ಹೈದರಾಬಾದ್: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಶೀಘ್ರದಲ್ಲೇ ತಾಯಿ ಆಗಲಿದ್ದಾರೆ. ಪತಿ ರಣ್ವೀರ್ ಸಿಂಗ್ ಹಾಗು ಕುಟುಂಬಸ್ಥರೊಂದಿಗೆ ಆಗಾಗ್ಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಗರ್ಭಾವಸ್ಥೆಯ ಅಂತಿಮ ದಿನಗಳನ್ನು ನಟಿ ಎಂಜಾಯ್ ಮಾಡುತ್ತಿರುವಂತೆ ತೋರುತ್ತಿದೆ.
ಕಳೆದ ರಾತ್ರಿ ಬಾಲಿವುಡ್ ತಾರೆ ತಮ್ಮ ಮಾವ ಜಗಜಿತ್ ಸಿಂಗ್ ಭವ್ನಾನಿ, ಅತ್ತೆ ಅಂಜು ಭವ್ನಾನಿ ಮತ್ತು ರಿತಿಕಾ ಭವ್ನಾನಿ ಸೇರಿದಂತೆ ಇತರೆ ಕುಟುಂಬಸ್ಥರೊಂದಿಗೆ ಕಾಣಿಸಿಕೊಂಡರು. ಮನೆಯಿಂದ ಹೊರಗೆ ಬಂದು ಐಷಾರಾಮಿ ಹೋಟೆಲ್ನಲ್ಲಿ ಡಿನ್ನರ್ ಮಾಡಿದ್ದಾರೆ. ಹೀಗೆ ಹೊರಬರುವಾಗ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದ್ದು, ವಿಡಿಯೋಗಳು ಸದ್ದು ಮಾಡುತ್ತಿವೆ.
ಭವ್ನಾನಿ ಕುಟುಂಬ ರೆಸ್ಟೋರೆಂಟ್ ಪ್ರವೇಶಿಸುತ್ತಿರುವ, ಹೊರಬರುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ದೀಪಿಕಾ ಬ್ಲ್ಯಾಕ್ ಬಾಡಿಕಾನ್ ಧರಿಸಿದ್ದರು. ಅದಕ್ಕೆ ತಕ್ಕ ಬ್ಲ್ಯಾಕ್ ಕೋಟ್ ಧರಿಸಿ ಬಹಳ ಸೊಗಸಾಗಿ ಕಾಣಿಸಿಕೊಂಡಿದ್ದಾರೆ. ತುಂಬು ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ ಹೈ ಹೀಲ್ಸ್ ಬಿಟ್ಟು, ಸಿಂಪಲ್ ವೈಟ್ ಶೂಸ್ ಧರಿಸಿದ್ದರು. ಕೇಶರಾಶಿಯನ್ನು ಕಟ್ಟದೇ ಫ್ರೀಯಾಗಿ ಬಿಟ್ಟಿದ್ದು, ನಟಿಯ ಮೊಗದಲ್ಲಿ ತಾಯಿಯಾಗುತ್ತಿರುವ ಕಳೆ ಎದ್ದು ಕಾಣುತ್ತಿತ್ತು.
ರಣ್ವೀರ್ ಕುಟುಂಬ ಸದಸ್ಯರೆಲ್ಲರೂ ಕೂಡಾ ಬ್ಲ್ಯಾಕ್ ಔಟ್ಫಿಟ್ನಲ್ಲಿದ್ದರು. ಡಿನ್ನರ್ ಡೇಟ್ನಲ್ಲಿ ರಣ್ವೀರ್ ಸಿಂಗ್ ಇರಲಿಲ್ಲ. ಆದಾಗ್ಯೂ ಅವರ ಕುಟುಂಬಸ್ಥರೆಲ್ಲರೂ ದೀಪಿಕಾರನ್ನು ಕಾರಿನವರೆಗೂ ಕರೆತಂದರು. ತಾಯಿಯಾಗುತ್ತಿರುವ ನಟಿಯ ಸುರಕ್ಷತೆಯನ್ನು ಅವರು ಖಚಿತಪಡಿಸಿಕೊಂಡರು. ಅಭಿಮಾನಿಗಳು ತಮ್ಮ ಮೆಚ್ಚಿನ ತಾರೆಗೆ ಪ್ರೀತಿಯ ಧಾರೆಯೆರೆಯುತ್ತಿದ್ದಾರೆ. ನಟಿಯ ಡೆಲಿವರಿ ಡೇಟ್ ಸಮೀಪದಲ್ಲಿದೆ ಎಂಬುದು ಗಮನಿಸಬೇಕಾದ ಸಂಗತಿ.