ಕನ್ನಡದಲ್ಲಿ ಒಳ್ಳೆಯ ಕಂಟೆಂಟ್ ಚಿತ್ರಗಳು ಹೆಚ್ಚು ಬರುತ್ತಿದೆ. ಅಂತಹುದೇ ಉತ್ತಮ ಕಂಟೆಂಟ್ ಹೊಂದಿರುವ ಸಿನಿಮಾ ನಸಾಬ್. ಚಿತ್ರದ ಟೈಟಲ್ನಿಂದ ಗಮನ ಸೆಳೆಯುತ್ತಿರೋ ಈ ಚಿತ್ರ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಹೀಗಾಗಿ ನಸಾಬ್ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚಿಗೆ ಅದ್ದೂರಿಯಾಗಿ ನಡೆಯಿತು. ಟ್ರೇಲರ್ ಹಾಗೂ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಬಂಜಾರ ಶಕ್ತಿಪೀಠದ ಶ್ರೀ ಕುಮಾರ ಮಹಾರಾಜರು, ಉಪ ಸಭಾಪತಿ ರುದ್ರಪ್ಪ ಎಂ ಲಮಾಣಿ, ಐಎಎಸ್ ಅಧಿಕಾರಿ ಜಗದೀಶ್ ಜಿ, ಮಾಜಿ ಶಾಸಕ ಪಿ.ರಾಜೀವ್, ಡಾ.ಶೋಭ ಜಿ, ಶೋಭಾ ಟಿ.ಆರ್, ಹರೀಶ್ ಮುಂತಾದವರು ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.
ನಸಾಬ್ ಚಿತ್ರಕ್ಕೆ ಕಥೆ ಬರೆದಿರುವ ಕಿಶೋರ್ ಕುಮಾರ್ ನಾಯ್ಕ್ ಮಾತನಾಡಿ, ಇದು ನನ್ನ ಜೀವನದ ಕಥೆ. ನಮ್ಮ ತಂದೆ ತಾಯಿಗೆ ಹದಿನಾಲ್ಕು ಜನ ಮಕ್ಕಳು. ಬಡತನ ಬೇರೆ. ಅಂತಹ ಬಡ ಕುಟುಂಬದಲ್ಲಿ ಹುಟ್ಟಿದ ಬಂಜಾರ ಸಮುದಾಯದ ಹುಡುಗನೊಬ್ಬ ಚೆನ್ನಾಗಿ ಓದಿ ವಿದ್ಯಾವಂತನಾಗಿ ಉನ್ನತ ಹುದ್ದೆಯನ್ನು ಅಲಂಕರಿಸುತ್ತಾನೆ. ಇದೇ ಚಿತ್ರದ ಕಥಾಹಂದರ. ನಾನು, ನನ್ನ ಜೀವನದ ಕಥೆಯನ್ನು ನಸಾಬ್ ಎಂದು ಪುಸ್ತಕ ರೂಪದಲ್ಲಿ ಹೊರ ತಂದೆ. ಇದನ್ನು ಓದಿದ್ದ ಮಿತ್ರ ಹರೀಶ್, ಈ ಕೃತಿಯನ್ನು ಸಿನಿಮಾ ಮಾಡೋಣ ಎಂದರು. ಈ ಸಿನಿಮಾ ಆಗಲು ಹರೀಶ್ ಅವರೆ ಮುಖ್ಯ ಕಾರಣ. ನನ್ನ ಮಗ ಕೀರ್ತಿ ಕುಮಾರ್ ನಾಯ್ಕ್ ಈ ಚಿತ್ರವನ್ನು ನಿರ್ದೇಶಿಸುವುದರೊಂದಿಗೆ ನಾಯಕನಾಗಿಯೂ ಅಭಿನಯಿಸಿದ್ದಾರೆ. ನಸಾಬ್ ಎಂದರೆ ಲಂಬಾಣಿ ಭಾಷೆಯಲ್ಲಿ ನ್ಯಾಯ ಎಂದು ಅರ್ಥ ಎಂದರು.