Vidhyarthi Vidyarthiniyare B Side:ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸ್ಯಾಂಡಲ್ವುಡ್ನಲ್ಲಿ ಒಂದಿಷ್ಟು ಹೊಸತನಕ್ಕೆ ಸದ್ದು ಮಾಡುತ್ತಿರುವ ಸಿನಿಮಾ. ಇದೀಗ ಬಿಡುಗಡೆಯ ಹೊಸ್ತಿಲಿನಲ್ಲಿದ್ದು, ಸೈಡ್ ಬಿ ಟ್ರೈಲರ್ ಲಾಂಚ್ ಆಗಿದೆ. ಜಬರ್ದಸ್ತ್ ಶೈಲಿಯಲ್ಲಿ ಮೂಡಿ ಬಂದಿರುವ ಈ ಟ್ರೈಲರ್ ಕಂಡವರೆಲ್ಲ ಅಕ್ಷರಶಃ ಥ್ರಿಲ್ ಆಗಿದ್ದಾರೆ. ಶೀರ್ಷಿಕೆ ನೋಡಿದವರು ಒಂದು ಸಿದ್ಧಸೂತ್ರದ ಕಲ್ಪನೆ ಮೂಡಿಸಿಕೊಂಡಿದ್ದರು. ಆದರೆ, ಈ ಸಿನಿಮಾ ಅದೆಲ್ಲವನ್ನೂ ಮೀರಿಕೊಂಡ ರಗಡ್ ಕಥೆಯನ್ನೊಳಗೊಂಡಿದೆ ಎಂಬುದನ್ನು ಸೈಡ್ ಬಿ ಟ್ರೈಲರ್ ಸಾಕ್ಷೀಕರಿಸಿದೆ!
ನಿರ್ದೇಶಕ ಅರುಣ್ ಅಮುಕ್ತ ಇದೊಂದು ಭಿನ್ನ ಕಥಾನಕ ಎಂಬ ಸುಳಿವು ಬಿಟ್ಟುಕೊಟ್ಟಿದ್ದರು. ಈಗ ಸದರಿ ಟ್ರೈಲರ್ ಅದನ್ನು ಸಾಬೀತುಪಡಿಸಿದೆ. ಈ ಮೂಲಕ ಒಂದಿಡೀ ಸಿನಿಮಾದ ಝಲಕ್ಕುಗಳು ಸ್ಪಷ್ಟವಾಗಿ ಜಾಹೀರಾಗಿವೆ. ಕಾಲೇಜು ಕಹಾನಿಯ ಸುತ್ತಾ, ಮೈನವಿರೇಳಿಸೋ ಸಸ್ಪೆನ್ಸ್ ಥ್ರಿಲ್ಲರ್, ಕ್ರೈಂನೊಂದಿಗೆ ಈ ಸಿನಿಮಾ ರೂಪುಗೊಂಡಿರುವುದು ಸ್ಪಷ್ಟವಾಗಿದೆ. ನೋಡಿದವರೆಲ್ಲ ಇದೊಂದು ಪ್ರಾಮಿಸಿಂಗ್ ಟ್ರೈಲರ್ ಅನ್ನೋ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ನೋಡಲೇಬೇಕು ಎಂಬ ತುಡಿತ ಮೂಡಿಸುವಷ್ಟು ಪರಿಣಾಮಕಾರಿಯಾಗಿ ಈ ಟ್ರೈಲರ್ ಅನ್ನು ರೂಪಿಸಲಾಗಿದೆ.
ಚಂದನ್ ಶೆಟ್ಟಿ, ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಸೇರಿದಂತೆ ಮುಂತಾದವರು ನಟಿಸಿದ್ದಾರೆ. ಈವರೆಗೂ ಒಂದಷ್ಟು ಹಾಡುಗಳ ಮೂಲಕವೇ ಪ್ರಧಾನವಾಗಿ ಈ ಸಿನಿಮಾ ಸೆಳೆದುಕೊಂಡಿತ್ತು. ಇದೀಗ ತೆರೆಗಾಣುವ ಕಡೇ ಘಳಿಗೆಯಲ್ಲಿ ಬಿ ಸೈಡ್ ಟ್ರೈಲರ್ ಮೂಲಕ ಚಿತ್ರತಂಡ ಮೋಡಿ ಮಾಡಿದೆ. ಈ ಮೂಲಕ ಪಾತ್ರಗಳ ಚಹರೆಗಳೆಲ್ಲ ಜಾಹೀರಾಗಿವೆ.