ಕೇಂಬ್ರಿಡ್ಜ್: ಅಪರೂಪದ ಪ್ರಕರಣಗಳಲ್ಲಿ ತಾವು ತಯಾರಿಸಿದ ಕೋವಿಡ್ 19 ಲಸಿಕೆ ಅಡ್ಡ ಪರಿಣಾಮ ಹೊಂದಿದೆ ಎಂದು ನ್ಯಾಯಾಲಯದೆದುರು ದಾಖಲಾತಿಸಮೇತ ಒಪ್ಪಿಕೊಂಡಿದ್ದ ದೈತ್ಯ ಔಷಧ ತಯಾರಿಕಾ ಸಂಸ್ಥೆ ಆಸ್ಟ್ರಾಜೆನೆಕಾ, ಇದೀಗ ವಿಶ್ವಾದ್ಯಂತ ತನ್ನ ಲಸಿಕೆಯನ್ನು ಹಿಂಪಡೆಯುವುದಾಗಿ ಘೋಷಿಸಿದೆ. ಈ ಬಗ್ಗೆ ಬ್ರಿಟಿಷ್ ಸುದ್ದಿಪತ್ರಿಕೆ ಟೆಲಿಗ್ರಾಫ್ ವರದಿ ಮಾಡಿದೆ.
ವಾಣಿಜ್ಯ ಕಾರಣ ನೀಡಿದ ಸಂಸ್ಥೆ: ವಾಣಿಜ್ಯ ಕಾರಣಗಳಿಂದ ಮಾರುಕಟ್ಟೆಗಳಿಂದ ಲಸಿಕೆಗಳನ್ನು ಹಿಂಪಡೆಯಲಾಗುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಅನೇಕ ಕೋವಿಡ್ ರೂಪಾಂತರಗಳಿಗೆ ಲಸಿಕೆಗಳಿದ್ದು, ನಮ್ಮ ಸಂಸ್ಥೆಯ ಲಸಿಕೆಯ ಬೇಡಿಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಸಂಸ್ಥೆಯು ಯಾವುದೇ ಕೋವಿಡ್ ಲಸಿಕೆಯನ್ನು ತಯಾರಿಸುವುದಿಲ್ಲ ಅಥವಾ ಪೂರೈಕೆ ಮಾಡುವುದಿಲ್ಲ ಎಂದು ಆಸ್ಟ್ರಾಜೆನೆಕಾ ತಿಳಿಸಿದೆ.
ಮಾರ್ಚ್ 5ರಂದು ಸಂಸ್ಥೆಯು ಲಸಿಕೆ ಹಿಂಪಡೆಯಲು ಅರ್ಜಿ ಸಲ್ಲಿಸಿದ್ದು, ಮೇ 7ರಿಂದ ಜಾರಿಗೆ ಬಂದಿದೆ. ಲಸಿಕೆಯನ್ನು ಮಾರುಕಟ್ಟೆಯಿಂದ ಹಿಂಪಡೆಯುವ ನಿರ್ಧಾರದ ಬೆನ್ನಲ್ಲೇ ಯುರೋಪಿಯನ್ ಯೂನಿಯನ್ ಈ ಲಸಿಕೆಯನ್ನು ಬಳಸುವುದಿಲ್ಲ ಎಂದು ಹೇಳಿದೆ.
ನಮ್ಮ ಲಸಿಕೆ ಟಿಟಿಎಸ್ ಎಂಬ ಅಡ್ಡ ಪರಿಣಾಮಕ್ಕೆ ಕಾರಣವಾಗಬಹುದು ಎಂದು ನಾವು ಮಾರುಕಟ್ಟೆಯಿಂದ ಹಿಂಪಡೆಯುತ್ತಿಲ್ಲ. ಲಸಿಕೆ ಹಿಂಪಡೆಯುವಿಕೆ ಮತ್ತು ಅಡ್ಡ ಪರಿಣಾಮದ ಕಾರಣಗಳು ಕೇವಲ ಕಾಕತಾಳೀಯವಷ್ಟೇ ಎಂದು ಆಸ್ಟ್ರಾಜೆನೆಕಾ ತಿಳಿಸಿರುವುದಾಗಿ ದಿ ಟೆಲಿಗ್ರಾಫ್ ವರದಿಯಲ್ಲಿ ಉಲ್ಲೇಖವಿದೆ.