ಹೈದರಾಬಾದ್: 'ಗರುಡ ಗಮನ ರಿಷಭ ವಾಹನ', 'ಟೋಬಿ' ಮತ್ತು ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ ಅವರೊಂದಿಗೆ ಮುಂದಿನ 'ಬಾಜೂಕಾ'ದಂತಹ ಚಿತ್ರಗಳಲ್ಲಿ ಕೆಲಸ ಮಾಡುವ ಮೂಲಕ ಹೆಸರುವಾಸಿಯಾಗಿರುವ ಸಂಗೀತ ನಿರ್ದೇಶಕ ಮಿಧುನ್ ಮುಕುಂದನ್, ಈಟಿವಿ ಭಾರತ್‌ಗೆ ನೀಡಿದ ಸಂದರ್ಶನದಲ್ಲಿ ಲೆಜೆಂಡರಿ ಎಸ್‌ಪಿ ಬಾಲಸುಬ್ರಹ್ಮಣ್ಯಂ (ಎಸ್‌ಪಿಬಿ) ಅವರೊಂದಿಗಿನ ಕ್ಷಣಗಳನ್ನು ಸ್ಮರಿಸಿದರು. ಸಂಗೀತ ಲೋಕ ಇಂದು ಎಸ್‌ಪಿಬಿ ಅವರ ನಾಲ್ಕನೇ ಪುಣ್ಯಸ್ಮರಣೆಯಲ್ಲಿದೆ. ಅಪ್ರತಿಮ ಗಾಯಕನ ಕೊನೆಯ ಕನ್ನಡ ಹಾಡನ್ನು ತಮ್ಮ ನಿರ್ದೇಶನದಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದು ಮಿಧುನ್ ಮುಕುಂದನ್ ಮಾಹಿತಿ ಹಂಚಿಕೊಂಡಿದ್ದಾರೆ.
ಸಂದರ್ಶನದ ಸಂದರ್ಭ, ಎಸ್‌ಪಿಬಿ ಅವರ ನಿಧನವನ್ನು ಇನ್ನೂ ನಂಬಲಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಎಸ್‌ಪಿ ಬಾಲಸುಬ್ರಹ್ಮಣ್ಯಂ ಜೊತೆ ಕೆಲಸ ಮಾಡೋದು ನನ್ನ ಮತ್ತು ಕನ್ನಡದ ಸೂಪರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕನಸ್ಸಾಗಿತ್ತು ಎಂದು ಹೇಳಿಕೊಂಡಿದ್ದಾರೆ.
ಮುಕುಂದನ್, ಪುನೀತ್ ರಾಜ್‌ಕುಮಾರ್ ಅವರ ಮಾಯಾ ಬಜಾರ್ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದ್ದ ಸಂದರ್ಭ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಿಂದ ಹಾಡೊಂದನ್ನು ಹಾಡಿಸುವ ಬಗ್ಗೆ ಚರ್ಚೆ ನಡೆಸಿದ್ದರು. ಇಂಟ್ರೋ ಡ್ಯಾನ್ಸ್ ಸಾಂಗ್ ಬಗ್ಗೆ ಮಾತುಕತೆ ನಡೆಸಿದ್ದರು. ಈ ಹಾಡು ಎಸ್‌ಪಿಬಿ ಕಂಠಸಿರಿಯಲ್ಲಿ ಮೂಡಿಬರಬೇಕೆಂದು ಆಶಿಸಿದ್ದರು. ಈ ವಿಚಾರದಿಂದ ಅಪ್ಪು ಸಕತ್ ಥ್ರಿಲ್ ಆಗಿದ್ದರು. ಎಸ್‌ಪಿಬಿ ಅವರನ್ನು ಬಹುಕಾಲದಿಂದ ಮೆಚ್ಚಿಕೊಂಡಿದ್ದ ಪುನೀತ್ ರಾಜ್‌ಕುಮಾರ್, ಅವರೊಂದಿಗೆ ಕೆಲಸ ಮಾಡುವ ಕನಸು ಕಂಡಿದ್ದರು.
ಎಸ್‌ಪಿಬಿ ಅವರ ಮ್ಯಾನೇಜರ್ ಅನ್ನು ಸಂಪರ್ಕಿಸಿದ ನಂತರ, ಪ್ರಸಿದ್ಧ ಗಾಯಕರು ತಮ್ಮ ಕಂಠದಾನ ಮಾಡಲು ಒಪ್ಪಿಕೊಂಡಿದ್ದಾರೆ ಎಂಬುದನ್ನು ತಿಳಿದು ಮುಕುಂದನ್ ಬಹಳ ಉತ್ಸುಕರಾದರು. 'ಮಾಯಾ ಬಜಾರ್'ನ ಹಾಡನ್ನು ಹೈದರಾಬಾದ್‌ನ ಎಸ್‌ಪಿಬಿ ಅವರ ಸ್ಟುಡಿಯೋದಲ್ಲಿ ಆನ್‌ಲೈನ್ ವ್ಯವಸ್ಥೆಯ ಮೂಲಕ ರೆಕಾರ್ಡ್ ಮಾಡಲಾಗಿದೆ. ಎಸ್ಪಿಬಿಯ ಧ್ವನಿ (ಎಡಿಟ್ ಮಾಡದ ದನಿ) ಕೇಳಿ ಮಿಧುನ್ ಮೂಕವಿಷ್ಮಿತರಾಗಿದ್ದರು.