ಕರ್ನಾಟಕ

karnataka

ETV Bharat / entertainment

'ಹಯಗ್ರೀವ' ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡುತ್ತಿದ್ದೇನೆ: ನಟ ಧನ್ವೀರ್ - Hayagriva movie

ನಟ ಧನ್ವೀರ್ ಅಭಿನಯದ ಮುಂದಿನ ಚಿತ್ರ 'ಹಯಗ್ರೀವ'ದ ಮುಹೂರ್ತ ಇತ್ತೀಚೆಗೆ ಮೈಸೂರಿನಲ್ಲಿ ನಡೆದಿದೆ.

six-pack-for-hayagriva-movie-actor-dhanveer
'ಹಯಗ್ರೀವ' ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡುತ್ತಿದ್ದೇನೆ: ನಟ ಧನ್ವೀರ್

By ETV Bharat Karnataka Team

Published : Feb 3, 2024, 10:20 PM IST

ಕನ್ನಡ ಚಿತ್ರರಂಗದಲ್ಲಿ ಲವ್ ಸ್ಟೋರಿ ಜೊತೆಗೆ ಮಾಸ್ ಸಿನಿಮಾಗಳ ಮೂಲಕ ತನ್ನದೇ ಬೇಡಿಕೆ ಹೊಂದಿರುವ ನಟ ಧನ್ವೀರ್. 'ಕೈವ' ಚಿತ್ರದಲ್ಲಿ ಮಾಸ್ ಲುಕ್​ನಿಂದ ಕನ್ನಡಿಗರನ್ನು ರಂಜಿಸಿದ 'ಬಜಾರ್' ಹುಡುಗ ಈಗ 'ಹಯಗ್ರೀವ' ಅವತಾರ ತಾಳಿದ್ದಾರೆ.

ಹಯಗ್ರೀವ

ಹೌದು, ಧನ್ವೀರ್ ಅಭಿನಯಿಸುತ್ತಿರುವ ಹೊಸ ಚಿತ್ರವಿದು. 'ಹಯಗ್ರೀವ' ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮೈಸೂರಿನ ನಾಡದೇವತೆ ಶ್ರೀಚಾಮುಂಡೇಶ್ವರಿ ಸನ್ನಿಧಿಯಲ್ಲಿ ನೆರವೇರಿತು. ಇದರ ಜೊತೆಗೆ ಫಸ್ಟ್ ಲುಕ್ ಮೋಷನ್ ಪೋಸ್ಟರ್​ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದ್ದು, ಜನಮೆಚ್ಚುಗೆ ಪಡೆದಿದೆ.

ಹಯಗ್ರೀವ ಚಿತ್ರ ತಂಡ

ಸಿನಿಮಾ ಕುರಿತು ಮಾತನಾಡಿದ ನಿರ್ದೇಶಕ ರಘುಕುಮಾರ್, ''ನಿರ್ಮಾಪಕರು ಫೋನ್‍ ಮಾಡಿ ಸಿನಿಮಾ ಮಾಡಿಕೊಡಿ ಎಂದರು. ನನ್ನ ಹತ್ತಿರ ಒಂದು ಕಥೆ ಇತ್ತು. ಅದನ್ನು ಅವರಿಗೆ ಹೇಳಿದಾಗ, ಇಷ್ಟಪಟ್ಟು ಚಿತ್ರ ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಚಿತ್ರದಲ್ಲಿ ಮುಖ್ಯವಾಗಿ ಪೌರಾಣಿಕ ಅಂಶಗಳ ಜೊತೆಗೆ ಕ್ರೈಂ ಇದೆ. ಲವ್, ಸೆಂಟಿಮೆಂಟ್, ಸಸ್ಪೆನ್ಸ್ ಸೇರಿದಂತೆ ಕಮರ್ಷಿಯಲ್ ಕಥೆಗೆ ಬೇಕಾದ ಎಲ್ಲಾ ಅಂಶಗಳಿವೆ. ಕನ್ನಡದಲ್ಲಿ ಇದುವರೆಗೂ ಯಾರೂ ಈ ತರಹದ ಪ್ರಯತ್ನ ಮಾಡಿಲ್ಲ ಎಂಬುದು ನನ್ನ ಅನಿಸಿಕೆ'' ಎಂದರು.

''ಹಯಗ್ರೀವ ಎಂಬ ಪೌರಾಣಿಕ ಪಾತ್ರದ ಸುತ್ತ ಚಿತ್ರ ಸುತ್ತುತ್ತದೆ. ಬೆಂಗಳೂರಿನಲ್ಲಿ ಇಡೀ ಚಿತ್ರದ ಚಿತ್ರೀಕರಣ ನಡೆಯಲಿದೆ. ಧನ್ವೀರ್ ಜೊತೆ ಸಂಜನಾ ಆನಂದ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಮತ್ತೊಬ್ಬ ನಾಯಕ ನಟಿಸುತ್ತಿದ್ದು, ಅವರು ಯಾರು ಎಂಬುದನ್ನು ಬಿಡುಗಡೆಯವರೆಗೂ ಗೌಪ್ಯವಾಗಿಡಲಾಗುವುದು. ಒಂದೊಳ್ಳೆಯ ಕಥೆಗೆ ಪೂರಕವಾಗಿ ಶೀರ್ಷಿಕೆ ಸಿಕ್ಕಿದೆ. ಎಲ್ಲರೂ ಒಪ್ಪುತ್ತಾರೆ ಎಂಬ ನಂಬಿಕೆ ಇದೆ'' ಎಂದು ತಿಳಿಸಿದರು.

ಹಯಗ್ರೀವ ಚಿತ್ರ ತಂಡ

ನಟ ಧನ್ವೀರ್ ಗೌಡ ಮಾತನಾಡಿ, ''ಇದು ನನ್ನ 5ನೇ ಚಿತ್ರ, ಒಳ್ಳೆಯ ತಂಡ ಮತ್ತು ಶೀರ್ಷಿಕೆ ಸಿಕ್ಕಿದೆ. ಬಹಳ ದಿನಗಳಿಂದ ಪ್ಲಾನ್‍ ಮಾಡಿ, ಒಂದೊಳ್ಳೆಯ ಕಥೆ ಮಾಡಿದ್ದೇವೆ. ಅಭಿಮಾನಿಗಳಿಗೆ ಖುಷಿಯಾಗುವಂತಹ ಕಥೆ ಇದಾಗಿದೆ. ನೀಗ್ರೋಗಳ ಜೊತೆಗೆ ಫೈಟ್‍ ಕೂಡ ಇದೆ. 'ಬಜಾರ್' ನಂತರ ಸಿಕ್ಸ್ ಪ್ಯಾಕ್ ‍ಮಾಡಿಕೊಳ್ಳುತ್ತಿದ್ದೇನೆ. ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ಕಥೆ ಮತ್ತು ಪಾತ್ರ ವಿಭಿನ್ನವಾಗಿದೆ'' ಎಂದರು. ಇದೇ ವೇಳೆ ಮಾತನಾಡಿದ ನಾಯಕಿ ಸಂಜನಾ ಆನಂದ್, ''ತಮ್ಮ ಪಾತ್ರ ಕೂಡ ಚೆನ್ನಾಗಿದೆ'' ಎಂದು ಹೇಳಿದರು.

ಹಯಗ್ರೀವ ಚಿತ್ರ ತಂಡ

ನಿರ್ಮಾಪಕ ಸಮೃದ್ಧಿ ಮಂಜುನಾಥ್ ಮಾತನಾಡಿ, ''ಹಯಗ್ರೀವ ನಮ್ಮ ಕೆವಿಸಿ ಪ್ರೊಡಕ್ಷನ್ಸ್‌ ಬ್ಯಾನರ್​​​ನಲ್ಲಿ ನಿರ್ಮಾಣವಾಗುತ್ತಿರುವ ಮೂರನೆಯ ಚಿತ್ರ. ನಾನು ಯೂಟ್ಯೂಬ್‍ನಲ್ಲಿ 'ದಿ ಬೆಲ್‍' ಎಂಬ ಕಿರುಚಿತ್ರ ನೋಡಿದೆ. ಆ ಕಿರುಚಿತ್ರ ಬಹಳ ಖುಷಿ ನೀಡಿತು. ಆ ಕಿರುಚಿತ್ರದ ನಿರ್ದೇಶಕ ರಘುಕುಮಾರ್ ಅವರನ್ನು ಎಂಟು ತಿಂಗಳ ಹಿಂದೆ ಕರೆಸಿ ಮಾತನಾಡಿದೆ. ಒಂದು ಚಿತ್ರ ಮಾಡಿಕೊಡಿ ಎಂದು ಹೇಳಿದೆ. ಅವರು ತಮ್ಮ ತಂಡದೊಂದಿಗೆ ಒಂದೊಳ್ಳೆಯ ಕಥೆ ಮಾಡಿದ್ದಾರೆ. ಇದೊಂದು ಪಕ್ಕಾ ಕಮರ್ಷಿಯಲ್‍ ಚಿತ್ರ'' ಎಂದರು.

ಚಿತ್ರದಲ್ಲಿ ರಂಗಾಯಣ ರಘು, ತಾರಾ, ಸಾಧು ಕೋಕಿಲ, ರವಿಶಂಕರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಮೂರು ಹಾಡುಗಳಿದ್ದು, ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸುತ್ತಿದ್ದಾರೆ.‌ ಕಾರ್ತಿಕ್, ಛಾಯಾಗ್ರಹಣ ಹಾಗೂ ಉಮೇಶ್ ಅವರ ಸಂಕಲನವಿದೆ. ಶೈಲೇಶ್ ರಾಜ್ ಹಾಗೂ ಚೇತನ್ ಸಿದ್ ಸಂಭಾಷಣೆ ಬರೆದಿದ್ದು, ರಘುಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ:'ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದರು': ಕರಾಳ ದಿನಗಳನ್ನು ನೆನಪಿಸಿಕೊಂಡ ಖ್ಯಾತ ನಟಿ

ABOUT THE AUTHOR

...view details