ಮುಂಬೈ: ನಟಿ ಪ್ರಿಯಾಂಕಾ ಚೋಪ್ರಾ ಅವರು 'ಅನ್‌ಫಿನಿಶ್ಡ್' ಎಂಬ ಆತ್ಮಕಥೆ ಬರೆಯುವ ಮೂಲಕ ಲೇಖಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಈ ಪುಸ್ತಕ 'ಅಭಿ ಬಾಕಿ ಹೈ ಸಫರ್' ಎಂಬ ಹೆಸರಿನಲ್ಲಿ ಹಿಂದಿ ಆವೃತ್ತಿಯಲ್ಲೂ ಬಂದಿದ್ದು ವಿಶ್ವ ಪುಸ್ತಕ ಮೇಳ 2024ರ ಭಾಗವಾಗಿದೆ. ಈ ಬಗ್ಗೆ ಪ್ರಿಯಾಂಕಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. "ಅನ್‌ಫಿನಿಶ್ಡ್' ಹಿಂದಿ ಆವೃತ್ತಿ 'ಅಭಿ ಬಾಕಿ ಹೈ ಸಫರ್' ಈಗ ವಿಶ್ವ ಪುಸ್ತಕ ಮೇಳ 2024ರ ಭಾಗವಾಗಿದೆ" ಎಂದು ಅವರು ಬರೆದುಕೊಂಡಿದ್ದಾರೆ.
2021ರ ಜನವರಿ 19ರಂದು ಈ ಪುಸ್ತಕ ಬಿಡುಗಡೆಗೊಂಡಿದೆ. ಪೆಂಗ್ವಿನ್ ರ‍್ಯಾಂಡಮ್ ಹೌಸ್ ಪ್ರಕಟಿಸಿದೆ. ಬಾಲ್ಯದಲ್ಲಿ ತಾವು ಎದುರಿಸಿದ ಸವಾಲುಗಳು, ತಂದೆ-ತಾಯಿಯ ಪ್ರೀತಿ ಮತ್ತು ವಾತ್ಸಲ್ಯ, ಚಿತ್ರರಂಗಕ್ಕೆ ಬರಲು ಕಾರಣ ಸೇರಿದಂತೆ ಎಲ್ಲವನ್ನೂ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಈ ಆತ್ಮಚರಿತ್ರೆಯನ್ನು ಅವರು 2018ರಲ್ಲಿ ಬರೆಯಲು ಆರಂಭಿಸಿದ್ದರು. ಅನೇಕ ವರ್ಷಗಳ ಪರಿಶ್ರಮದ ಬಳಿಕ ಓದುಗರ ಇದೀಗ ಕೈಗೆ ಸಿಕ್ಕಿದೆ. ಬರೆಯುವುದಕ್ಕೂ ಮುನ್ನ ಪುಸ್ತಕದ ಬಗ್ಗೆ ಸಾಕಷ್ಟು ಬಾರಿ ನಟಿ ಹೇಳಿಕೊಂಡಿದ್ದರು.