'ಲವ್ 360' ಚಿತ್ರದ ಮೂಲಕ ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆದಿರುವ ಯುವ ನಟ ಪ್ರವೀಣ್ ಕುಮಾರ್ ಅವರೀಗ ಮತ್ತೊಂದು ಕೌಟುಂಬಿಕ ಚಿತ್ರದೊಂದಿಗೆ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ನಾಗಿರೆಡ್ಡಿ ಭಡ ಆ್ಯಕ್ಷನ್ ಕಟ್ ಹೇಳಿರುವ 'ದೇಸಾಯಿ' ಚಿತ್ರದ ಟೀಸರ್ ಇತ್ತೀಚಿಗೆ ಬಿಡುಗಡೆಯಾಗಿದೆ.
'ದೇಸಾಯಿ' ಟೀಸರ್ ರಿಲೀಸ್ ಕಾರ್ಯಕ್ರಮ:ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ್ ಸವದಿ 'ದೇಸಾಯಿ' ಟೀಸರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ಮಲ್ಲಿಕಾರ್ಜುನ ಲೋನಿ, ವಿಜಯಕುಮಾರ್ ಪಿ.ಜಿ ಸೇರಿದಂತೆ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಿನಿಮಾ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.
ಶೀಘ್ರದಲ್ಲೇ ಚಿತ್ರ ತೆರೆಗೆ: ಟೀಸರ್ ರಿಲೀಸ್ ಬಳಿಕ ಮಾತನಾಡಿದ ನಿರ್ದೇಶಕ ನಾಗಿರೆಡ್ಡಿ ಭಡ, ಅಂದುಕೊಂಡ ಹಾಗೆ ನಮ್ಮ ಚಿತ್ರ ಮೂಡಿಬಂದಿದೆ. ಅದಕ್ಕೆ ಬಹುಮುಖ್ಯ ಕಾರಣ ನಿರ್ಮಾಪಕರು ಹಾಗೂ ಚಿತ್ರತಂಡ. ಶೀಘ್ರದಲ್ಲೇ ಚಿತ್ರ ತೆರೆಗೆ ಬರಲಿದೆ. ನಮ್ಮ ಸಿನಿಮಾ ವೀಕ್ಷಿಸಿ, ಬೆಂಬಲ ನೀಡುವಂತೆ ಕೇಳಿಕೊಂಡರು.
ಕೌಟುಂಬಿಕ ಕಥಾಹಂದರ: ನಿರ್ಮಾಪಕ ಮಹಂತೇಶ ವಿ. ಚೋಳಚಗುಡ್ಡ ಮಾತನಾಡಿ, ಸಿನಿಮಾ ನಿರ್ಮಾಣ ನನ್ನ ಕನಸು. ಆ ಕನಸು ನನಸಾಗಲು ಚಿತ್ರತಂಡದ ಸಹಕಾರವೇ ಕಾರಣ. ನನ್ನ ಬೆನ್ನ ಹಿಂದೆ ನಿಂತು ಪ್ರೋತ್ಸಾಹಿಸಿದ, ಟೀಸರ್ ಬಿಡುಗಡೆ ಮಾಡಿಕೊಟ್ಟ ಲಕ್ಷ್ಮಣ್ ಸವದಿ ಅವರಿಗೆ ಧನ್ಯವಾದ. "ದೇಸಾಯಿ" ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ. ಹೆಚ್ಚಿನ ಚಿತ್ರೀಕರಣ ಬಾಗಲಕೋಟೆಯಲ್ಲಿ ನಡೆದಿದೆ. ಅಲ್ಲಿನ ಜನರ ಸಹಕಾರ ಅಪಾರ ಎಂದು ತಿಳಿಸಿದರು.