ಸರ್ಕಾರಿ ಗೌರವಗಳೊಂದಿಗೆ ಪಂಚಭೂತಗಳಲ್ಲಿ ವಿಲೀನವಾದ ಕನ್ನಡತಿ ಅಪರ್ಣಾ (ETV Bharat) ಬೆಂಗಳೂರು:ಶ್ವಾಸಕೋಶ ಕ್ಯಾನ್ಸರ್‌ನಿಂದ ನಿಧನರಾದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಅವರ ಅಂತ್ಯಸಂಸ್ಕಾರ ಬನಶಂಕರಿ ವಿದ್ಯುತ್ ಚಿತಾಗಾರದಲ್ಲಿ ನೆರವೇರಿತು. ಕುಟುಂಬಸ್ಥರು, ಆಪ್ತರು, ಚಿತ್ರರಂಗದ ಗಣ್ಯರು ಸೇರಿ ನೂರಾರು ಜನರ ಸಮ್ಮುಖದಲ್ಲಿ ಪೊಲೀಸ್ ಗೌರವದೊಂದಿಗೆ, ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಶಾಸಕ ಮುನಿರತ್ನ ಅಂತಿಮ ದರ್ಶನ ಪಡೆದರು.
ಕೋಟ ಶ್ರೀನಿವಾಸ ಪೂಜಾರಿ ವಿಷಾದ:ಅಪರ್ಣಾ ಅವರು ಮಸಣದ ಹೂ ಚಲನಚಿತ್ರದ ಮೂಲಕ ಸಿನಿಮಾ ಕ್ಷೆತ್ರಕ್ಕೆ ಪದಾರ್ಪಣೆ ಮಾಡಿದವರು. ಅವರ ನಿಧನದ ವಿಚಾರವನ್ನು ಕೇಳಿ ತುಂಬಾ ದು:ಖವಾಗುತ್ತಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ವಿಷಾದವನ್ನು ವ್ಯಕ್ತಪಡಿಸಿದರು.
ನಮ್ಮ ಸರ್ಕಾರ ಇದ್ದಾಗ ಮುಖ್ಯಮಂತ್ರಿಗಳು ಭಾಗವಹಿಸುವ ಎಲ್ಲ ಕಾರ್ಯಕ್ರಮಗಳ ನಿರೂಪಣೆಗೆ ಬರುತ್ತಿದ್ದರು. ನಿರೂಪಣೆ, ಸ್ವರಭಾರ, ಕನ್ನಡದ ಧ್ವನಿ ಎಲ್ಲವೂ ಅದ್ಭುತ. ಅಪರ್ಣಾ ಕನ್ನಡದ ಮನೆ ಮಗಳು. ಕರಾವಳಿಯ ಕಂಬಳದ ಬಗ್ಗೆ ನಿರೂಪಣೆ ಮಾಡುವಾಗ ಕಂಬಳದ ಗುರಿಕಾರ ಪ್ರಶಸ್ತಿ ಸ್ವೀಕರಿಸಲು ಬರಬೇಕು ಎಂದು ಹೇಳಿದ್ದರು.
ಕರಾವಳಿಯ ಕಂಬಳದ ಬಗ್ಗೆ ನಿರೂಪಕಿ ಅಪರ್ಣಾ ಅವರಿಗೆ ಕಲ್ಪನೆ ಇರಲಿಲ್ಲ. ಆದರೆ ವಿಚಾರವನ್ನು ತಿಳಿದುಕೊಂಡು ನಿರೂಪಣೆ ಮಾಡುತ್ತಿದ್ದರು. ಯಾವುದೇ ಕಾರ್ಯಕ್ರಮಗಳಿಗೆ ತಮ್ಮ ನಿರೂಪಣೆಯ ಮೂಲಕ ಇಡೀ ಕಾರ್ಯಕ್ರಮಕ್ಕೆ ಮೆರುಗು ನೀಡುತ್ತಿದ್ದರು. ಅಪರ್ಣಾ ನಿಧನದಿಂದ ಕನ್ನಡದ ಧ್ವನಿಯೊಂದು ಕಳೆದು ಹೋಗಿದೆ. ಇಡೀ ಕರ್ನಾಟಕವೇ ದುಃಖದಲ್ಲಿ ಮುಳುಗಿದೆ ಎಂದು ಹೇಳಿದರು.
ಸಚಿವ ಎಂಬಿ ಪಾಟೀಲ್ ಸಂತಾಪ: ಕನ್ನಡ ಖ್ಯಾತ ನಿರೂಪಕಿ, ನಟಿ ಅಪರ್ಣಾ ಅವರ ನಿಧನಕ್ಕೆ ವಿಜಯಪುರದಲ್ಲಿ ಸಚಿವ ಎಂ ಬಿ ಪಾಟೀಲ್ ಸಂತಾಪ ವ್ಯಕ್ತಪಡಿಸಿದ್ದಾರೆ. ಅಪರ್ಣಾ ಕನ್ನಡದ ಖ್ಯಾತ ನಿರೂಪಕಿಯಾಗಿದ್ದರು. ಇದು ಅತ್ಯಂತ ದು:ಖಕರ ಸಂಗತಿ. ಕಿರಿಯ ವಯಸ್ಸಿನಲ್ಲಿ ಅವರ ಸಾವಾಗಿದೆ. ಅವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ. ದು:ಖ ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ಅಪರ್ಣಾ ಅವರ ಸ್ವಭಾವ ಉಳಿದವರಿಗೆ ದಾರಿದೀಪ ಆಗಲಿ ಎಂದು ಸಚಿವ ಎಂ.ಬಿ.ಪಾಟೀಲ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಓದಿ:ಅಪರ್ಣಾ ಅಂತಿಮ ದರ್ಶನ ಪಡೆದ ಶ್ವೇತಾ ಚೆಂಗಪ್ಪ, ಎಸ್.ನಾರಾಯಣ್, ರಮೇಶ್ ಸೇರಿ ಹಲವರು - Aparna