ಹೈದರಾಬಾದ್:ಇಂದು 48ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರಿಗೆ ಸಹೋದರಿ ಶ್ವೇತಾ ಬಚ್ಚನ್ ನಂದಾ ಮತ್ತು ಇವರ ಪುತ್ರಿ ನವ್ಯಾ ನವೇಲಿ ನಂದಾ ಶುಭ ಹಾರೈಸಿದ್ದಾರೆ. ಈ ವಿಶೇಷ ದಿನದ ನಿಮಿತ್ತ ಅವರು ಕೆಲವು ಹಳೆಯ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಲಾಲಿಪಾಪ್ ತಿನ್ನುತ್ತಿರುವ ಬಾಲ್ಯದ ಮುದ್ದಾದ ಫೋಟೋವನ್ನು ಶೇರ್ ಮಾಡಿಕೊಂಡಿರುವ ಶ್ವೇತಾ ಬಚ್ಚನ್, ಪ್ರೀತಿಯ ಸಹೋದರನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಶೀರ್ಷಿಕೆ ಬರೆದಿದ್ದಾರೆ.
ಅವರ ಪುತ್ರಿ ನವ್ಯಾ ನವೇಲಿ ನಂದಾ 'ಎಲ್ಲರ ನೆಚ್ಚಿನ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಅವರು ಸಹ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವರಷ್ಟೇ ಅಲ್ಲದೇ ಸಿನಿಮಾ ತಾರೆಯರು ಕೂಡ ಶುಭಾಶಯ ಕೋರಿದ್ದಾರೆ. ಅಭಿಮಾನಿಗಳು ಮತ್ತು ನೆಟಿಜನ್ಗಳು ಅಭಿಷೇಕ್ ಬಚ್ಚನ್ ಅವರಿಗೆ ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.
1976 ರಲ್ಲಿ ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ದಂಪತಿಯ ಪುತ್ರರಾಗಿ ಜನಿಸಿದ ಅಭಿಷೇಕ್ ಬಚ್ಚನ್, ಸಿನಿಮಾ ರಂಗದಲ್ಲಿ ತಮ್ಮದೇ ಆದ ವರ್ಚಸ್ಸು ಇಟ್ಟುಕೊಂಡವರು. 2000ರಲ್ಲಿ ತೆರೆ ಕಂಡ 'ರೆಫ್ಯೂಜಿ' ಚಿತ್ರದ ಮೂಲಕ ಬಣ್ಣ ಹಚ್ಚಿದ ಅಭಿಷೇಕ್, ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. 2004 ರಲ್ಲಿ ತೆರೆಕಂಡ ಆ್ಯಕ್ಷನ್ ಚಿತ್ರ 'ಧೂಮ್' ಅವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿತು. ಬಳಿಕ ಯುವ (2004), ಸರ್ಕಾರ್ (2005), ಬಂಟಿ ಔರ್ ಬಬ್ಲಿ (2005), ಕಭಿ ಅಲ್ವಿದಾ ನಾ ಕೆಹನಾ (2006), ಗುರು (2007), ದೋಸ್ತಾನಾ (2008), ಬೋಲ್ ಬಚ್ಚನ್ (2012), ಹ್ಯಾಪಿ ನ್ಯೂ ಇಯರ್ (2014) ಹೌಸ್‌ಫುಲ್ 3 ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಸೈ ಸನ್ನಿಸಿಕೊಂಡರು. ಅಭಿನಯಕ್ಕೆ ಅತ್ಯುತ್ತಮ ಪೋಷಕ ನಟ ಸೇರಿದಂತೆ ಹಲವು ಫಿಲ್ಮ್‌ಫೇರ್ ಪ್ರಶಸ್ತಿಗಳು ಅವರಿಗೆ ಲಭಿಸಿವೆ. ಅವರ ನಟನೆಯ 'ಘೂಮರ್' ಇತ್ತೀಚೆಗೆ ತೆರೆ ಕಂಡಿದೆ. ಚಿತ್ರದಲ್ಲಿ ಮಾಜಿ ಕ್ರಿಕೆಟಿಗನಾಗಿ ಸೈಯಾಮಿ ಖೇರ್ ಪಾತ್ರಕ್ಕೆ ತರಬೇತುದಾರನಾಗಿ ನಟಿಸಿದ್ದರು.
ಸದ್ಯ ಅಭಿಷೇಕ್ ಬಚ್ಚನ್ ಅವರು ಶೂಜಿತ್ ಸಿರ್ಕಾರ್ ಅವರ ಮುಂದಿನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನುರಾಗ್ ಕಶ್ಯಪ್ ಅವರು ಹೆಲ್ಮ್ ಮಾಡಿರುವ ಬಹು ನಿರೀಕ್ಷಿತ ಗುಲಾಬ್ ಜಾಮೂನ್ (2024) ನಲ್ಲಿಯೂ ಬಚ್ಚನ್ ಕಾಣಿಸಿಕೊಳ್ಳಲಿದ್ದಾರೆ. ಇದರ ಹೊರತಾಗಿ, ಡೈನಾಮಿಕ್ ಮತ್ತು ಆ್ಯಕ್ಷನ್ ಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕ ಮನೀಶ್ ಶರ್ಮಾ ಅವರ ನಿರ್ದೇಶನದ ದೂಮ್ ಚಿತ್ರದ ಮುಂದುವರೆದ ಭಾಗದ ಚಿತ್ರಕ್ಕೆ ಅಭಿಷೇಕ್ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಗ್ರ್ಯಾಮಿ ಪ್ರಶಸ್ತಿ 2024: ಸಂಗೀತ ಲೋಕದಲ್ಲಿ ಪ್ರಶಸ್ತಿ ಗೆದ್ದ ವಿಜೇತರ ಪಟ್ಟಿ ಇಲ್ಲಿದೆ