ನವದೆಹಲಿ: ಪ್ರತಿ ಚಳಿಗಾಲದ ಸಮಯದಲ್ಲಿ ಕೆಲವು ವಾರಗಳವರೆಗೆ ದೇಶದ ಬಹುತೇಕ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (AQI) ತೀರಾ ಕಳಪೆ ಮಟ್ಟ ತಲುಪುತ್ತದೆ. ಇದು ಜನರ ಆರೋಗ್ಯದ ಮೇಲೆ ತೀವ್ರ ಸ್ವರೂಪದ ಪರಿಣಾಮ ಉಂಟುಮಾಡುವ ಸಾಧ್ಯತೆ ಹೆಚ್ಚು ಎಂದು ಹೊಸ ಅಧ್ಯಯನ ವರದಿಯೊಂದು ಎಚ್ಚರಿಸಿದೆ. ಇದೀಗ ವಿಜ್ಞಾನಿಗಳು ಹೇಳುವಂತೆ, ವಾಯುಮಾಲಿನ್ಯಕ್ಕೆ ಯಾವುದೇ ಸುರಕ್ಷಿತ ಮಿತಿ ಎಂಬುದಿಲ್ಲ. ಇದರ ಜೊತೆಗೆ ಹೆಚ್ಚಿನ ಮಟ್ಟದ ವಾಯು ಮಾಲಿನ್ಯವನ್ನು ಸರಿಪಡಿಸುವ ಕಾರ್ಯವೂ ಅಸಾಧ್ಯವಾಗಿದೆ. ಕಡಿಮೆ ಅಥವಾ ಮಧ್ಯಮ ಮಟ್ಟದ ವಾಯು ಮಾಲಿನ್ಯಕ್ಕೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ದೇಹದ ರಕ್ತನಾಳಗಳಿಗೆ ಹಾನಿಯಾಗುತ್ತದೆ. ಹೃದಯಾಘಾತದ ಅಪಾಯವನ್ನೂ ಇದು ಹೆಚ್ಚಿಸಬಲ್ಲದು ಎಂದು ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ಹೇಳಿದೆ.
''ಕಡಿಮೆ ಮಟ್ಟದ ವಾಯು ಮಾಲಿನ್ಯಕ್ಕೆ ನಿರಂತರವಾಗಿ ಒಡ್ಡುವಿಕೆಯು ರಕ್ತನಾಳಗಳಿಗೆ ಹಾನಿ ಮಾಡುತ್ತದೆ. ಈ ಮೂಲಕ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ'' ಎಂದು ಹಿರಿಯ ಹೃದ್ರೋಗ ತಜ್ಞ ಮತ್ತು ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ಸಂಸ್ಥಾಪಕ ಡಾ.ಶ್ರೀನಾಥ್ ರೆಡ್ಡಿ ಹೇಳಿದ್ದಾರೆ.
ಕಲುಷಿತ ಗಾಳಿ ಮತ್ತು ಹೃದಯದ ಆರೋಗ್ಯದ ನಡುವೆ ನಿರಂತರ ಸಂಬಂಧವಿದೆ. ಗಾಳಿಯ ಗುಣಮಟ್ಟಕ್ಕಾಗಿ ನಾವು ವಿಶ್ವ ಆರೋಗ್ಯ ಸಂಸ್ಥೆ (WHO) ಮಾರ್ಗಸೂಚಿಗಳನ್ನು ಅನುಸರಿಸಿದರೆ ಮಾತ್ರ ಇದರಿಂದಾಗುವ ಪರಿಣಾಮಗಳನ್ನು ತಡೆಯಬಹುದು. ಸೂಕ್ಷ್ಮ ಗಾತ್ರದ ಕಣಗಳ ಪಿಎಂ 2.5ಗೆ ದೀರ್ಘಕಾಲದವರೆಗೆ ಒಡ್ಡಿಕೊಂಡರೆ, ಹೃದಯರಕ್ತನಾಳದ ಕಾಯಿಲೆಯ ಅಪಾಯ ಜಾಸ್ತಿ ಮತ್ತು ಇದಕ್ಕೆ ಯಾವುದೇ ಸುರಕ್ಷಿತ ಮಿತಿ ಇಲ್ಲ ಎಂದು ಸಂಶೋಧನಾ ವರದಿ ಹೇಳುತ್ತದೆ. ಕಾರ್ಡಿಯಾಕ್ ಆರ್ಹೆತ್ಮಿಯಾ ಮತ್ತು ಹೃದಯ ವೈಫಲ್ಯವು ಪಿಎಂ 2.5ಗೆ ಒಡ್ಡಿಕೊಂಡ ರೋಗಿಗಳಲ್ಲಿ ಕಂಡುಬಂದಿದೆ. ಕಾರ್ಡಿಯಾಕ್ ಆರ್ಹೆತ್ಮಿಯಾ ಎನ್ನುವುದು ಅನಿಯಮಿತ ಅಥವಾ ಅಸಹಜ ರೀತಿಯ ಹೃದಯಬಡಿತದ ಸ್ಥಿತಿ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ≤5 µg/m3ನ ಗಾಳಿಯ ಗುಣಮಟ್ಟದ ಮಾನದಂಡಗಳನ್ನು ಅನುಸರಿಸುವುದು ಗಣನೀಯ ಪ್ರಯೋಜನಗಳನ್ನು ನೀಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.