ವಯನಾಡ್ (ಕೇರಳ): ಭೀಕರ ಭೂಕುಸಿತಕ್ಕೆ ದೇವರ ನಾಡಿನ ವಯನಾಡ್ ಅಕ್ಷರಶಃ ತತ್ತರಿಸಿದೆ. ದುರಂತಕ್ಕೆ ಜನಸಾಮಾನ್ಯರು ಸೇರಿದಂತೆ ಸೆಲೆಬ್ರಿಟಿಗಳು, ವಿವಿಧ ಕ್ಷೆತ್ರಗಳ ಗಣ್ಯರು ಮರುಗಿದ್ದಾರೆ. ಇದೀಗ ಘಟನಾ ಸ್ಥಳಕ್ಕೆ ಸೌತ್ ಸೂಪರ್ ಸ್ಟಾರ್ ಮೋಹನ್‌ಲಾಲ್ ಭೇಟಿ ಕೊಟ್ಟಿದ್ದಾರೆ.
ಭೂಕುಸಿತದಿಂದ ತೀವ್ರ ಹಾನಿಗೊಳಗಾಗಿರುವ ಮುಂಡಕ್ಕೈ ಮತ್ತು ಮೆಪ್ಪಾಡಿ ಪ್ರದೇಶಗಳಿಗೆ ಇಂದು ದಕ್ಷಿಣ ಚಿತ್ರರಂಗದ ಜನಪ್ರಿಯ ನಟ ಮೋಹನ್‌ಲಾಲ್ ಭೇಟಿ ನೀಡಿ, ಪ್ರಾದೇಶಿಕ ಸೇನಾ ಶಿಬಿರಕ್ಕೆ ಆಗಮಿಸಿದರು. ಮಿಲಿಟರಿ ಸಮವಸ್ತ್ರದಲ್ಲಿ ಸೂಪರ್ ಸ್ಟಾರ್ ಕಾಣಿಸಿಕೊಂಡಿದ್ದಾರೆ. ಪ್ರಾದೇಶಿಕ ಸೈನ್ಯದಲ್ಲಿ ಲೆಫ್ಟಿನೆಂಟ್ ಕೊಲೋನಲ್ ಗೌರವ ಶ್ರೇಣಿಯನ್ನು ಹೊಂದಿರುವ ನಟನನ್ನು ಸೇನೆ ಆತ್ಮೀಯವಾಗಿ ಸ್ವಾಗತಿಸಿತು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮೋಹನ್ ಲಾಲ್, ಇಂತಹ ಕಠಿಣ ಸ್ಥಿತಿಯಲ್ಲಿ ಒಗ್ಗಟ್ಟು ಮತ್ತು ಸ್ಥಿತಿಸ್ಥಾಪಕತ್ವದ ಮಹತ್ವವನ್ನು ಒತ್ತಿ ಹೇಳಿದರು. "ಕಠಿಣ ಪರಿಸ್ಥಿತಿಯಲ್ಲೂ ಸಹ ನಾವು ಯಾವಾಗಲೂ ಬಲಶಾಲಿಯಾಗಿ ಹೊರಹೊಮ್ಮುತ್ತೇವೆ. ಈ ಸವಾಲಿನ ಸಮಯದಲ್ಲಿ ನಾವು ಒಗ್ಗಟ್ಟಾಗಿರೋಣ ಮತ್ತು ನಮ್ಮ ಸ್ಥೈರ್ಯವನ್ನು ಪ್ರದರ್ಶಿಸೋಣ. ಜೈ ಹಿಂದ್'' ಎಂದು ತಿಳಿಸಿದರು. ಇಂತಹ ಕಠಿಣ ಸನ್ನಿವೇಶದಲ್ಲಿ ಬಲಶಾಲಿಯಾಗಿರಲು ಮತ್ತು ಒಟ್ಟಾಗಿ ಕೆಲಸ ಮಾಡಲು ಪ್ರತಿಯೊಬ್ಬರಲ್ಲೂ ಕೇಳಿಕೊಂಡರು.
ಜನಪ್ರಿಯ ನಟನ ಈ ಭೇಟಿ, ಸಂತ್ರಸ್ತರಿಗೆ ಸಾಂತ್ವನ ಹೇಳುವುದು ಹಾಗೂ ದುರಂತ ತಂದೊಡ್ಡಿರುವ ಹಾನಿಯನ್ನು ವೈಯಕ್ತಿಕವಾಗಿ ಗಮನಿಸುವ ಗುರಿಯನ್ನು ಹೊಂದಿತ್ತು. ಅದರಲ್ಲೂ ಮುಂಡಕ್ಕೈನ ಪರಿಸ್ಥಿತಿಯನ್ನು ಗಮನಿಸುವುದು ಅವರ ಪ್ರಮುಖ ಉದ್ದೇಶವಾಗಿತ್ತು. ಮುಂಡಕೈ ಭೂಕುಸಿತ ದುರಂತದಿಂದ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದು.