತಿಗಳ ಬಗ್ಗೆ ತಜ್ಞರು ವಿವರಿಸಿರುವುದು ಹೀಗಿದೆ ನೋಡಿ..
- ಕೆಲವರು ವಿರಾಮವಿಲ್ಲದೆ ಇಡೀ ದಿನವನ್ನು ಕಳೆಯುತ್ತಾರೆ ಮತ್ತು ಸಂಜೆ ಸ್ವಲ್ಪ ನಿದ್ರೆ ಮಾಡುತ್ತಾರೆ. ಇದು ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಅದರಲ್ಲೂ ಸಂಜೆ 4ರಿಂದ 7 ಗಂಟೆಯ ನಡುವೆ ಸ್ವಲ್ಪವೂ ನಿದ್ರೆ ಮಾಡಬಾರದು.
- ಕೆಲವರಿಗೆ ಊಟದ ನಂತರ ಟೀ, ಕಾಫಿ, ಚಾಕೊಲೆಟ್ ಸೇವಿಸುವ ಅಭ್ಯಾಸವಿರುತ್ತದೆ. ಇದರಿಂದ ನಿದ್ರೆ ಕೆಡುತ್ತದೆ. ಮತ್ತು ದೈಹಿಕವಾಗಿ ಮತ್ತು ಮಾನಸಿಕವಾಗಿ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
- ನಮ್ಮಲ್ಲಿ ಹೆಚ್ಚಿನವರು ಟಿವಿ ಮತ್ತು ಮೊಬೈಲ್ ಫೋನ್ ನೋಡುತ್ತಾ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ, ಇದರಿಂದ ನಿದ್ರಾ ಭಂಗ ಉಂಟಾಗುತ್ತದೆ, ಒತ್ತಡ ಕೂಡ ಹೆಚ್ಚುತ್ತದೆ.
ಓದುಗರಿಗೆ ಮುಖ್ಯ ಸೂಚನೆ:ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಹಾಗೂ ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.
ಇದನ್ನೂ ಓದಿ:ಮನುಷ್ಯನ ರಕ್ತದಿಂದಲೇ ಔಷಧ ಸಿದ್ಧ, ವಿನೂತನ ಆವಿಷ್ಕಾರ: ಮೂಳೆ ಮುರಿತ, ಗಾಯಗಳಿಗೆ ಸುಲಭ ಚಿಕಿತ್ಸೆ!