ಬೆಂಗಳೂರು: 'ದೇಶದ ಮೇಲೆ, ನಾಡಿನ ಮೇಲೆ, ರಾಜ್ಯದ ಮೇಲೆ ಪ್ರೀತಿ ಇರುವವರು ವೋಟ್ ಮಾಡ್ತಾರೆ. ಎಷ್ಟೇ ಅರಿವು ಮೂಡಿಸಿದ್ರೂ ಕೂಡ ವೋಟ್ ಹಾಕೋದಕ್ಕೆ ಬರಲ್ಲ ಎಂದರೆ ಏನೂ ಮಾಡಲು ಆಗಲ್ಲ' ಎಂದು ಕಿಚ್ಚ ಸುದೀಪ್ ತಿಳಿಸಿದ್ದಾರೆ. ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಕನ್ನಡ ಚಿತ್ರರಂಗದವರು ಆಗಮಿಸಿ ತಮ್ಮ ಮತ ಹಾಕುತ್ತಿದ್ದಾರೆ. ಪುಟ್ಟೇನಹಳ್ಳಿಯ ಆಕ್ಸ್‌ಫರ್ಡ್ ಇಂಗ್ಲಿಷ್ ಶಾಲೆಯಲ್ಲಿ ಕಿಚ್ಚ ಮತದಾನ ಮಾಡಿದ್ದಾರೆ.
ವೋಟ್ ಹಾಕಿದವ್ರಿಗೆ ಒಳ್ಳೆಯದಾಗುತ್ತಿದೆ. ಜವಾಬ್ದಾರಿ ಇರುವವರು ಬಂದು ಮತ ಹಾಕುತ್ತಾರೆ. ಯಾರು ಮತ ಚಲಾಯಿಸುವುದಿಲ್ಲವೋ ಅವರ ಬಗ್ಗೆ ತಲೆ ಕೆಡಿಸಿಕೊಳ್ಳೋದನ್ನು ಬಿಟ್ಟು, ವೋಟ್ ಹಾಕೋರ ಬಗ್ಗೆ ಯೋಚನೆ ಮಾಡೋಣ ಎಂದು ತಿಳಿಸಿದರು. ಮತ ಚಲಾಯಿಸಲು ಬಂದ ಸುದೀಪ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.
ದರ್ಶನ್, ಶರಣ್, ವಿಜಯ್ ರಾಘವೇಂದ್ರ, ಮತದಾನ:ಆರ್.ಆರ್ ನಗರದ ಮೌಂಟ್ ಕಾರ್ಮಲ್ನ ಮತಗಟ್ಟೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತದಾನ ಮಾಡಿದರು. ನಾಗರಬಾವಿ ಕೆಎಲ್ಇ ಕಾಲೇಜಿನ ಮತಗಟ್ಟೆಯಲ್ಲಿ ನಟ ಶರಣ್ ವೋಟಿಂಗ್ ಮಾಡಿದ್ದಾರೆ. ಜಕ್ಕೂರಿನ ಮತಕೇಂದ್ರದಲ್ಲಿ ನಟ ವಿಜಯ್ ರಾಘವೇಂದ್ರ ತಮ್ಮ ಹಕ್ಕು ಚಲಾಯಿಸಿದರು.