ತನ್ನ ವಿಭಿನ್ನ ಶೀರ್ಷಿಕೆ ಮತ್ತು ಕಥಾಹಂದರದ ಮೂಲಕ ಸಿನಿಪ್ರಿಯರ ಗಮನ ಸೆಳೆದಿರುವ 'ಗುಂಮ್ಟಿ' ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ 'ಹಾಡುವ ಹಕ್ಕಿ ಹಾಡುತೈತಿ ಮನುಸಾ, ಕಾಯಕ ಮಾಡಿ ಕಾಣೋ ನೀನು ಕನಸಾ' ಎಂಬ ಹಾಡನ್ನು ಇತ್ತೀಚೆಗೆ ಅನಾವರಣಗೊಳಿಸಿದೆ.
'ಗುಂಮ್ಟಿ' ಚಿತ್ರದ ಈ ಗೀತೆಗೆ ಮೆಹಬೂಬ್ ಸಾಬ್ ಧ್ವನಿಯಾಗಿದ್ದು, ಡೊಂಡಿ ಮೋಹನ್ ಸಾಹಿತ್ಯ ರಚಿಸಿ, ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಕತ್ತಲೆ ಕೋಣೆ ಮತ್ತು ಇನಾಮ್ದಾರ್ ಸಿನಿಮಾಗಳನ್ನು ನಿರ್ದೇಶಿಸಿ, ಕಂಟೆಂಟ್ ಸಿನಿಮಾ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ, 'ಗುಂಮ್ಟಿ' ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿರುವುದರ ಜೊತೆಗೆ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಗುಂಮ್ಟಿ ಚಿತ್ರದ ಹಾಡೊಂದು ಬಿಡುಗಡೆ ಆಗಿದ್ದು, ಚಿತ್ರತಂಡ ಈ ಚಿತ್ರದ ಅನುಭವಗಳನ್ನು ಹಂಚಿಕೊಂಡಿದ್ದಾರೆ.
'ಗುಂಮ್ಟಿ' ಕಥಾಹಂದರ: ಮೊದಲಿಗೆ 'ಗುಂಮ್ಟಿ' ಬಗ್ಗೆ ಮಾತಿಗಿಳಿದ ನಿರ್ದೇಶಕ ಕಮ್ ನಾಯಕ ನಟ ಸಂದೇಶ್ ಶೆಟ್ಟಿ ಆಜ್ರಿ, ಇದೊಂದು ಕಲಾತ್ಮಕ ಸಿನಿಮಾ. ಕರ್ನಾಟಕದ ಕರಾವಳಿ ತೀರದ ಕುಡುಬಿ ಜನಾಂಗದ ಕಥೆಯನ್ನು ತೆರೆಮೇಲೆ ಹೇಳಲು ಹೊರಟಿದ್ದೇವೆ. ಗುಂಮ್ಟಿ ಎಂಬುದು ಕುಡುಬಿ ಸಮುದಾಯದ ಕಲಾಪ್ರಕಾರದ ಸಾಂಪ್ರದಾಯಿಕ ವಾದ್ಯವಾಗಿದ್ದು, ಅದನ್ನೇ ಸಿನಿಮಾದ ಟೈಟಲ್ ಆಗಿ ಇಟ್ಟುಕೊಂಡಿದ್ದೇವೆ. ಕುಡುಬಿ ಜನಾಂಗದ ಸಂಪ್ರದಾಯ, ಆಚಾರ ವಿಚಾರ, ಬದುಕು ಮತ್ತು ಆಧುನಿಕತೆಯ ನಡುವಿನ ಸಂಘರ್ಷದ ಕಥೆ ಈ ಚಿತ್ರದ ಮೂಲಕ ಅನಾವರಣಗೊಳ್ಲಲಿದೆ ಎಂದು ನಿರ್ದೇಶಕರು ಶೀರ್ಷಿಕೆ ಮತ್ತು ಕಥಾಹಂದರದ ಬಗ್ಗೆ ವಿವರಿಸಿದರು.