ಬಿಗ್ ಬಾಸ್, ಅತ್ಯಂತ ಜನಪ್ರಿಯ ಕಾರ್ಯಕ್ರಮ. ಭಾರತದ ಬಹುಭಾಷೆಗಳಲ್ಲಿ ಈ ಕಿರುತೆರೆ ಕಾರ್ಯಕ್ರಮ ಮೂಡಿಬರುತ್ತಿದೆ. ಕಾರ್ಯಕ್ರಮ ನಡೆಸಿಕೊಡುವವರೆಲ್ಲರೂ ಅತ್ಯಂತ ಜನಪ್ರಿಯರು ಅನ್ನೋದೇ ವಿಶೇಷ. ಈಗಾಗಲೇ ಕನ್ನಡದ ಬಿಗ್ ಬಾಸ್ ಶುಭಾರಂಭ ಮಾಡಿದ್ದು, ಇಂದು ವಾರಾಂತ್ಯದ ಕಾರ್ಯಕ್ರಮ ಪ್ರಸಾರ ಕಾಣಲಿದೆ. ಮತ್ತೊಂದೆಡೆ ಹಿಂದಿ ಬಿಗ್ ಬಾಸ್ ಆರಂಭಕ್ಕೆ ದಿನಗಣನೆ ಶುರುವಾಗಿದೆ.
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಬಿಗ್ ಬಾಸ್ 18ರ ನಿರೂಪಕನಾಗಿ ಮರಳಿದ್ದಾರೆ. ಕಾರ್ಯಕ್ರಮದ ಪ್ರೀಮಿಯರ್ಗೂ ಮುನ್ನ ಕಲರ್ಸ್ ಟಿವಿ ಇಂಟ್ರೆಸ್ಟಿಂಗ್ ಪ್ರೋಮೋವನ್ನು ಅನಾವರಣಗೊಳಿಸಿದೆ. ವಿಡಿಯೋದಲ್ಲಿ ಸಲ್ಮಾನ್ ಖಾನ್ ಅವರ ಪಾಸ್ಟ್ ಆ್ಯಂಡ್ ಫ್ಯೂಚರ್ ಲುಕ್ ಕಂಡುಬಂದಿದೆ. ಜೊತೆಗೆ, ಸಲ್ಮಾನ್ ಖಾನ್ ಬಹಳ ಸಿಟ್ಟಿಗೆದ್ದಂತೆ ತೋರಿದೆ.
ಪ್ರೋಮೋದಲ್ಲಿ, ಸಲ್ಲು ಎರಡು ಸ್ಕ್ರೀನ್‌ಗಳೆದುರು ನಿಂತಿದ್ದಾರೆ. ಒಂದು ಪರದೆಯಲ್ಲಿ ಅವರ ಕಿರಿಯ ಮತ್ತು ಇನ್ನೊಂದು ಪರದೆಯಲ್ಲಿ ಅವರ ಭವಿಷ್ಯದ ನೋಟವನ್ನು ಕಾಣಬಹುದಾಗಿದೆ. ಕಂಪ್ಯೂಟರ್ ಟೆಕ್ನಾಲಜಿಯಿಂದ ಇದನ್ನು ಮಾಡಲಾಗಿದೆ. ಇವೆರಡಲ್ಲದೇ ನಟ ಸ್ವತಃ ಅದೇ ಜಾಗದಲ್ಲಿ ನಿಂತು, ವರ್ತಮಾನದ ನೋಟವನ್ನು ಒದಗಿಸಿದ್ದಾರೆ.