ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ನಿನ್ನೆ ಸಂಜೆ ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್ ಅವರ ಕೈ ಹಿಡಿದಿದ್ದಾರೆ. ಇದು ವಿಶ್ವ ಕಂಡ ಅದ್ಧೂರಿ ಮದುವೆಗಳಲ್ಲೊಂದು. ಸಾವಿರಾರು ಕೋಟಿ ರೂ. ಖರ್ಚು ಮಾಡಿ ಆಯೋಜಿಸಿರುವ ಈ ಮದುವೆ ಕಾರ್ಯಕ್ರಮ ಇಡೀ ಜಗತ್ತಿನ ಗಮನ ಸೆಳೆದಿದೆ. ಸಮಾರಂಭಕ್ಕೆ ಜಾಗತಿಕ ಮಟ್ಟದ ಸೆಲೆಬ್ರಿಟಿಗಳು, ರಾಜಕಾರಣಿಗಳು, ಬಾಲಿವುಡ್ ಮತ್ತು ದಕ್ಷಿಣ ಭಾರತೀಯ ಚಿತ್ರರಂಗದ ಗಣ್ಯರು, ಅಗ್ರ ಕ್ರಿಕೆಟಿಗರು ಸೇರಿದಂತೆ ವಿವಿಧ ಕ್ಷೇತ್ರಗಳ ಖ್ಯಾತನಾಮರು ಸಾಕ್ಷಿಯಾಗಿದ್ದರು.
ಈವೆಂಟ್ಗೆ ಜಾಗತಿಕ ಮಟ್ಟದ ಗಣ್ಯ ವ್ಯಕ್ತಿಗಳು ಆಗಮಿಸಿ ಗಮನ ಸೆಳೆದಿದ್ದಾರೆ. ಕಿಮ್ ಕಾರ್ಡಶಿಯಾನ್, ಖ್ಲೋಯೆ ಕಾರ್ಡಶಿಯಾನ್, ನೈಜೀರಿಯಾದ ರ‍್ಯಾಪರ್ ರೆಮಾ, ಯುಕೆ ಮಾಜಿ ಪ್ರಧಾನಿ ಟೋನಿ ಬ್ಲೈರ್ ಮತ್ತು ಸೌದಿ ಅರಾಮ್ಕೊ ಸಿಇಓ ಅಮೀನ್ ನಾಸರ್, ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಅಧ್ಯಕ್ಷ ಜಯ್ ಲೀ ಮತ್ತು ಜಿಎಸ್‌ಕೆ (GSK plc) ಸಿಇಓ ಎಮ್ಮಾ ವಾಲ್ಮ್ಸ್ಲೇ, ಜಾನ್ ಸೀನಾ, ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು.
ಅಮಿತಾಭ್ ಬಚ್ಚನ್ ಅವರ ಸಂಪೂರ್ಣ ಕುಟುಂಬ, ಶಾರುಖ್ ಖಾನ್ ಫ್ಯಾಮಿಲಿ, ಸಲ್ಮಾನ್ ಖಾನ್, ಅಜಯ್ ದೇವಗನ್, ರಣ್ಬೀರ್ ಕಪೂರ್, ಆಲಿಯಾ ಭಟ್, ರೇಖಾ, ಟೈಗರ್ ಶ್ರಾಫ್ ಫ್ಯಾಮಿಲಿ, ವರುಣ್ ಧವನ್, ಕತ್ರಿನಾ ಕೈಫ್ - ವಿಕ್ಕಿ ಕೌಶಲ್, ದೀಪಿಕಾ ಪಡುಕೋಣೆ - ರಣ್ವೀರ್ ಸಿಂಗ್ ಮತ್ತು ದಕ್ಷಿಣದ ಸೂಪರ್‌ಸ್ಟಾರ್‌ಗಳಾದ ರಜನಿಕಾಂತ್, ರಾಮ್ ಚರಣ್, ಮಹೇಶ್ ಬಾಬು ಸೇರಿದಂತೆ ಭಾರತೀಯ ಚಿತ್ರರಂಗದ ಗಣ್ಯರು ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.