ಕನ್ನಡ ಕಿರುತೆರೆಯಿಂದ ಬಣ್ಣದ ಪಯಣ ಆರಂಭಿಸಿ ಸದ್ಯ ಸ್ಯಾಂಡಲ್ವುಡ್ ಸಿಲ್ವರ್ ಸ್ಕ್ರೀನ್ನಲ್ಲಿ ರಾಣಿಯಾಗಿರುವ ನಟಿ ಅಂದ್ರೆ ಅದು ರಚಿತಾ ರಾಮ್. ಗ್ಲ್ಯಾಮರ್ ಜೊತೆಗೆ ಅಮೋಘ ಅಭಿನಯದಿಂದ ಕನ್ನಡಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಡಿಂಪಲ್ ಕ್ವೀನ್. ಪುನೀತ್ ರಾಜ್ಕುಮಾರ್, ದರ್ಶನ್, ಸುದೀಪ್, ಧ್ರುವ ಸರ್ಜಾರಂತಹ ಸ್ಟಾರ್ ನಟರೂ ಸೇರಿದಂತೆ ಹೊಸ ಪ್ರತಿಭೆಗಳ ಚಿತ್ರಗಳಲ್ಲಿ ಅಭಿನಯಿಸಿರುವ ರಚಿತಾ ರಾಮ್ ಗುರುವಾರ ಹುಟ್ಟುಹಬ್ಬ ಆಚರಿಸಿಕೊಂಡರು.
ಅಕ್ಟೋಬರ್ 3ರಂದು ಸ್ಯಾಂಡಲ್ವುಡ್ನ ಡಿಂಪಲ್ ಕ್ವೀನ್ ಖ್ಯಾತಿಯ ಬಹುಬೇಡಿಕೆಯ ನಟಿ ರಚಿತಾ ರಾಮ್ ತಮ್ಮ 32 ಜನ್ಮದಿನ ಆಚರಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ನಿಮ್ಮೊಂದಿಗೆ ನನ್ನ ಈ ವಿಶೇಷ ದಿನವನ್ನು ಆಚರಿಸಲು ಸಾಧ್ಯವಾಗುತ್ತಿಲ್ಲ ಎಂದು ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದರು. ಅಕ್ಟೋಬರ್ 3ರಂದು ನಾನು ಮನೆಯಲ್ಲಿ ಇರೋದಿಲ್ಲ, ಈ ಬಾರಿ ನಿಮ್ಮ ಜೊತೆ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲಾಗುತ್ತಿಲ್ಲವೆಂದು ತಿಳಿಸಿದ್ದ ನಟಿ ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ 'ಕಲ್ಟ್' ಶೂಟಿಂಗ್ ಸೆಟ್ನಲ್ಲಿ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಚಿತ್ರೀಕರಣ, ಟೈಟ್ ಶೂಟಿಂಗ್ ಶೆಡ್ಯೂಲ್ ಹಿನ್ನೆಲೆಯಲ್ಲಿ ಈ ಬಾರಿ ನಟಿಗೆ ಅಭಿಮಾನಿಗಳೊಂದಿಗ ಹುಟ್ಟುಹಬ್ಬಾಚರಿಸಲು ಸಾಧ್ಯವಾಗಿಲ್ಲ.
ಮಂಗಳವಾರ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದ ನಟಿ: ''ಎಲ್ಲರಿಗೂ ನಮಸ್ಕಾರ. ಎಲ್ಲರೂ ಚೆನ್ನಾಗಿದ್ದೀರಿ ಎಂದು ಭಾವಿಸುತ್ತಾ, ಈ ಬಾರಿ ಶೂಟಿಂಗ್ ಇರುವುದರಿಂದ ನನ್ನ ಹುಟ್ಟುಹಬ್ಬ ಆಚರಣೆಯನ್ನು ನಾನು ಮಾಡಿಕೊಳ್ಳುತ್ತಿಲ್ಲ ಎಂದು ಹೇಳಲು ಇಚ್ಚಿಸುತ್ತೇನೆ. ಎಲ್ಲರಿಗೂ ಕ್ಷಮೆಯಾಚಿಸುತ್ತಾ, ಎಂದಿನಂತೆ ಪ್ರತೀ ಭಾನುವಾರ ಚಿತ್ರೀಕರಣ ಮುಗಿಸಿ ಬಂದ ನಂತರ ಸಿಗುತ್ತೇನೆ. ನಿಮ್ಮ ಪ್ರೀತಿಯ ರಚ್ಚು'' - ನಟಿ ರಚಿತಾ ರಾಮ್ ಪೋಸ್ಟ್.
ರಾಜಕಾರಣಿ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಅವರು 'ಬನಾರಸ್' ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ್ದಾರೆ. 'ಕಲ್ಟ್' ನಟನ ಎರಡನೇ ಚಿತ್ರ. ಉಪಾಧ್ಯಕ್ಷ ಸಿನಿಮಾ ಖ್ಯಾತಿಯ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ 'ಕಲ್ಟ್' ಸಿನಿಮಾದ ಶೂಟಿಂಗ್ ಉಡುಪಿಯಲ್ಲಿ ಬಿರುಸಿನಿಂದ ಸಾಗಿದೆ. ರಚಿತಾ ರಾಮ್ ಕೂಡಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ರಚಿತಾ ರಾಮ್ ಅವರ ಕೈಯಲ್ಲಿ ಕೇಕ್ ಕಟ್ ಮಾಡಿಸುವ ಮೂಲಕ ಬರ್ತ್ಡೇ ಸೆಲೆಬ್ರೇಶನ್ ಮಾಡಿದ್ದಾರೆ. 32ನೇ ವಸಂತಕ್ಕೆ ಕಾಲಿಟ್ಟಿರುವ ರಚಿತಾ, ಕಲ್ಟ್ ಚಿತ್ರತಂಡದ ಸರ್ ಪ್ರೈಸ್ಗೆ ಫುಲ್ ಖುಷ್ ಆಗಿದ್ದಾರೆ.