ಕನ್ನಡ ಚಿತ್ರರಂಗಲ್ಲಿ ಸಖತ್ ಬ್ಯುಸಿಯಾಗಿರುವ ನಟ ಎಂದರೆ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್. ಇತ್ತೀಚೆಗಷ್ಟೇ 'ಭೈರತಿ ರಣಗಲ್' ಚಿತ್ರದ ಚಿತ್ರೀಕರಣ ಮುಗಿಸಿರೋ ಹ್ಯಾಟ್ರಿಕ್ ಹೀರೋ ಹೈ ಬಜೆಟ್ನ 'ಭೈರವನ ಕೊನೆ ಪಾಠ' ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿರೋದು ನಿಮಗೆ ಗೊತ್ತಿರುವ ವಿಚಾರ. ಟೈಟಲ್ ಮೂಲಕವೇ ಕುತೂಹಲ ಹೆಚ್ಚಿಸಿರುವ ಚಿತ್ರ, ಇದೀಗ ತನ್ನ ಫಸ್ಟ್ ಲುಕ್ ಅನಾವರಣಗೊಳಿಸಿದೆ. ಶಿವಣ್ಣನ ಜನ್ಮದಿನದ ವಿಶೇಷವಾಗಿ ಎರಡು ದಿನ ಮುಂಚಿತವಾಗಿಯೇ ನಿರ್ದೇಶಕ ಹೇಮಂತ್ ಎಂ ರಾವ್ ಸೇರಿ ಇಡೀ ಚಿತ್ರತಂಡ 'ಭೈರವನ ಕೊನೆ ಪಾಠ'ದ ಫಸ್ಟ್ ಲುಕ್ ಉಡುಗೊರೆಯಾಗಿ ನೀಡಿದೆ.
ಸಿನಿಮಾದ ಫಸ್ಟ್ ಲುಕ್ ಖಡಕ್ ಆಗಿದ್ದು, ಹಿಂದೆಂದೂ ನೀವು ನೋಡಿರದ ಅವತಾರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಎರಡು ಪೋಸ್ಟರ್ಗಳಲ್ಲಿ ವಿಭಿನ್ನ ನೋಟದ ಮೂಲಕ ಮಾಸ್ ಲೀಡರ್ ಪ್ರತ್ಯಕ್ಷರಾಗಿದ್ದಾರೆ. ಗಡ್ಡ ಹಾಗೂ ಮೀಸೆ ಬೆಳ್ಳಗಾಗಿದೆ. ಯುದ್ಧಕ್ಕೆ ಸಜ್ಜಾದ ಪೋಷಾಕು, ಬೆನ್ನಿಗೆ ಬಾಣಗಳನ್ನು ಇಟ್ಟುಕೊಂಡಿದ್ದಾರೆ. ಹಿಂಭಾಗದಲ್ಲಿ ಕುದುರೆ ಇದೆ. ಭೈರವನ ಕೊನೆ ಪಾಠ ಎಂಬುದರ ಜೊತೆಗೆ ರಾಜನಿಗೆ ಪಾಠಗಳು ಎಂದು ಇಂಗ್ಲಿಷ್ನಲ್ಲಿ ಬರೆಯಲಾಗಿದೆ. ಪೋಸ್ಟರ್ನಲ್ಲಿ ಹಂಪಿಯ ಕಮಲ ಮಹಲ್ ಕೂಡ ಇರುವುದು ಸಿನಿಮಾ ಮೇಲಿನ ಕುತೂಹಲ, ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.
ತಮ್ಮ ಮುಂದಿನ ಚಿತ್ರದ ಬಗ್ಗೆ ಮಾತನಾಡಿದ ಡಾ.ಶಿವರಾಜ್‌ಕುಮಾರ್, "ಅಪ್ಪಾಜಿ, ಈ ರೀತಿಯ ಪಾತ್ರಗಳನ್ನು ನಿಭಾಯಿಸುವುದರಲ್ಲಿ ಹೆಸರುವಾಸಿಯಾಗಿದ್ದರು. ಭೈರವನ ಪಾತ್ರದಲ್ಲಿ ನಟಿಸುತ್ತಿರುವುದಕ್ಕೆ ನನಗೆ ಅತೀವ ಸಂತೋಷವಾಗಿದೆ. ಹೇಮಂತ್ ಎಂ ರಾವ್ ಮತ್ತು ತಂಡದೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ" ಎಂದಿದ್ದಾರೆ.
ನಿರ್ದೇಶಕ ಹೇಮಂತ್ ಎಂ ರಾವ್ ಮಾತನಾಡಿ, ''ಭೈರವನ ಕೊನೆ ಪಾಠ ನನ್ನ ಮಹತ್ವಾಕಾಂಕ್ಷೆಯ ಚಿತ್ರ. ಸೂಪರ್ ಸ್ಟಾರ್ ಓರ್ವರ ಸಿನಿಮಾವನ್ನು ನಿರ್ದೇಶಿಸುವ ಜವಾಬ್ದಾರಿ ಸವಾಲೇ ಸರಿ. ಶಿವಣ್ಣನ ಜೊತೆ ಕೆಲಸ ಮಾಡಬೇಕೆಂಬುದು ಪ್ರತಿಯೊಬ್ಬ ನಿರ್ದೇಶಕರ ಆಸೆ. ಇಡೀ ದಿನ ಬೆಟ್ಟದ ಮೇಲೆ ಫೋಟೋಶೂಟ್ ನಡೆದಿದೆ. ಇದು ಕೆಲ ಶತಮಾನಗಳ ಹಿಂದಿನ ಸಿನಿಮಾ" ಎಂದಿದ್ದಾರೆ.