ಹೈದರಾಬಾದ್: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬೈನ ಮನೆ ಮೇಲಿನ ಗುಂಡಿನ ದಾಳಿ ಪ್ರಕರಣ ಕುರಿತು ಅವರ ತಂದೆ ಸಲೀಂ ಖಾನ್ ಮಾತನಾಡಿದ್ದು, ತಮ್ಮ ಮಗನಿಗೆ ಬೆದರಿಕೆ ಒಡ್ಡುತ್ತಿರುವವರ ವಿರುದ್ಧ ಹರಿಹಾಯ್ದಿದ್ದಾರೆ. ಸುದ್ದಿ ಸಂಸ್ಥೆಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಹಿರಿಯ ಸ್ಕ್ರೀನ್ ರೈಟರ್, ದಾಳಿ ನಡೆಸಿದವರನ್ನು ಅನಕ್ಷರಸ್ಥರು ಎಂದು ಕರೆದಿದ್ದಾರೆ. ಜೊತೆಗೆ ತಮ್ಮ ಕುಟುಂಬವು ಇದೀಗ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸರ್ಕಾರದಿಂದ ಹೆಚ್ಚುವರಿ ಪೊಲೀಸ್ ಭದ್ರತೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
'ಈ ಅನಕ್ಷರಸ್ಥರ ಬಗ್ಗೆ ಮಾತನಾಡುವುದರಲ್ಲಿ ಏನಿದೆ. ಅವರು ಯಾವಾಗ ಬುದ್ಧಿ ಕಲಿಯುತ್ತಾರೆ' ಎಂದು ಸಲೀಂ ಪ್ರಶ್ನಿಸಿದರು. ಅಲ್ಲದೇ, ಮತ್ತಷ್ಟು ಹೆಚ್ಚಿನ ಭದ್ರತೆ ನೀಡುವಂತೆ ಒತ್ತಾಯಿಸಿದ ಅವರು, ಮುಂಬೈ ಪೊಲೀಸರು ತಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಸುರಕ್ಷಿತವಾಗಿಡುವ ಭರವಸೆಯನ್ನು ನೀಡಿದ್ದಾರೆ. ಈಗಾಗಲೇ ಇಬ್ಬರು ಆರೋಪಿಗಳನ್ನು ಅವರು ಬಂಧಿಸಿದ್ದು, ಖಂಡಿತ ಪೊಲೀಸರು ನಮಗೆ ರಕ್ಷಣೆ ಕೊಡುತ್ತಾರೆ ಎಂದರು.
ನಟ ಸಲ್ಮಾನ್ ಖಾನ್ ಅವರಿಗೆ ಅವರ ಶೆಡ್ಯೂಲ್ನಂತೆ ಕೆಲಸ ನಿರ್ವಹಿಸುವಂತೆ ಸಮಾಲೋಚನೆ ನಡೆಸಲಾಗಿದೆ. ಈ ಘಟನೆ ಕುರಿತು ಪೊಲೀಸರ ತನಿಖೆ ನಡೆಯುತ್ತಿರುವ ಹಿನ್ನೆಲೆ ಸಾರ್ವಜನಿಕವಾಗಿ ಮಾತನಾಡದಂತೆ ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆ ಗುಂಡಿನ ದಾಳಿ ನಡೆದು ಆರೋಪಿಗಳನ್ನು ವಶಕ್ಕೆ ಪಡೆದ ಬಳಿಕವೇ ಸಲೀಂ ಖಾನ್ ಮೊದಲ ಬಾರಿಗೆ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.