ಮೈಸೂರು :ಪ್ರೇಕ್ಷಕರ ಕೆಲವು ತಪ್ಪು ಕಲ್ಪನೆಗಳಿಂದ ಹೊಸ ಅಲೆಯ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಜನರನ್ನು ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ವಿಷಾದ ವ್ಯಕ್ತಪಡಿಸಿದರು. ಮೈಸೂರಿನಲ್ಲಿ ನಡೆಯುತ್ತಿರುವ 'ಪರಿದೃಶ್ಯ' ಅಂತಾರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರ ಉತ್ಸವದ ಕಾರ್ಯಕ್ರಮಗಳು ಭಾನುವಾರ ಸಾಕಷ್ಟು ಚಿತ್ರಪ್ರಿಯರ ಗಮನ ಸೆಳೆದವು.
ಸ್ವರ್ಣ ಕಮಲ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರೊಂದಿಗೆ ಕನ್ನಡದ ಹೊಸ ಅಲೆಯ ಚಿತ್ರಗಳು ವಿಷಯದ ಕುರಿತು ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಹೊಸ ಅಲೆಯ ಚಿತ್ರಗಳೊಂದಿಗಿನ ತಮ್ಮ ಸುದೀರ್ಘ ಪಯಣ ಮತ್ತು ಆ ಕುರಿತ ಅಭಿಪ್ರಾಯಗಳನ್ನು ಹಂಚಿಕೊಂಡರು.
ಹೊಸ ಅಲೆಯ ಚಿತ್ರಗಳು ಮೊದಲು ಪ್ರಾರಂಭವಾಗಿದ್ದು ಕನ್ನಡದಲ್ಲಿ. ಆದರೆ ಹೊಸ ಅಲೆಯ ಸಿನಿಮಾಗಳ ಸ್ವರ್ಣ ಮಹೋತ್ಸವ ಆಚರಿಸಿದ್ದು ಕೇರಳದಲ್ಲಿ. ಕನ್ನಡ ಚಿತ್ರರಂಗದ ನಿರಾಸಕ್ತಿಯೇ ಇದಕ್ಕೆ ಕಾರಣ. ಜಾಗತಿಕ ಸಿನಿಮಾ ರಂಗಕ್ಕೆ ಕನ್ನಡ ಚಿತ್ರರಂಗದ್ದು ದೊಡ್ಡ ಕೊಡುಗೆಯಿದೆ. ಅದನ್ನು ಯಾರೂ ಗುರುತಿಸುತ್ತಿಲ್ಲ ಎನ್ನುವ ಕೊರಗು ನನ್ನಲ್ಲಿತ್ತು. ಆ ಕೊರಗನ್ನು ಪರಿದೃಶ್ಯ ಚಿತ್ರೋತ್ಸವ ನೀಗಿಸಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಸಂಸ್ಕಾರ ಹೊಸ ಅಲೆಯ ಮೊದಲ ಕನ್ನಡ ಚಿತ್ರ: ಸಮಾಜವಾದಿ ಚಿಂತನೆಯ ಮುಖಾಂತರ ಹೊಸ ಅಲೆಯ ಚಿತ್ರಗಳು ಹುಟ್ಟಿಕೊಂಡವು. ಆದರೆ ಹೊಸ ಅಲೆಯ ಚಿತ್ರಗಳನ್ನು ಅದರ ಮೇಲ್ನೋಟಕ್ಕಷ್ಟೇ ಸೀಮಿತವಾಗಿಸಿ ವಿಶ್ಲೇಷಿಸುವ ಮುಖಾಂತರ ತಪ್ಪು ವ್ಯಾಖ್ಯಾನ ಮಾಡಲಾಗಿದೆ. ಸಂಸ್ಕಾರ ಹೊಸ ಅಲೆಯ ಮೊದಲ ಕನ್ನಡ ಚಿತ್ರ. ಸಂಸ್ಕಾರ ಚಿತ್ರದ ಮುಂಚಿನ ಸಿನಿಮಾಗಳಲ್ಲಿ ಭಾವುಕ ನೆಲೆಯಲ್ಲಿ ಅಥವಾ ಭಾವನಾತ್ಮಕವಾಗಿ ಉದ್ರೇಕಿಸುವ ಕಥೆಯನ್ನು ಮಾತ್ರ ಕಟ್ಟಲಾಗುತ್ತಿತ್ತು. ಭಾವನಾತ್ಮಕವಾಗಿ ಉದ್ರೇಕಿಸದೇ ವೈಚಾರಿಕವಾಗಿ ಉದ್ರೇಕಿಸುವ ಕಥೆಯನ್ನು ಕಟ್ಟುವ ಟ್ರೆಂಡ್ ಹುಟ್ಟುಹಾಕಿದ್ದು ಸಂಸ್ಕಾರ. ಆದ್ದರಿಂದ 'ಸಂಸ್ಕಾರ' ಚಿತ್ರವನ್ನು ಕನ್ನಡದ ಮೊದಲ ಹೊಸ ಅಲೆಯ ಸಿನಿಮಾ ಎಂದು ಗುರುತಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಕನ್ನಡ ಚಿತ್ರರಂಗದ ಇಂದಿನ ಪರಿಸ್ಥಿತಿಯ ಬಗ್ಗೆ ತಿಳಿಸಿದ ಅವರು, ಇವತ್ತಿನ ಕನ್ನಡ ಸಿನಿಮಾಗಳು ಕನ್ನಡತನವನ್ನು ಎತ್ತಿ ಹಿಡಿಯುತ್ತಿವೆ. ಆದರೂ ತಮಿಳು ಮತ್ತು ತೆಲುಗು ಚಿತ್ರಗಳ ಪ್ರಭಾವ ಕನ್ನಡ ಚಿತ್ರಗಳ ಮೇಲೆ ಸಾಕಷ್ಟು ಉಂಟಾಗಿದೆ ಎನ್ನುವುದನ್ನೂ ಒಪ್ಪಿಕೊಳ್ಳಲೇಬೇಕಾಗಿದೆ ಎಂದರು.