ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಅಭಿನಯದ ಬಹು ನಿರೀಕ್ಷಿತ ಆ್ಯಕ್ಷನ್ ಡ್ರಾಮಾ 'ಪುಷ್ಪ 2: ದಿ ರೂಲ್' ಬಹು ಭಾಷೆಗಳಲ್ಲಿ ಡಿಸೆಂಬರ್ 5ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಇನ್ನೊಂದು ವಾರದಲ್ಲಿ ಥಿಯೇಟರ್ ಪ್ರವೇಶಿಸಲಿರುವ, ಬ್ಲಾಕ್‌ಬಸ್ಟರ್ 'ಪುಷ್ಪ: ದಿ ರೈಸ್'ನ ಸೀಕ್ವೆಲ್ ಪ್ರಚಾರ ಜೋರಾಗೇ ನಡೆಯುತ್ತಿದೆ. ಪ್ರಮೋಶನ್ ಸಲುವಾಗಿ ಚಿತ್ರತಂಡ ಭಾರತದಾದ್ಯಂತ ಪ್ರಯಾಣಿಸುತ್ತಿದೆ.
ಪಟ್ನಾದಲ್ಲಿ ಅದ್ಧೂರಿ ಟ್ರೇಲರ್ ಬಿಡುಗಡೆ ಮತ್ತು ಚೆನ್ನೈನಲ್ಲಿ ಪ್ರೀ-ರಿಲೀಸ್ ಈವೆಂಟ್ ನಂತರ, ಪುಷ್ಪ 2 ಚಿತ್ರತಂಡ ನವೆಂಬರ್ 27 ರಂದು ಅಂದರೆ ನಿನ್ನೆ ಕೊಚ್ಚಿಯಲ್ಲಿ ಪ್ರೇಕ್ಷಕರ ಗಮನ ಸೆಳೆದಿದೆ. ಸುಕುಮಾರ್ ನಿರ್ದೇಶನದ ಈ ಚಿತ್ರ ಮೂರು ವರ್ಷಗಳಿಂದ ಕೆಲಸದಲ್ಲಿತ್ತು. ನವೆಂಬರ್ 26ರಂದು ತನ್ನೆಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿಕೊಂಡಿತು. ಸದ್ಯ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿದ್ದು, ಪ್ರಚಾರ ಜೋರಾಗೇ ನಡೆಯುತ್ತಿದೆ.
ಶ್ರೀವಲ್ಲಿ ಡ್ಯಾನ್ಸ್: ಈವೆಂಟ್‌ನಲ್ಲಿ ರಶ್ಮಿಕಾ ಮಂದಣ್ಣ "ಶ್ರೀವಲ್ಲಿ" ಮತ್ತು "ಸಾಮಿ ಸಾಮಿ" ಹಾಡುಗಳಿಗೆ ಮಸ್ತ್ ಡ್ಯಾನ್ಸ್ ಮಾಡೋ ಮೂಲಕ ಅಭಿಮಾನಿಗಳನ್ನು, ಪ್ರೇಕ್ಷಕರನ್ನು ಮನರಂಜಿಸಿದರು.
ರಶ್ಮಿಕಾರನ್ನು ಹಾಡಿ ಹೊಗಳಿದ ಅಲ್ಲು ಅರ್ಜುನ್: ನಿನ್ನೆಯ ಈವೆಂಟ್‌ನಲ್ಲಿ ಮಾತನಾಡಿದ ಅಲ್ಲು ಅರ್ಜುನ್, ಪುಷ್ಪ 2ರಲ್ಲಿ ಶ್ರೀವಲ್ಲಿ ಪಾತ್ರ ಪುನರಾವರ್ತಿಸಿದ ರಶ್ಮಿಕಾ ಮಂದಣ್ಣ ಅವರನ್ನು ಶ್ಲಾಘಿಸಿದರು. ನಟಿಯನ್ನು ತಮ್ಮ "ಮನೆ" ಎಂದು ಉಲ್ಲೇಖಿಸಿದ ನಟ, "ನನ್ನ ಸ್ವಂತ ಶ್ರೀವಲ್ಲಿ, ರಶ್ಮಿಕಾ, ಈ ಬಾರಿ ಇಡೀ ದೇಶವನ್ನು ಸೆಳೆಯುತ್ತಾರೆ. ಎಲ್ಲರೂ ಮತ್ತೊಮ್ಮೆ ಅವರತ್ತ ಆಕರ್ಷಿತರಾಗುತ್ತಾರೆ. ಸೆಟ್ನಲ್ಲಿ ನಾನು ನೋಡುತ್ತಿರುವ, ನನ್ನೊಂದಿಗೆ ಕೆಲಸ ಮಾಡುತ್ತಿರುವ ಏಕೈಕ ಹೀರೋಯಿನ್ ನೀವು. ನಿಮ್ಮೊಂದಿಗೆ ಕೆಲಸ ಮಾಡುವುದು ತುಂಬಾನೇ ಕಂಫರ್ಟಬಲ್ ಫೀಲ್ ಕೊಡುತ್ತದೆ. ನೀವು ನನ್ನ 'ಮನೆ'ಯಾಗಿದ್ದೀರಿ. ನಿಮ್ಮ ಬೆಂಬಲವಿಲ್ಲದೇ ನಾನು ನಟಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹಾಡಿ ಹೊಗಳಿದ್ದಾರೆ.