ಹೈದರಾಬಾದ್: ಇತ್ತೀಚಿಗಷ್ಟೇ ಕೃತಿ ಕರಬಂಧ ಜೊತೆ ಸಪ್ತಪದಿ ತುಳಿದಿದ್ದ ಪುಲ್ಕಿತ್ ಸಮ್ರಾಟ್ ಮೊದಲ ಬಾರಿಗೆ ಹೆಂಡಿತಿಗೆ ತಮ್ಮ ಕೈ ರುಚಿ ಮಾಡಿ ಬಡಿಸಿದ್ದಾರೆ. ವಿಶೇಷ ಎಂದರೆ, ಮದುವೆ ಆದ ಆರಂಭದಲ್ಲಿ ಮಧುಮಗಳು ನಡೆಸುವ 'ಪೆಹ್ಲಿ ರಸೋಯಿ' (ಮೊದಲ ಅಡುಗೆ) ಯಲ್ಲಿ ಪುಲ್ಕಿಟ್ ಅಡುಗೆ ಮಾಡಿ ಗಮನ ಸೆಳೆದಿದ್ದಾರೆ. ಪುಲ್ಕಿತ್ ಹಲ್ವಾ ತಯಾರಿಸಿದ್ದು, ಈ ಕುರಿತು ಫೋಟೋವನ್ನು ನಟಿ ಕೃತಿ ಕರಬಂಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮಾರ್ಚ್ 15ರಂದು ಈ ಜೋಡಿ ಅದ್ದೂರಿ ವಿವಾಹವಾಗಿದ್ದರು. ಮದುವೆಯಾದ ಬಳಿಕದ ಮೊದಲ ಅಡುಗೆ ಸಾಂಪ್ರದಾಯದಲ್ಲಿ ಪುಲ್ಕಿತ್ ಖುದ್ದು ಗ್ಯಾಸ್ ಸ್ಟವ್ ಮುಂದೆ ನಿಂತು ಪ್ರೀತಿಯಿಂದ ಹಲ್ವಾ ತಯಾರಿಸಿದ್ದಾರೆ. ಪುಲ್ಕಿತ್ ಹಲ್ವಾ ತಯಾರಿಸಿರುವ ಫೋಟೋ ಮತ್ತು ಹಲ್ವಾದ ಬಟ್ಟಲನ್ನು ಕೈಯಲ್ಲಿಡಿದಿರುವ ಎರಡು ಫೋಟೋವನ್ನು ನಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ಗ್ರೀನ್ ಫ್ಲಾಗ್ ಆಲರ್ಟ್ ಎಂಬ ಅಡಿಬರಹದ ಜೊತೆಗೆ ಕೆಂಪು ಹೃದಯದ ಎಮೋಜಿಯೊಂದಿಗೆ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ನಿನ್ನೆ ದೊಡ್ಡ ಪ್ರಮುಖ ಘಟನೆ ನಡೆಯಿತು. ನಾನು ಮತ್ತೆ ಪ್ರೀತಿಯಲ್ಲಿ ಬಿದ್ದಿ. ನನಗೆ ಇದು ಸಾಧ್ಯ ಎಂದು ಗೊತ್ತಿರಲಿಲ್ಲ. ಆದರೆ, ಇದು ಸಾಧ್ಯವಾಯಿತು' ಎಂದು ತಿಳಿಸಿದ್ದಾರೆ.
'ಪುಲ್ಕಿತ್ ನ ಮೊದಲ ಅಡುಗೆ ನಿನ್ನೆ ಆಯಿತು. ನಾನು ಅಡುಗೆ ಮನೆಗೆ ಹೋದೆ. ಈ ವೇಳೆ ಆತ ಹಲ್ವಾ ಮಾಡುತ್ತಿದ್ದ. ನಾನು ಏನು ಮಾಡುತ್ತಿದ್ಯಾ ಎಂದು ಕೇಳಿದೆ. ಆತ ತುಂಬಾ ಸರಳವಾಗಿ ಹಲ್ವಾ ಮಾಡುತ್ತಿದ್ದೇನೆ ಎಂದ. ನನ್ನ ಪೆಹ್ಲಿ ರಸೋಯಿ ಇದು ಎಂದಿದ್ದಕ್ಕೆ ಆತ ನಕ್ಕು ಮೊದಲ ಅಡುಗೆ ಹುಡುಗಿಯರಿಗೇ ಮಾತ್ರವೇ ಎಂದ. ನಾವು ನಮ್ಮ ಸಂಬಂಧದಲ್ಲಿ ಜವಾಬ್ದಾರಿಗಳನ್ನು ಹಂಚಿಕೊಳ್ಳಲು ನಿರ್ಧರಿಸಿದ್ದೆವು. ನೀನು ದೆಹಲಿಗೆ ಹೋದಾಗ ನಮ್ಮ ಕುಟುಂಬಕ್ಕೆ ಅಡುಗೆ ಮಾಡು. ಬೆಂಗಳೂರಿನಲ್ಲಿ ನಾನು ನಿಮ್ಮ ಕುಟುಂಬಕ್ಕೆ ಅಡುಗೆ ಮಾಡುತ್ತೇನೆ. ಸಿಂಪಲ್' ಎಂದ ಎಂದು ವಿವರಣೆಯನ್ನು ನೀಡಿದ್ದಾರೆ.