ಹೈದರಾಬಾದ್: ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಹೆಸರಿನಲ್ಲಿ ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಮನೆಯಿಂದ ಕ್ಯಾಬ್ ಬುಕ್ ಮಾಡಿದ ಯುವಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಗಾಜಿಯಾಬಾದ್ನ 20 ವರ್ಷದ ರೋಹಿತ್ ತ್ಯಾಗಿ ಬಂಧಿತ ಆರೋಪಿ.
ಸಲ್ಮಾನ್ ಖಾನ್ ನಿವಾಸ ಗ್ಯಾಲಕ್ಸಿ ಅಪಾರ್ಟ್ಮೆಂಟ್ಗೆ ಕ್ಯಾಬ್ ಡ್ರೈವರ್ ಬಂದಾಗ. ಲಾರೆನ್ಸ್ ಬಿಷ್ಣೋಯಿ ಹೆಸರಿನಲ್ಲಿ ಕ್ಯಾಬ್ ಬುಕ್ ಮಾಡಿರುವ ಕುರಿತು ವಾಚ್ಮಾನ್ಗೆ ಕೇಳಿದ್ದಾರೆ. ಇದನ್ನು ಕೇಳಿದಾಕ್ಷಣ ವಾಚ್ಮೆನ್ ಗಾಬರಿಗೊಂಡಿದ್ದಾನೆ. ತಕ್ಷಣಕ್ಕೆ ಬುಕ್ಕಿಂಗ್ ಕುರಿತು ಬಾಂದ್ರಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಮುಂಬೈ ಬಾಂದ್ರಾ ಪೊಲೀಸರು ಕ್ಯಾಬ್ ಡ್ರೈವರ್ನ ವಿಚಾರಣೆ ನಡೆಸಿದಾಗ ಆನ್ಲೈನ್ ಮೂಲಕ ವಾಹನ ಬುಕ್ ಮಾಡಿದ ವ್ಯಕ್ತಿಯ ಮಾಹಿತಿ ಪಡೆದಿದ್ದಾರೆ.
ಕ್ಯಾಬ್ ಬುಕ್ ಮಾಡಿದ ವ್ಯಕ್ತಿ ಗಾಜಿಯಾಬಾದ್ನ 20 ವರ್ಷದ ವಿದ್ಯಾರ್ಥಿಯಾಗಿದ್ದು, ರೋಹಿತ್ ತ್ಯಾಗಿ ಎಂಬುದಾಗಿ ಪತ್ತೆಯಾಗಿದೆ. ತನಿಖೆ ವೇಳೆ ದುರುದ್ದೇಶದಿಂದ ಹುಸಿ ಬೆದರಿಕೆ ಒಡ್ಡುವ ನೆಪದಲ್ಲಿ ಆರೋಪಿ ಲಾರೆನ್ಸ್ ಬಿಷ್ಣೋಯಿ ಹೆಸರಲ್ಲಿ ಈ ರೀತಿ ಕ್ಯಾಬ್ ಬುಕ್ ಮಾಡಿರುವುದಾಗಿ ತಿಳಿದು ಬಂದಿದೆ. ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸರು ಆತನ ವಶಕ್ಕೆ ಪಡೆದಿದ್ದಾರೆ. ಇದಾದ ಬಳಿಕ ಆತನನ್ನು ಮುಂಬೈಗೆ ಕರೆತರಲಾಗಿದ್ದು, ಇಲ್ಲಿ ಕೋರ್ಟ್ ಮುಂದೆ ಹಾಜರು ಪಡಿಸಿ, ಎರಡು ದಿನ ಬಾಂದ್ರಾ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.