'ಪೆನ್ ಡ್ರೈವ್'. ಇದು ಕನ್ನಡ ಚಿತ್ರರಂಗದೊಂದಿಗೆ 30 ವರ್ಷಗಳ ನಂಟಿರುವ ಸೆಬಾಸ್ಟಿನ್ ಡೇವಿಡ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ವಿಭಿನ್ನ ಕಥಾಹಂದರದ ಚಿತ್ರ. ಮುಖ್ಯಪಾತ್ರದಲ್ಲಿ ಚಂದನವನದ ಕನಸಿನ ರಾಣಿ ಮಾಲಾಶ್ರೀ ಹಾಗೂ ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಹಾಗೂ ಕಿಶನ್ ಅಭಿನಯಿಸುತ್ತಿದ್ದಾರೆ.
ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಪೆನ್ಡ್ರೈವ್:ಆರ್.ಹೆಚ್.ಎಂಟರ್‌ಪ್ರೈಸಸ್ ಲಾಂಛನದಲ್ಲಿ ಎನ್.ಹನುಮಂತರಾಜು ಹಾಗೂ ಲಯನ್ ಎಸ್.ವೆಂಕಟೇಶ್ ನಿರ್ಮಾಣದ ಈ ಚಿತ್ರದ ಚಿತ್ರೀಕರಣ ಹಾಗೂ ಡಬ್ಬಿಂಗ್ ಪೂರ್ಣಗೊಂಡಿದೆ. ಸದ್ಯ ರೀರೆಕಾರ್ಡಿಂಗ್ ನಡೆಯುತ್ತಿದೆ.
ಕಳೆದ ಮೂವತ್ತು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ, ನಿರ್ದೇಶಕರಾಗಿ ಹಾಗೂ ಸ್ಟುಡಿಯೋ ಮಾಲೀಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಬಾಸ್ಟಿನ್ ಡೇವಿಡ್ ಈವರೆಗೂ 15ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಪ್ರಸ್ತುತ 'ಪೆನ್ಡ್ರೈವ್' ನಿರ್ದೇಶಿಸುತ್ತಿದ್ದಾರೆ. ಚಾಮುಂಡಿ, ದುರ್ಗಿ ಸೇರಿದಂತೆ ಮೊದಲಾದ ಆ್ಯಕ್ಷನ್ ಚಿತ್ರಗಳಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಆ್ಯಕ್ಷನ್ ಕ್ವೀನ್ ಎಂದೇ ಜನಪ್ರಿಯರಾಗಿರುವ ಮಾಲಾಶ್ರೀ ಹಾಗೂ ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ನಂತರ 'ಬೆಂಕಿ' ಅಂತಲೇ ಜನಪ್ರಿಯರಾಗಿರುವ ತನಿಷಾ ಕುಪ್ಪಂಡ ಇಬ್ಬರೂ ಪ್ರಮುಖ ಪಾತ್ರ ವಹಿಸಿದ್ದಾರೆ. ಇಬ್ಬರು ನಟಿಯರ ಸಮಾಗಮದಲ್ಲಿ ಮೂಡಿಬರುತ್ತಿರುವ ಚಿತ್ರದ ಬಗ್ಗೆ ಅಭಿಮಾನಿ ವಲಯದಲ್ಲಿ ಸಾಕಷ್ಟು ನಿರೀಕ್ಷೆ ಹಾಗೂ ಕುತೂಹಲ ಇದೆ. ಜೊತೆಗೆ 'ಬಿಗ್ ಬಾಸ್' ಖ್ಯಾತಿಯ ಕಿಶನ್ ಕೂಡ ಅಭಿನಯಿಸಿದ್ದಾರೆ.