ಸೌತ್ ಲೇಡಿ ಸೂಪರ್ ಸ್ಟಾರ್ ಜನಪ್ರಿಯತೆಯ ನಯನತಾರಾ ಮತ್ತು ವಿಶ್ವಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಶಾರುಖ್ ಖಾನ್ ಅವರಿಗೆ ಪ್ರತಿಷ್ಟಿತ ಪ್ರಶಸ್ತಿ ಒಲಿದು ಬಂದಿದೆ. 2023ರ ಬ್ಲಾಕ್ಬಸ್ಟರ್ ಆ್ಯಕ್ಷನ್ ಥ್ರಿಲ್ಲರ್ ಚಿತ್ರ 'ಜವಾನ್'ನಲ್ಲಿನ ಅಮೋಘ ಅಭಿನಯಕ್ಕಾಗಿ ದಾದಾಸಾಹೇಬ್ ಫಾಲ್ಕೆ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್ 2024ರಲ್ಲಿ 'ಅತ್ಯುತ್ತಮ ನಟಿ' ಪ್ರಶಸ್ತಿಯನ್ನು ನಯನತಾರಾ ಮತ್ತು ಎಸ್‌ಆರ್‌ಕೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ನಯನತಾರಾ ಅವರಿಗೆ ಈ ವಿಶೇಷ ಪ್ರಶಸ್ತಿಯನ್ನು ಜವಾನ್ ಸಹನಟ ಶಾರುಖ್ ಖಾನ್ ಪ್ರದಾನ ಮಾಡಿದ್ದಾರೆ.
ಬಾಲಿವುಡ್ ಕಿಂಗ್ ಖ್ಯಾತಿಯ ಶಾರುಖ್ ಖಾನ್ ತಮ್ಮ 'ಜವಾನ್' ಸಹನಟಿಗೆ ಪ್ರಶಸ್ತಿ ಹಸ್ತಾಂತರಿಸಿದ ಹಲವು ವಿಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ವೈರಲ್ ಕ್ಲಿಪ್‌ನಲ್ಲಿ, ಶಾರುಖ್ ಖಾನ್ ನಯನತಾರಾ ಅವರನ್ನು ವೇದಿಕೆಗೆ ಸ್ವಾಗತಿಸುತ್ತಿರುವುದನ್ನು ಕಾಣಬಹುದು. ಎಸ್‌ಆರ್‌ಕೆ ಎಂದಿನಂತೆ ಬಹಳ ಪ್ರೀತಿಯಿಂದ ನಟಿಯ ಕೈ ಹಿಡಿದು ವೇದಿಕೆ ಏರಲು ಸಹಾಯ ಮಾಡಿದ್ದಾರೆ. ಜವಾನ್ ಸಹ ನಟರು ವೇದಿಕೆಯಲ್ಲಿ ತಮ್ಮ ಚಿತ್ರದ ಸೂಪರ್ ಹಿಟ್ 'ಚಲೇಯಾ' ಹಾಡಿಗೆ ಹೆಜ್ಜೆ ಹಾಕುತ್ತಿರುವುದು ಕೂಡ ಕಂಡುಬಂದಿದೆ. ಎಸ್‌ಆರ್‌ಕೆ ಫ್ಯಾನ್ಸ್ ಪೇಜ್ಗಳು ಕಾರ್ಯಕ್ರಮದ ಹಲವು ವಿಡಿಯೋಗಳನ್ನು ಹಂಚಿಕೊಂಡಿವೆ.
ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್ 2024ರಲ್ಲಿ 'ಜವಾನ್' ಚಿತ್ರದಲ್ಲಿನ ಅಭಿನಯಕ್ಕಾಗಿ ಎಸ್‌ಆರ್‌ಕೆ 'ಅತ್ಯುತ್ತಮ ನಟ' ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಚಿತ್ರದಲ್ಲಿ, 'ಚಕ್ ದೇ ಇಂಡಿಯಾ' ನಟ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಯನತಾರಾ ಪೊಲೀಸ್ ಪಾತ್ರದಲ್ಲಿ ಮತ್ತು ಎಸ್‌ಆರ್‌ಕೆ ಅವರ ಲೇಡಿ ಲವ್ ಪಾತ್ರವನ್ನು ನಿರ್ವಹಿಸಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ 7ರಂದು ಬಿಡುಗಡೆಯಾದ 'ಜವಾನ್' ಚಿತ್ರವನ್ನು ದಕ್ಷಿಣ ಚಿತ್ರರಂಗದ ಖ್ಯಾತ ನಿರ್ದೇಶಕ ಅಟ್ಲೀ ನಿರ್ದೇಶಿಸಿದ್ದರು. ಶಾರುಖ್ ಖಾನ್ ಮತ್ತು ಅಟ್ಲೀ ಕುಮಾರ್ ಕಾಂಬಿನೇಶನ್ನ ಮೊದಲ ಪ್ರಾಜೆಕ್ಟ್ ಇದು. ದೀಪಿಕಾ ಪಡುಕೋಣೆ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ, ರಿದ್ಧಿ ಡೋಗ್ರಾ, ಲಹರ್ ಖಾನ್, ಗಿರಿಜಾ ಓಕ್ ಮತ್ತು ಸಂಜೀತಾ ಭಟ್ಟಾಚಾರ್ಯ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.